PSI Recruitment Scam: ಪೊಲೀಸ್ ನೇಮಕಾತಿ ವಿಭಾಗದ ಡಿವೈಎಸ್ಪಿ ಬಂಧನ
* 12 ವರ್ಷದಿಂದ ನೇಮಕ ವಿಭಾಗದಲ್ಲಿ ಬೇರೂರಿದ್ದ ಶಾಂತಕುಮಾರ್
* ಸ್ಟ್ರಾಂಗ್ ರೂಂನಲ್ಲಿ ಒಎಂಆರ್ ಶೀಟ್ ತಿದ್ದಿದ ಕೇಸ್ ಮಾಸ್ಟರ್‌ಮೈಂಡ್
* ನೇಮಕಾತಿ ಹಗರಣದಲ್ಲಿ ನೇಮಕಾತಿ ವಿಭಾಗದ ಶಾಂತಕುಮಾರ್ ಪಾತ್ರದ ಬಗ್ಗೆ ವರದಿ ಮಾಡಿದ್ದ ಕನ್ನಡಪ್ರಭ
ಬೆಂಗಳೂರು(ಮೇ.13): ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣ(PSI Recruitment Scam) ಸಂಬಂಧ ರಾಜ್ಯ ಅಪರಾಧ ತನಿಖಾ ದಳವು (CID) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪರೀಕ್ಷಾ ಅಕ್ರಮ ಜಾಲದ ‘ಮಾಸ್ಟರ್ ಮೈಂಡ್’ ಎನ್ನಲಾದ ನೇಮಕಾತಿ ವಿಭಾಗದ ಹಿಂದಿನ ಡಿವೈಎಸ್ಪಿ ಶಾಂತಕುಮಾರ್(Shantkumar) ಸೇರಿದಂತೆ ಇಬ್ಬರನ್ನು ಗುರುವಾರ ಬಂಧಿಸಿದೆ.
ಡಿವೈಎಸ್ಪಿ ಶಾಂತಕುಮಾರ್ ಬಂಧನ ಬೆನ್ನಲ್ಲೇ ಈಗ ನೇಮಕಾತಿ ವಿಭಾಗದ ಹಿಂದಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮೃತ್ ಪಾಲ್ ಅವರಿಗೆ ಭೀತಿ ಹೆಚ್ಚಿದ್ದು, ಪ್ರಕರಣದಲ್ಲಿ ಆರೋಪಿತ ಡಿವೈಎಸ್ಪಿ ನೀಡುವ ಅಧಿಕೃತ ಹೇಳಿಕೆ ಆಧರಿಸಿ ಮುಂದಿನ ‘ಬೇಟೆ’ ಬಗ್ಗೆ ಸಿಐಡಿ ಅಧಿಕಾರಿಗಳು ನಿರ್ಧರಿಸಲಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಬಂಧಿತರ ಸಂಖ್ಯೆ ಆರಕ್ಕೇರಿದೆ.
ಮಾಜಿ ಪ್ರಧಾನಿ ದೇವೇಗೌಡರ ಭದ್ರತೆಯಲ್ಲಿದ್ದವನ ‘ಪಿಎಸ್‌ಐ’ ಕಳ್ಳಾಟ
ಪಿಎಸ್‌ಐ ಪರೀಕ್ಷೆ ಬರೆದಿದ್ದ ಕೆಲ ಅಭ್ಯರ್ಥಿಗಳ(Candidates) ಒಎಂಆರ್ ಶೀಟ್(OMR Sheet) ಅನ್ನು ನೇಮಕಾತಿ ವಿಭಾಗದ ಸ್ಟ್ರಾಂಗ್‌ರೂಮ್‌ನಲ್ಲಿ ತಿದ್ದಿದ ಹಾಗೂ ಪರೀಕ್ಷೆಗೂ ಮುನ್ನ ತಮ್ಮ ಸಂಪರ್ಕದಲ್ಲಿದ್ದ ಅಭ್ಯರ್ಥಿಗಳು ಒಂದೇ ಕಡೆ ಇರುವಂತೆ ಅಕ್ರಮವಾಗಿ ಪರೀಕ್ಷಾ ಪ್ರವೇಶ ಪತ್ರಗಳನ್ನು (ಹಾಲ್ ಟಿಕೆಟ್) ವಿತರಿಸಿದ ಗಂಭೀರ ಆರೋಪ ಶಾಂತಕುಮಾರ್ ಮೇಲೆ ಬಂದಿತ್ತು. ಪರೀಕ್ಷೆ ಮುಗಿದ ಬಳಿಕ ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಮ್‌ನಲ್ಲಿ ಇಡಲಾಗಿದ್ದ ಒಎಂಆರ್ ಶೀಟ್‌ಗಳ ಪೈಕಿ ತಮಗೆ ಹಣ ಸಂದಾಯ ಮಾಡಿದ್ದವರ ಉತ್ತರ ಪತ್ರಿಕೆಯನ್ನು ಡಿವೈಎಸ್ಪಿ ತಂಡ ತಿದ್ದಿ ಸಹಕರಿಸಿತ್ತು ಎಂದು ಮೂಲಗಳು ಹೇಳಿವೆ.
ತಮಗೆ ಹಣ ಕೊಟ್ಟ ಅಭ್ಯರ್ಥಿಗಳು ಒಂದೇ ಕಡೆ ಇರುವಂತೆ ಹಾಲ್ ಟಿಕೆಟ್ ಹಂಚಿಕೆ ಹಾಗೂ ಪರೀಕ್ಷೆ ಮುಗಿದ ಬಳಿಕ ಆ ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳನ್ನು ಸ್ಟ್ರಾಂಗ್ ರೂಮ್‌ನಲ್ಲಿ ಶಾಂತಕುಮಾರ್ ತಿದ್ದಿ ನೆರವಾಗಿದ್ದರು. ಇದಕ್ಕಾಗಿ ತಲಾ ಅಭ್ಯರ್ಥಿಯಿಂದ 30 ರಿಂದ 40 ಲಕ್ಷ ರು ಸುಲಿಗೆ ಮಾಡಿದ್ದರು ಎಂಬ ಆರೋಪ ಬಂದಿದೆ.
ಈ ಪ್ರಕರಣ ಸಂಬಂಧ ನೋಟಿಸ್ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿದ್ದ ಡಿವೈಎಸ್ಪಿ ಶಾಂತಕುಮಾರ್ ಹಾಗೂ ಅವರ ಆಪ್ತ ನಗರ ಸಶಸ್ತ್ರ ಮೀಸಲು ಪಡೆಯ (RSI) ಸಬ್ ಇನ್ಸ್‌ಪೆಕ್ಟರ್ ಲೋಕೇಶಪ್ಪ ಅವರನ್ನು ಸುದೀರ್ಘವಾಗಿ ವಿಚಾರಣೆ ನಡೆಸಿದ ಸಿಐಡಿ, ಕೊನೆಗೆ ಇಬ್ಬರನ್ನೂ ಬಂಧನಕ್ಕೊಳಪಡಿಸಿತು. ನಂತರ ಮಧ್ಯಾಹ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆ ಸಲುವಾಗಿ 9 ದಿನ ವಶಕ್ಕೆ ಪಡೆದಿದೆ.
ನೇಮಕಾತಿ ವಿಭಾಗದಲ್ಲೇ 12 ವರ್ಷ ಠಿಕಾಣಿ:
2006ರಲ್ಲಿ ಸಶಸ್ತ್ರ ಮೀಸಲು ಸಬ್ ಇನ್ಸ್‌ಪೆಕ್ಟರ್ (ಆರ್‌ಎಸ್‌ಐ) ಆಗಿ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದ ಶಾಂತಕುಮಾರ್, 2010ರಲ್ಲಿ ಅಂದಿನ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಕೃಪೆಯಿಂದ ನೇಮಕಾತಿ ವಿಭಾಗಕ್ಕೆ ಎರವಲು ಸೇವೆ (ಓಓಡಿ) ಮೇರೆಗೆ ನಿಯೋಜನೆಗೊಂಡಿದ್ದರು. ಅಂದಿನಿಂದ ಇನ್ಸ್‌ಪೆಕ್ಟರ್ ಹಾಗೂ ಡಿವೈಎಸ್ಪಿ ಹೀಗೆ ಮುಂಬಡ್ತಿ ಪಡೆದು ನೇಮಕಾತಿ ವಿಭಾಗದಲ್ಲೇ 12 ವರ್ಷ ಸುದೀರ್ಘವಾಗಿ ಅವರು ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಪಿಎಸ್‌ಐ ನೇಮಕಾತಿ ಅಕ್ರಮ ಬೆಳಕಿಗೆ ಬಂದ ನಂತರ ಓಓಡಿ ರದ್ದುಗೊಳಿಸಿ ನೇಮಕಾತಿ ವಿಭಾಗದಿಂದ ಆಂತರಿಕ ಭದ್ರತಾ ವಿಭಾಗ (ISD)ಕ್ಕೆ ಶಾಂತಕುಮಾರ್ ಅವರನ್ನು ಮರಳಿ ಸರ್ಕಾರ ನಿಯೋಜಿಸಿತ್ತು.
ದಶಕದ ಕಾಲ ನೇಮಕಾತಿ ವಿಭಾಗದಲ್ಲೇ ತಳವೂರಿದ್ದ ಶಾಂತಕುಮಾರ್ ‘ನೇಮಕಾತಿ ಪ್ರಕ್ರಿಯೆ’ಯಲ್ಲಿ ಅನುಭವಿಯಾಗಿದ್ದರು. ಅದರಲ್ಲೂ ತಾಂತ್ರಿಕತೆ ಬಳಕೆಗೆ ಬಗ್ಗೆ ‘ವಿಶೇಷ’ ಪರಿಣತಿ ಹೊಂದಿದ್ದ ಅವರ ಮೇಲೆ ಹಿರಿಯ ಅಧಿಕಾರಿಗಳಿಗೆ ಭಾರಿ ‘ವಿಶ್ವಾಸ’ ಇತ್ತು. ಈ ವಿಶ್ವಾಸವೇ ಪರೀಕ್ಷಾ ಅಕ್ರಮಗಳಿಗೆ ಕಾರಣವಾಯಿತು ಎನ್ನಲಾಗಿದೆ.
ದಿವ್ಯಾಳ ಗಂಡನಿಗೆ, ಆರ್.ಡಿ ಅಣ್ಣನಿಗೆ ಜೈಲೇ ಗತಿ, 13 ಆರೋಪಿಗಳ ಬೇಲ್ ರಿಜೆಕ್ಟ್
ಹಾಲ್ ಟಿಕೆಟ್, ಒಎಂಆರ್ ಶೀಟ್ ಬಿಕರಿ:
ಪಿಎಸ್‌ಐ ನೇಮಕಾತಿಯ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಶಾಂತಕುಮಾರ್‌ಗೆ ಇಡೀ ನೇಮಕಾತಿ ವ್ಯವಸ್ಥೆಯ ಕಾರ್ಯನಿರ್ವಹಣೆ ಬಗ್ಗೆ ಅರಿವಿತ್ತು. ಅಲ್ಲದೆ ಅಭ್ಯರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರ ಹಂಚಿಕೆ, ಪರೀಕ್ಷಾ ಕೇಂದ್ರಗಳ ಆಯ್ಕೆ, ಪ್ರಶ್ನೆ ಪತ್ರಿಕೆ ಸಿದ್ಧತೆ ಹಾಗೂ ಒಎಂಆರ್ ಶೀಟ್ ಸಂಗ್ರಹ ಎಲ್ಲದರ ಬಗ್ಗೆ ಸಹ ಡಿವೈಎಸ್ಪಿ ಶಾಂತಕುಮಾರ್ ಉಸ್ತುವಾರಿ ನೋಡಿದ್ದರು. ನೇಮಕಾತಿ ವಿಭಾಗದಲ್ಲಿ ಎಡಿಜಿಪಿ ಬಳಿಕ ಡಿಐಜಿ ಹುದ್ದೆ ಇದೆ. ಪ್ರಸ್ತುತ ಡಿಐಜಿ ಹುದ್ದೆ ಖಾಲಿ ಇದೆ. ಹೀಗಾಗಿ ಎಡಿಜಿಪಿ ಬಳಿಕ ಹಿರಿಯ ಅಧಿಕಾರಿಯಾಗಿದ್ದ ಶಾಂತಕುಮಾರ್, ನೇಮಕಾತಿ ವಿಚಾರದಲ್ಲಿ ಹೆಚ್ಚಿನ ಪಾತ್ರವಹಿಸಿದ್ದರು ಎಂದು ಮೂಲಗಳು ಹೇಳಿವೆ.
ಎಲ್ಲ ಪರೀಕ್ಷೆಯಲ್ಲೂ ಶಾಂತಕುಮಾರ್ ಪಾತ್ರ?:
ಪಿಎಸ್‌ಐ ಮಾತ್ರವಲ್ಲದೆ ಈ ಹಿಂದೆ ನಡೆದಿರುವ ಪೊಲೀಸ್ ನೇಮಕಾತಿಯಲ್ಲಿ ಕೂಡ ಡಿವೈಎಸ್ಪಿ ಶಾಂತಕುಮಾರ್ ಅಕ್ರಮ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ನೇಮಕಾತಿ ವಿಭಾಗದಲ್ಲೇ ತನ್ನದೇ ಕೂಟ ಕಟ್ಟಿಕೊಂಡಿದ್ದ ಡಿವೈಎಸ್ಪಿ, ಡೀಲ್ ಕುದುರಿಸಿ ವ್ಯವಸ್ಥಿತವಾಗಿ ಅಕ್ರಮ ನಡೆಸುತ್ತಿದ್ದರು ಎನ್ನಲಾಗಿದೆ.