ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು 90 ವರ್ಷದ ವೃದ್ಧೆ ಸೇರಿದಂತೆ ರೈತರ ಮೇಲೆ ದೌರ್ಜನ್ಯ ಎಸಗಿ, ಅವರ ಪೈಪ್‌ಲೈನ್‌ಗಳನ್ನು ಧ್ವಂಸಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಖಂಡಿಸಿ ನೂರಾರು ರೈತರು ರಸ್ತೆಗಿಳಿದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಚಿಕ್ಕೋಡಿ(ಜ.12): ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ರೈತರ ಮೇಲೆ ಅಮಾನವೀಯವಾಗಿ ದಬ್ಬಾಳಿಕೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಧಿಕಾರಿಗಳ ಈ ನಡವಳಿಕೆಯಿಂದ ಆಕ್ರೋಶಗೊಂಡ ನೂರಾರು ರೈತರು ರಸ್ತೆಗಿಳಿದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

90ರ ವೃದ್ಧೆ ಯಲ್ಲವ್ವನ ಮೇಲೆ ಹಲ್ಲೆ ಆರೋಪ

ರಾಯಬಾಗದ ಕೆಂಪವ್ವನಜಾಲಿ ಗ್ರಾಮದ ರೈತರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ದೌರ್ಜನ್ಯ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ 90 ವರ್ಷದ ವಯೋವೃದ್ಧೆ ಯಲ್ಲವ್ವ ಹಂಜಾನಟ್ಟಿ ಅವರ ಮೇಲೆಯೂ ಅಧಿಕಾರಿಗಳು ಕೈ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ. ವಯಸ್ಸಾದ ಜೀವವನ್ನೂ ನೋಡದೆ ಅಧಿಕಾರಿಗಳು ವಿಕೃತಿ ಮೆರೆದಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಪೈಪ್‌ಲೈನ್ ಧ್ವಂಸ; ಅಧಿಕಾರಿಗಳ ದಬ್ಬಾಳಿಕೆ

ಕೇವಲ ಹಲ್ಲೆಯಷ್ಟೇ ಅಲ್ಲದೆ, ಹೊಲಗಳಿಗೆ ನೀರುಣಿಸಲು ಅಳವಡಿಸಲಾಗಿದ್ದ ರೈತರ ಪೈಪ್‌ಲೈನ್‌ಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಳು ಮಾಡಿದ್ದಾರೆ ಎಂದು ದೂರಲಾಗಿದೆ.

ರಾಯಬಾಗದ ಅಬಾಜಿ ಸರ್ಕಲ್‌ನಲ್ಲಿ ನೂರಾರು ರೈತರ ಪ್ರತಿಭಟನೆ

ಅಧಿಕಾರಿಗಳ ಈ ಕ್ರಮವನ್ನು ಖಂಡಿಸಿ ನೂರಾರು ರೈತರು ರಾಯಬಾಗದ ಪ್ರಮುಖ ಕೇಂದ್ರವಾದ ಅಬಾಜಿ ಸರ್ಕಲ್‌ನಲ್ಲಿ ಜಮಾಯಿಸಿದ್ದಾರೆ. ರಸ್ತೆಯಲ್ಲೇ ಕುಳಿತು ಘೋಷಣೆಗಳನ್ನು ಕೂಗುತ್ತಿರುವ ರೈತರು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

ಹಾಳಾದ ಪೈಪ್‌ಲೈನ್ ಮರುಸ್ಥಾಪನೆ ಮಾಡಿ

ಅಧಿಕಾರಿಗಳು ಕಾನೂನುಬಾಹಿರವಾಗಿ ನಮ್ಮ ಪೈಪ್‌ಲೈನ್ ಹಾಳು ಮಾಡಿದ್ದಾರೆ. ತಕ್ಷಣವೇ ಹಾಳಾದ ಪೈಪ್‌ಲೈನ್‌ಗಳನ್ನು ಮರುಸ್ಥಾಪನೆ ಮಾಡಿಕೊಡಬೇಕು. ಅಲ್ಲಿಯವರೆಗೂ ನಾವು ಪ್ರತಿಭಟನೆ ಕೈಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಬೇಡಿಕೆ ಈಡೇರದಿದ್ದರೆ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.