ಕಳೆದ 3 ವರ್ಷಗಳಲ್ಲಿ ರಾಜ್ಯದ ರೈತರು ಮತ್ತು ಕನ್ನಡಪರ ಹೋರಾಟಗಾರರ ಮೇಲೆ ತಲಾ 41 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನ ಪರಿಷತ್‌ನಲ್ಲಿ ಮಾಹಿತಿ ನೀಡಿದ್ದಾರೆ. ಈ ಪ್ರಕರಣಗಳ ಹಿಂಪಡೆಯುವ ಸರ್ಕಾರದ ಮಾನದಂಡಗಳ ಬಗ್ಗೆಯೂ ವಿವರಿಸಿದ್ದಾರೆ.
ವಿಧಾನ ಪರಿಷತ್ : ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ರೈತರು ಹಾಗೂ ಕನ್ನಡ ಪರ ಹೋರಾಟಗಾರರ ಮೇಲೆ ವಿವಿಧ ಜಿಲ್ಲೆಗಳಲ್ಲಿ ತಲಾ 41 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಬಿಜೆಪಿಯ ಸಿ.ಟಿ.ರವಿ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ರೈತರ ವಿರುದ್ಧ 2023ರಲ್ಲಿ 7, 2024ರಲ್ಲಿ 4 ಹಾಗೂ 2025ರಲ್ಲಿ 30 ಪ್ರಕರಣಗಳು ದಾಖಲು ಮಾಡಲಾಗಿದೆ. ಅದೇ ರೀತಿ ಕನ್ನಡ ಪರ ಹೋರಾಟಗಾರರ ವಿರುದ್ಧ ಮೂರು ವರ್ಷಗಳಲ್ಲಿ 41 ಪ್ರಕರಣ ದಾಖಲಾಗಿದ್ದು, 2023ರಲ್ಲಿ 26, 2024ರಲ್ಲಿ 9 ಹಾಗೂ 2025ರಲ್ಲಿ 6 ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ರೈತರ ವಿರುದ್ಧ ಕೇಸ್ ಜಿಲ್ಲಾವಾರು ಇಂತಿದೆ
2023 ರಲ್ಲಿ, ಬೆಂಗಳೂರು- 2, ತುಮಕೂರು- 4 ಮತ್ತು ಬೆಳಗಾವಿ -1 ಪ್ರಕರಣ ದಾಖಲಾದರೆ, 2024ರಲ್ಲಿ ಬೆಂಗಳೂರು- 1, ದಾವಣಗೆರೆ- 1, ಶಿವಮೊಗ್ಗ- 1, ಕಲಬುರಗಿ -1 ಪ್ರಕರಣ ದಾಖಲಾಗಿದೆ. 2025ರಲ್ಲಿ ಬೆಂಗಳೂರು -2, ತುಮಕೂರು- 13, ರಾಮನಗರ -5, ಮಂಡ್ಯ- 1, ಚಾಮರಾಜನಗರ -1, ಬಾಗಲಕೋಟೆ- 4, ದಾವಣಗೆರೆ- 2, ಬೆಳಗಾವಿ- 1, ಕೊಪ್ಪಳ- 1 ಹೀಗೆ ಒಟ್ಟು 30 ಪ್ರಕರಣ ದಾಖಲಾಗಿದೆ.
ಕನ್ನಡ ಪರ ಹೋರಾಟಗಾರರ ವಿರುದ್ಧ ದಾಖಲಾದ ದೂರುಗಳು ಇಂತಿವೆ
2023ರಲ್ಲಿ ಬೆಂಗಳೂರು- 19, ಬೆಂಗಳೂರು ಜಿಲ್ಲೆ- 1, ರಾಮನಗರ - 1, ದಾವಣಗೆರೆ - 1, ಚಿತ್ರದುರ್ಗ - 4, 2024ರಲ್ಲಿ ಬೆಂಗಳೂರು ನಗರ- 1, ತುಮಕೂರು- 4, ರಾಮನಗರ - 1, ಗದಗ- 1, ಬೀದರ್- 1, ಯಾದಗಿರಿ- 1 2025ರಲ್ಲಿ ಬೆಂಗಳೂರು ನಗರ - 4, ರಾಮನಗರ - 1, ಚಿತ್ರದುರ್ಗ - 1 ಹೀಗೆ ಒಟ್ಟು 41 ಪ್ರಕರಣ ದಾಖಲಾಗಿದೆ.
ಪ್ರಕರಣ ವಾಪಸ್‌ಗೆ ಮಾನದಂಡ:
ಯಾವುದೇ ಪ್ರಕರಣಗಳನ್ನು ವಾಪಸ್ ಪಡೆಯುವ ಮುನ್ನ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಸರ್ಕಾರಿ ವ್ಯಾಜ್ಯಗಳ ಇಲಾಖೆ, ಕಾನೂನು ಇಲಾಖೆಯಿಂದ ಅಭಿಪ್ರಾಯ ಪಡೆದ ನಂತರ ಸಚಿವ ಸಂಪುಟ ಉಪಸಮಿತಿ ಮುಂದೆ ಮಂಡಿಸಲಾಗುತ್ತದೆ. ಈ ಸಮಿತಿ ಅಭಿಯೋಜನೆಯಿಂದ ಹಿಂಪಡೆಯಲು ಸೂಕ್ತ ಪ್ರಕರಣವೆಂದು ಶಿಫಾರಸು ಮಾಡಿದವುಗಳನ್ನು ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು. ಸಂಪುಟ ಅನುಮೋದಿಸಿದ ಪ್ರಕರಣಗಳನ್ನು ಹಿಂಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.


