ಬಹುನಿರೀಕ್ಷಿತ ಗೃಹ ಜ್ಯೋತಿ ಯೋಜನೆಗೆ ಆಗಸ್ಟ್ 5ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಆಗಸ್ಟ್ 5ರಂದು ಕಲಬುರಗಿಯ ಎನ್‌ವಿ ಮೈದಾನದಲ್ಲಿ ಬಹುನಿರೀಕ್ಷಿತ 'ಗೃಹ ಜ್ಯೋತಿ' ಯೋಜನೆಗೆ ಚಾಲನೆ ನೀಡಲಿದ್ದಾರೆ.
ವರದಿ: ರಕ್ಷಾ ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಆ.1): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಆಗಸ್ಟ್ 5ರಂದು ಕಲಬುರಗಿಯ ಎನ್‌ವಿ ಮೈದಾನದಲ್ಲಿ ಬಹುನಿರೀಕ್ಷಿತ 'ಗೃಹ ಜ್ಯೋತಿ' ಯೋಜನೆಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಬಗ್ಗೆ ವಿವರ ನೀಡಲು ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಇಂಧನ ಸಚಿವ ಕೆ.ಜೆ. ಜಾರ್ಜ್ ಕರ್ನಾಟಕ ಸರ್ಕಾರದ 5 ಪ್ರಮುಖ ಭರವಸೆಗಳ ಪೈಕಿ ಒಂದಾದ ಗೃಹ ಜ್ಯೋತಿ ಯೋಜನೆಗೆ ಮುಖ್ಯಮಂತ್ರಿಯವರು ಕಲಬುರಗಿಯಲ್ಲಿ ಚಾಲನೆ ನೀಡಲಿದ್ದಾರೆ. ರಾಜ್ಯಸಭೆಯ ಪತ್ರಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಐಟಿ ಬಿಟಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಿರಿಯ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದರು.
ಮಧ್ಯಮ ವರ್ಗದ ಜನರ ಜೀವನ ಸುಧಾರಣೆ ಮಾಡುವ ಮಹಾತ್ವಾಕಾಂಕ್ಷಿ ಯೋಜನೆ ಇದು. 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವ ಯೋಜನೆ ಕೇವಲ ವಿದ್ಯುತ್ ಶುಲ್ಕದ ಕಡಿಮೆ ಮಾಡುತ್ತಿಲ್ಲ, ಬದಲಾಗಿ ಕುಟುಂಬದ ಆರ್ಥಿಕ ಪ್ರಗತಿಯ ಮೂಲಕ ಸಾಮಾಜಿಕ ಭದ್ರತೆ ನೀಡಲಿದೆ ಎಂದು ಜಾರ್ಜ್ ವಿವರಿಸಿದರು.
Gruha Jyothi Scheme: ಮೊದಲ ಶೂನ್ಯ ಕರೆಂಟ್ ಬಿಲ್ ವಿತರಣೆ: ಗ್ರಾಹಕರು ಫುಲ್ ಖುಷ್
ಗೃಹ ಜ್ಯೋತಿ ಯೋಜನೆಯ ಅನುಷ್ಠಾನದ ಮೊದಲ ತಿಂಗಳಿನಲ್ಲೇ ಸುಮಾರು 1.42 ಕೋಟಿ ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ. ಜುಲೈ 27ರ ಮೊದಲು ಅರ್ಜಿ ಸಲ್ಲಿಸಿದವರು ಮಾತ್ರ ಜುಲೈ ತಿಂಗಳ ವಿದ್ಯುತ್ ಬಳಕೆಯ ಶುಲ್ಕದಲ್ಲಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಜುಲೈ 27ರ ನಂತರ ಅರ್ಜಿ ಸಲ್ಲಿಸಿದವರು ಆಗಸ್ಟ್‌ನಲ್ಲಿ ಅವರ ಬಳಕೆಯ ಆಧಾರದ ಮೇಲೆ ಸೆಪ್ಟೆಂಬರ್‌ನ ಬಿಲ್ಲಿಂಗ್‌ನಲ್ಲಿ ಪ್ರಯೋಜನ ಪಡೆಯುತ್ತಾರೆ,"ಎಂದರು.
ಯೋಜನೆಗೆ ನೋಂದಾಯಿಸಿಕೊಳ್ಳಲು ಯಾವುದೇ ಅಂತಿಮ ದಿನಾಂಕ ಘೋಷಿಸಿಲ್ಲ. ಯಾವುದೇ ಸಮಯದಲ್ಲಿ ನೋಂದಾಯಿಸಿಕೊಂಡರೂ ಅದರ ನಂತರದ ತಿಂಗಳಿನಿಂದ ಪ್ರಯೋಜನ ಪಡೆಯಬಹುದು. 1.42 ಕೋಟಿ ಅರ್ಜಿದಾರರ ಪೈಕಿ ಸುಮಾರು 18 ಲಕ್ಷ ಮಂದಿ 'ಭಾಗ್ಯ ಜ್ಯೋತಿ', ಕುಟೀರ ಜ್ಯೋತಿ' ಮತ್ತು 'ಅಮೃತ್ ಜ್ಯೋತಿ' ಯಂತಹ ಹಾಲಿ ಯೋಜನೆಗಳ ಫಲಾನುಭವಿಗಳು,"ಎಂದು ಅವರು ತಿಳಿಸಿದರು.
2.14 ಕೋಟಿ ಗೃಹಬಳಕೆದಾರರ ಮಾಸಿಕ ವಿದ್ಯುತ್ ಬಳಕೆಯ ಅಂದಾಜು ನಿರ್ಧರಿಸಲು ಈಗಾಗಲೇ ಒಂದು ವರ್ಷದ ವಿದ್ಯುತ್ ಬಳಕೆಯ ಸರಾಸರಿ ಲೆಕ್ಕಾಚಾರ ಮಾಡಲಾಗಿದೆ. 2022- 2023 ಹಣಕಾಸು ವರ್ಷದ ಸರಾಸರಿ ಬಳಕೆಯನ್ನು ಪರಿಗಣಿಸಿ, ಪ್ರತಿ ಗ್ರಾಹಕರ ಸರಾಸರಿ ಬಳಕೆಯ ಮೇಲೆ ಹೆಚ್ಚುವರಿ 10 ಪ್ರತಿಶತವನ್ನು ನೀಡುವ ಮೂಲಕ ಮಾಸಿಕ ವಿದ್ಯುತ್ ಬಳಕೆಯ ಅಂದಾಜು ನಿರ್ಧರಿಸಲಾಗುತ್ತದೆ. ಆದಾಗ್ಯೂ, ಗರಿಷ್ಠ ಉಚಿತ ವಿದ್ಯುತ್ ಬಳಕೆಯ ಮಿತಿಯನ್ನು 200 ಯುನಿಟ್‌ಗಳಿಗೆ ನಿರ್ಬಂಧಿಸಲಾಗಿದೆ," ಎಂದರು.
ಕಾಂಗ್ರೆಸ್‌ನಲ್ಲಿ ಮತ್ತೆ ಶಾಸಕರ ಕೆಂಗಣ್ಣಿಗೆ ಗುರಿಯಾದ ಗೃಹ ಸಚಿವ ಪರಮೇಶ್ವರ್: ರಾಯರೆಡ್ಡಿ ಆಕ್ರೋಶ
ಸರಾಸರಿ ಬಳಸುವ ಯೂನಿಟ್ ವಿದ್ಯುತ್ 200 ಯೂನಿಟ್‌ಗಳಿಗಿಂತ ಕಡಿಮೆಯಿದ್ದರೆ, ಮನೆಯ ಗ್ರಾಹಕರು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಸರಾಸರಿಗಿಂತ ಹೆಚ್ಚಿನ ಯೂನಿಟ್ ಬಳಸಿದರೆ, ಹೆಚ್ಚುವರಿ ಯೂನಿಟ್‌ಗೆ ಮಾತ್ರ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ, 200ಕ್ಕೂ ಹೆಚ್ಚು ಯೂನಿಟ್ ಬಳಸಿದರೆ ಪೂರ್ಣ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಇಂಧನ, ಮೂಲಸೌಕರ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಪಂಂಕಜ್ ಕುಮಾರ್ ಪಾಂಡೆ, ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಗೃಹ ಜ್ಯೋತಿ ಯೋಜನೆಯ ಪ್ರಮುಖ ವಿವರಗಳು:
• ರಾಜ್ಯದ ಎಲ್ಲಾ ಗೃಹಬಳಕೆದಾರರಿಗೆ 200 ಯೂನಿಟ್‌ಗಳವರೆಗಿನ ವಿದ್ಯುತ್ ಬಳಕೆ ಉಚಿತ.
• 2023ರ ಆಗಸ್ಟ್‌ನಲ್ಲಿ 'ಗೃಹ ಜ್ಯೋತಿ' ಯೋಜನೆಯಿಂದ 1.42 ಕೋಟಿ ಕುಟುಂಬಗಳಿಗೆ ಲಾಭ.
• ಈ ಯೋಜನೆಯು ವಾಣಿಜ್ಯ ಗ್ರಾಹಕರಿಗೆ ಅನ್ವಯಿಸುವುದಿಲ್ಲ.
• 2022- 2023ರ ಹಣಕಾಸು ವರ್ಷದ ಸರಾಸರಿ ವಿದ್ಯುತ್ ಬಳಕೆಯನ್ನು ಗಣನೆಗೆ ತೆಗೆದುಕೊಂಡು ಪ್ರತಿ ಗ್ರಾಹಕರ ಸರಾಸರಿ ಬಳಕೆಯ ಮೇಲೆ ಹೆಚ್ಚುವರಿ 10 ಪ್ರತಿಶತವನ್ನು ಮಾಸಿಕ ವಿದ್ಯುತ್ ಬಳಕೆಯ ಅಂದಾಜು ನಿರ್ಧರಿಸಲಾಗುತ್ತದೆ.
• ಗರಿಷ್ಠ ಉಚಿತ ವಿದ್ಯುತ್ ಬಳಕೆಯ ಮಿತಿಯನ್ನು 200 ಯುನಿಟ್‌ಗಳಿಗೆ ನಿರ್ಬಂಧಿಸಲಾಗಿದೆ.
• ಪ್ರತಿ ಬಳಕೆದಾರರಿಗೆ ನಿಗದಿಪಡಿಸಲಾದ ತಿಂಗಳ ಸರಾಸರಿ ಯೂನಿಟ್‌ಗೆ ಅನುಗುಣವಾಗಿ ವಿದ್ಯುತ್ ಬಳಕೆ ಮಾಡುವ ಗ್ರಾಹಕರ ಬಿಲ್ ಮೊತ್ತ ಶೂನ್ಯವಾಗಿರುತ್ತದೆ.
• ನಿಗದಿತ ಸರಾಸರಿ ಬಳಕೆಯ ಮಿತಿ ಮೀರಿದರೂ 200 ಯೂನಿಟ್ ಒಳಗಿದ್ದರೆ ಹೆಚ್ಚುವರಿ ಯೂನಿಟ್‌ಗೆ ಮಾತ್ರ ಶುಲ್ಕ ಪಾವತಿಸಬೇಕಾಗುತ್ತದೆ.
• ಗ್ರಾಹಕರ ಮಾಸಿಕ ಸರಾಸರಿ ಬಳಕೆಯು 200 ಯುನಿಟ್‌ಗಳನ್ನು ಮೀರಿದರೆ ಬಿಲ್‌ನ ಸಂಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ.
• ಯೋಜನೆಯ ಲಾಭ ಪಡೆಯಲು ಬಯಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬಹುದು.
• ಗ್ರಾಹಕರು ತಮ್ಮ ಆಧಾರ್ ಸಂಖ್ಯೆಗಳನ್ನು ಬಿಲ್‌ನಲ್ಲಿ ನಮೂದಿಸಲಾದ ಗ್ರಾಹಕ ID ಅಥವಾ ಖಾತೆ ID ಯೊಂದಿಗೆ ಲಿಂಕ್ ಮಾಡಬೇಕು.
• ಭಾಗ್ಯ ಜ್ಯೋತಿ/ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಫಲಾನುಭವಿಗಳನ್ನು ಹೊಸದಾಗಿ ಪ್ರಾರಂಭಿಸಲಾದ ಗೃಹ ಜ್ಯೋತಿ ಯೋಜನೆಗೆ ಜೋಡಣೆ ಮಾಡಲಾಗುತ್ತದೆ.
• ಯೋಜನೆಯನ್ನು ಕಾರ್ಯಗತಗೊಳಿಸಲು ಸರ್ಕಾರವು ಗೃಹ ಜ್ಯೋತಿ ಸಬ್ಸಿಡಿ ಮೊತ್ತ ಮತ್ತು FPPAC ಮೊತ್ತವನ್ನು ಎಲ್ಲಾ ESCOM ಗಳಿಗೆ ಮುಂಚಿತವಾಗಿ ಪಾವತಿಸುತ್ತದೆ. ಇಂಧನ ಇಲಾಖೆಗೆ ಇದರಿಂದ ಆರ್ಥಿಕ ಹೊರೆ ಬೀಳದು.