ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಅವರು, ಶಾಸಕರ ಭವನದಲ್ಲೂ ಇಡ್ಲಿ, ದೋಸೆ ಸಿಗುತ್ತಿಲ್ಲ ಎಂದು ಉಪಹಾರದ ಸಮಸ್ಯೆಯನ್ನು ಪ್ರಸ್ತಾಪಿಸಿದರು. ಗ್ಯಾಸ್ ಕೊರತೆಯಿಂದ ಈ ಸಮಸ್ಯೆ ಉಂಟಾಗಿದೆ ಎಂದು ಚರ್ಚೆಯಾದಾಗ, ಸಭಾಪತಿಗಳು ಹಾಸ್ಯಮಯವಾಗಿ ತಿಂಡಿ ತಿಂದು ಬರಲು ಸಮಯಾವಕಾಶ ನೀಡಿದರು.

ವಿಧಾನ ಪರಿಷತ್ (ಮಾ.19): ಉಪಹಾರ ಸೇವಿಸಲು ಇಡ್ಲಿ, ದೋಸೆ ಸಿಗುತ್ತಿಲ್ಲ. ಶಾಸಕರ ಭವನದಲ್ಲೇ ಸಿಕ್ಕಿಲ್ಲ. ಶಾಸಕರ ಪರಿಸ್ಥಿತಿಯೇ ಹೀಗಾದರೆ ಜನರ ಪರಿಸ್ಥಿತಿ ಹೇಗೆ ಎಂದು ಕಾಂಗ್ರೆಸ್‌ ಸದಸ್ಯ ಐವನ್ ಡಿಸೋಜಾ ಪ್ರಶ್ನಿಸಿದರು.

ಕಲಾಪ ಆರಂಭವಾಗುತ್ತಿದ್ದಂತೆ ಡಿಸೋಜಾ ಅವರು, ಹೋಟೆಲ್​​ಗಳಲ್ಲಿ ಇಂದು ತಿಂಡಿ ಸಿಗುತ್ತಿಲ್ಲ. ಶಾಸಕರ ಭವನದಲ್ಲಿಯೇ ಇಡ್ಲಿ, ದೋಸೆ ಸಿಗುತ್ತಿಲ್ಲ. ಸಮಸ್ಯೆ ಎಲ್ಲಿವರೆಗೂ ಇರಲಿದೆ, ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:Ugadi Festival 2026: ಯುಗಾದಿ ಎಂದರೆ ಕೇವಲ ಹಬ್ಬವಲ್ಲ, ಹೊಸ ವರ್ಷದ ಶುಭಾರಂಭ, ಬೇವು-ಬೆಲ್ಲದ ಆರೋಗ್ಯ ಮಹತ್ವ ತಿಳಿಯಿರಿ

ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಇಡ್ಲಿ, ವಡಾ ಸಿಗುತ್ತಿಲ್ಲವೆಂದು ಸದಸ್ಯರು ದೂರುತ್ತಿದ್ದಾರೆ. ಹೀಗಾಗಿ ಇಡ್ಲಿ ತರಿಸಿಕೊಳ್ಳುವ ವ್ಯವಸ್ಥೆ ಮಾಡಿಸಿ ಎಂದು ಹೇಳಿದಾಗ ಸಚಿವ ಜಮೀರ್ ಅಹಮದ್ ಪ್ರತಿಕ್ರಿಯಿಸಿ, ಇಡ್ಲಿ ಸಿಗುತ್ತಿಲ್ಲ ಎಂದು ಹೇಳಿಲ್ಲ. ಅಡುಗೆ ಮಾಡಲು ಗ್ಯಾಸ್ ಸಿಗುತ್ತಿಲ್ಲ ಇಂದು ಹೇಳುತ್ತಿದ್ದಾರೆ ಎಂದರು. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ, 10 ನಿಮಿಷ ಕಾಲಾವಕಾಶ ಕೊಡ್ತೇನೆ, ತಿಂಡಿ ತಿಂದು ಬನ್ನಿ ಎಂದು ನಗುತ್ತಾ ಹೇಳಿದರು.