Asianet Suvarna News Asianet Suvarna News

ಮುಖ್ಯಮಂತ್ರಿ ಜನಸ್ಪಂದನ ಕಾರ್ಯಕ್ರಮ ಯಶಸ್ವಿ; ಊಟದ ಸಮಯದಲ್ಲೂ ಅಹವಾಲು ಆಲಿಸಿದ ಸಿಎಂ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ನಡೆಸಿದ ಮೊದಲ ಪೂರ್ಣಾವಧಿ ‘ಜನಸ್ಪಂದನ’ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಸೋಮವಾರ ದಿನವಿಡೀ ಸಾವಿರಾರು ಜನರು ತಮ್ಮ ಅಹವಾಲು ಸಲ್ಲಿಕೆ ಮಾಡಿದರು.

Chief minister siddaramaiah janaspandana program  was a success at bengaluru rav
Author
First Published Nov 28, 2023, 5:22 AM IST

ಬೆಂಗಳೂರು (ನ.28): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ನಡೆಸಿದ ಮೊದಲ ಪೂರ್ಣಾವಧಿ ‘ಜನಸ್ಪಂದನ’ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಸೋಮವಾರ ದಿನವಿಡೀ ಸಾವಿರಾರು ಜನರು ತಮ್ಮ ಅಹವಾಲು ಸಲ್ಲಿಕೆ ಮಾಡಿದರು.

‘ಜನರ ಬಳಿಗೆ ಸರ್ಕಾರ, ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ’ ಎಂಬ ಘೋಷವಾಕ್ಯದಡಿ ಬೆಂಗಳೂರಿನ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸತತವಾಗಿ ಸಾರ್ವಜನಿಕರ ಅಹವಾಲು ಆಲಿಸಿದರು.

ಈ ವೇಳೆ ಬರೋಬ್ಬರಿ 3,812 ಮಂದಿ ಸಾರ್ವಜನಿಕರು ಅಹವಾಲು ಅರ್ಜಿಗಳನ್ನು ಸಲ್ಲಿಸಿದ್ದು, ಇವುಗಳಲ್ಲಿ ಹೃದಯ ಸಮಸ್ಯೆಯುಳ್ಳ ಆರು ತಿಂಗಳ ಹಸಿಗೂಸಿಗೆ ಸ್ಥಳದಲ್ಲೇ 2 ಲಕ್ಷ ರು. ಪರಿಹಾರ, 148 ಮಂದಿ ಅಂಗವಿಕಲರಿಗೆ ತ್ರಿಚಕ್ರ ವಾಹನ ಒದಗಿಸಲು ಸ್ಥಳದಲ್ಲೇ ಆದೇಶ ಹೀಗೆ ನೂರಾರು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದರು.

15 ದಿನದಲ್ಲಿ ಪರಿಹಾರ ಕಲ್ಪಿಸಲು ಸೂಚನೆ:

ಉಳಿದಂತೆ ಇತರೆ ಅರ್ಜಿಗಳ ಸಂಬಂಧ ಪರಿಶೀಲಿಸಿ 15 ದಿನಗಳೊಳಗಾಗಿ ಪರಿಹಾರ ಒದಗಿಸಬೇಕು. ಕಾನೂನುಬದ್ಧವಾಗಿ ಪರಿಹಾರ ಸಾಧ್ಯವಾಗದಿದ್ದರೆ ಕಡ್ಡಾಯವಾಗಿ ಹಿಂಬರಹ ನೀಡಬೇಕು. ಈ ಬಗ್ಗೆ ಇಲಾಖಾವಾರು ಪ್ರಕರಣಗಳ ಬಗ್ಗೆ ಇಲಾಖಾ ಮುಖ್ಯಸ್ಥರು ನಿಗಾ ವಹಿಸಿ ಮುಖ್ಯಮಂತ್ರಿಗಳ ಕಚೇರಿಗೆ ವರದಿ ನೀಡಬೇಕು. ಒಂದು ವೇಳೆ, 15 ದಿನಗಳ ಬಳಿಕವೂ ಅರ್ಜಿಗಳನ್ನು ಬಗೆಹರಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇಂದು ಇಡೀ ದಿನ ಸಿಎಂ ಸಿದ್ದರಾಮಯ್ಯ ಜನತಾ ದರ್ಶನ ವೆಬ್‌ಸೈಟ್, ಮೊಬೈಲ್ ನಿಂದಲೂ ಅಹವಾಲು ಸಲ್ಲಿಸಬಹುದು!

ಒಟ್ಟು 3,812 ಅರ್ಜಿಗಳಲ್ಲಿ 2862 ಅರ್ಜಿಗಳನ್ನು ಈಗಾಗಲೇ ಐಪಿಜಿಆರ್‌ಎಸ್‌ ತಂತ್ರಾಂಶದಲ್ಲಿ (ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆ) ನೋಂದಣಿ ಮಾಡಲಾಗಿದ್ದು, 950 ಅರ್ಜಿಗಳನ್ನು ನೇರವಾಗಿ ಸ್ವೀಕರಿಸಲಾಗಿದೆ. ಇವುಗಳನ್ನೂ ಸಹ ಐಪಿಜಿಆರ್‌ಎಸ್‌ ತಂತ್ರಾಂಶದಲ್ಲಿ ನೋಂದಾಯಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಲು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಮೊದಲೇ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಜನರು ಗೃಹಕಚೇರಿಯತ್ತ ಆಗಮಿಸಿದರು. ಎಲ್ಲರಿಗೂ ತಿಂಡಿ, ನೀರು, ನೆರಳಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಲ್ಪಿಸಲಾಗಿತ್ತು. ವಿಶೇಷಚೇತನರು ಹಾಗೂ ಹಿರಿಯ ನಾಗರೀಕರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ ಆದ್ಯತೆ ಮೇರೆಗೆ ಅರ್ಜಿ ಸ್ವೀಕರಿಸಲಾಯಿತು.

ಊಟದ ಸಮಯದಲ್ಲೂ ಅಹವಾಲು ಆಲಿಕೆ:

ಮಧ್ಯಾಹ್ನದ ಊಟದ ಬಿಡುವಿನಲ್ಲಿ ಊಟಕ್ಕೆಂದು ಮನೆಗೆ ತೆರಳಲು ಎದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಳಿಕ ಜನರ ಸಂಖ್ಯೆ ಇನ್ನೂ ಬಹಳಷ್ಟಿದೆ ಎಂದು ಮಾಹಿತಿ ಲಭ್ಯವಾದ ಕೂಡಲೇ ಅಹವಾಲು ಸ್ವೀಕರಿಸುವ ಟೇಬಲ್ಲಿಗೇ ಊಟ ತರಿಸಿಕೊಂಡು ಅಲ್ಲೇ ಕುಳಿತು ಊಟ ಸೇವಿಸಿದರು. ಜತೆಗೆ ಅಹವಾಲು ಆಲಿಸುವಾಗ ಊಟಕ್ಕೆ ತೆರಳಿದ್ದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಜನರ ಸಮಸ್ಯೆ ಬಗೆಹರಿಯುವವರೆಗೂ ಯಾರೂ ಎಲ್ಲೂ ಹೋಗಬಾರದು ಎಂದು ತಾಕೀತು ಮಾಡಿದರು.

ಇಡೀ ಆಡಳಿತ ಯಂತ್ರ ಹಾಜರು:

ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಹಿಡಿದು ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಕೃಷ್ಣಾದಲ್ಲೇ ಹಾಜರಿದ್ದರು. ಇನ್ನು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯಿತಿ ಸಿಇಒಗಳು ವರ್ಚುಯಲ್‌ ಮೂಲಕ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜನಸ್ಪಂದನ ಕಾರ್ಯಕ್ರಮ ಮುಗಿಯುವವರೆಗೂ ಸಭೆಯಲ್ಲೇ ಹಾಜರಿದ್ದ ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಯ ಸಮಸ್ಯೆ ಬಂದಾಗ ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿ ಮುಖ್ಯಮಂತ್ರಿಗಳ ಆದೇಶಾನುಸಾರ ಕ್ರಮಕ್ಕೆ ಒಪ್ಪಿಗೆ ಸೂಚಿಸುತ್ತಿದ್ದರು. ತನ್ಮೂಲಕ ಇಡೀ ಸರ್ಕಾರದ ಆಡಳಿತ ಯಂತ್ರವೇ ಜನರ ಸಮಸ್ಯೆ ಆಲಿಸಲು ನಿಂತಿತ್ತು.

ಕಂದಾಯ, ವೈದ್ಯಕೀಯ ಸಮಸ್ಯೆಗಳೇ ಹೆಚ್ಚು:

ಜನಸ್ಪಂದನ ಕಾರ್ಯಕ್ರಮದಲ್ಲಿ ವೈದ್ಯಕೀಯ ವೆಚ್ಚ, ಕಂದಾಯ ಹಾಗೂ ಪೊಲೀಸ್ ಇಲಾಖೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳೇ ಹೆಚ್ಚಾಗಿ ಬಂದವು. ಪಹಣಿ, ಖಾತೆ, ಸರ್ವೆ, ಪೋಡಿ ವಿವಾದಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸಿದರು. 6 ತಿಂಗಳ ಹಸಿಗೂಸಿನಿಂದ ಹಿಡಿದು 96 ವರ್ಷದ ವೃದ್ಧರವರೆಗೆ ಅನಾರೋಗ್ಯ ಸಮಸ್ಯೆ ಹೊತ್ತು ಮುಖ್ಯಮಂತ್ರಿಗಳ ಬಳಿಗೆ ಪರಿಹಾರಕ್ಕೆ ಆಗಮಿಸಿದ್ದರು.

ಇನ್ನು ಕೆಲ ಪೋಷಕರು ತಮ್ಮ ಮಕ್ಕಳೇ ಮೋಸ ಮಾಡಿ ಮನೆಯಿಂದ ಹೊರಗೆ ಹಾಕಿದ್ದಾರೆ ಎಂದು ಬಂದರೆ, ಮತ್ತೆ ಕೆಲವರು ಮನೆ ಭೋಗ್ಯದ ಹಣ ವಾಪಸು ಕೊಡಿಸಿ ಎಂಬಂತಹ ತರಹೇವಾರಿ ಸಮಸ್ಯೆಗಳೊಂದಿಗೆ ಬಂದಿದ್ದರು.

ಅನ್ನಭಾಗ್ಯ ಯೋಜನೆ ಅಕ್ಕಿಯಿಂದ ಹೊಟ್ಟೆ ತುಂಬ್ತಿಲ್ಲ: 10 ಕೆಜಿ ಅಕ್ಕಿ ಕೊಡುವಂತೆ ಸಚಿವರ ಮುಂದೆ ಮಂಡಿಯೂರಿದ ರೈತ

ಜನರ ಬಳಿಗೇ ನಡೆದ ಸಿಎಂ:

ಬೆಳಗ್ಗೆಯಿಂದ ಸಂಜೆವರೆಗೆ ಮುಖ್ಯಮಂತ್ರಿಗಳು ಒಂದೇ ಸ್ಥಳದಲ್ಲಿ ಕುಳಿತು ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದರು. ಸಂಜೆ 5 ಗಂಟೆಯಾದರೂ ಸರದಿ ಸಾಲು ಕರಗದ ಹಿನ್ನೆಲೆಯಲ್ಲಿ ಕೊನೆಯ ಹಂತದಲ್ಲಿ ಸಾಲಿನಲ್ಲಿ ನಿಂತಿದ್ದ ಜನರ ಬಳಿಗೆ ತೆರಳಿ ಅರ್ಜಿಗಳನ್ನು ಖುದ್ದು ಪಡೆದು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನೀಡಿದರು. ಇದಕ್ಕೂ ಮುನ್ನ ವಿಕಲಚೇತನರ ಬಳಿ ಹೋಗಿ ಅಹವಾಲು ಸ್ವೀಕರಿಸಿ, ತ್ವರಿತವಾಗಿ ಪರಿಹಾರ ನೀಡಲು ಅಧಿಕಾರಿಗಳಿಗೆ ತಿಳಿಸಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್‌, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಶಾಲಿನಿ ರಜನೀಶ್ ಸೇರಿದಂತೆ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios