ಸರ್ಕಾರಗಳು ಮದರಸಾಗಳು ಹಾಗೂ ಮಠಗಳಿಗೆ ಹಣ ಖರ್ಚು ಮಾಡೋದನ್ನ ನಿಲ್ಲಿಸಿದರೆ ಅದು ನಿಜವಾದ ಜಾತ್ಯಾತೀತತೆ ಎಂದು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್‌ ಅಹಿಂಸಾ ಬರೆದುಕೊಂಡಿದ್ದಾರೆ. 

ಬೆಂಗಳೂರು (ಆ.30): ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯಕ್ಕೆ ಸಚಿವ ಜಮೀರ್‌ ಅಹ್ಮದ್‌ ಸೂಚನೆ ನೀಡಿರುವ ವಿಚಾರವಾಗಿ, ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಪೋಸ್ಟ್‌ ಮಾಡಿದ್ದಾರೆ. ಸದಾ ಒಂದಿಲ್ಲೊಂದು ಪೋಸ್ಟ್‌ಗಳ ಮೂಲಕ ಚರ್ಚೆಯಲ್ಲಿರುವ ಚೇತನ್‌ ಅಹಿಂಸಾ, ಇತ್ತೀಚೆಗೆ ಸುಧಾಮೂರ್ತಿ ವಿಚಾರವಾಗಿ ಹಾಗೂ ಇಸ್ರೋದ ಚಂದ್ರಯಾನದ ವಿಚಾರವಾಗಿ ಮಾಡಿದ್ದ ಪೋಸ್ಟ್‌ಗಳು ಚರ್ಚೆಗೆ ಕಾರಣವಾಗಿದ್ದವು. ಈಗ ಮದರಸಾದ ವಿಚಾರವಾಗಿ ಅವರು ಮಾಡಿರುವ ಟ್ವೀಟ್‌ ಚರ್ಚೆ ಹುಟ್ಟುಹಾಕುವ ಸಾಧ್ಯತೆ ಇದೆ. 'ಮದರಸಾಗಳಲ್ಲಿ ಕನ್ನಡ, ಇಂಗ್ಲೀಷ್‌, ವಿಜ್ಞಾನ ಮತ್ತು ಗಣಿತವನ್ನು ಕಡ್ಡಾಯಗೊಳಿಸಲು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಉದ್ದೇಶಿಸಿದ್ದಾರೆ. ಕಾಂಗ್ರೆಸ್‌ನ ಟಿಂಕರಿಂಗ್‌ಗೆ ಇದು ಮತ್ತೊಂದು ಉದಾಹರಣೆ ನಿಜವಾದ ಜಾತ್ಯಾತೀತತೆಗಾಗಿ, ಸರ್ಕಾರವು ಮದರಸಾಗಳಿಗೆ (ಮತ್ತು ಮಠಗಳಿಗೆ) ಹಣವನ್ನು ಖರ್ಚು ಮಾಡುವುದನ್ನು ನಿಲ್ಲಿಸಬೇಕು. ಮದರಸಾಗಳು ಮುಸ್ಲಿಂ ಯುವಕರ ಅಥವಾ ತರ್ಕಬದ್ಧ ಸಮಾಜದ ಹಿತದೃಷ್ಟಿಯಿಂದ ಕೂಡಿಲ್ಲ' ಎಂದು ಅವರು ಬರೆದುಕೊಂಡಿದ್ದಾರೆ.

 ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದಲ್ಲಿ ಸೋಮವಾರ ನಡೆದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಸತಿ ಸಚಿವ ಜಮೀರ್ ಅಹಮದ್ ಖಾನ್, ಮುಸಲ್ಮಾನರ ಕಲಿಕಾ ಕೇಂದ್ರಗಳು ಎನಿಸಿಕೊಂಡ ಮದರಸಾಗಳಲ್ಲಿ ವಿಜ್ಞಾನ, ಗಣಿತ, ಕನ್ನಡ ಮತ್ತು ಇಂಗ್ಲೀಷ್‌ ಸೇರಿದಂತೆ ಎಲ್ಲಾ ವಿಷಯಗಳನ್ನು ಬೋಧನೆ ಮಾಡಬೇಕು. ಅದಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದರು. ಅದರೊಂದಿಗೆ ರಾಜ್ಯದ ಪ್ರತಿಯೊಂದು ಮದರಸಾಗಳಲ್ಲೂ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು ಎಂದು ಸೂಚನೆ ನೀಡಿದ್ದರು.

ರಾಜ್ಯದ ವಕ್ಫ್‌ ಬೋರ್ಡ್‌ನಲ್ಲಿ ಇಲ್ಲಿಯವರೆಗೂ 1265 ಮದರಗಳಾಗಳು ನೋಂದಣಿಯಾಗಿದೆ. ಅಧಿಕಾರಿಗಳು ಕನಿಷ್ಠ 100 ಮದರಸಾಗಳಲ್ಲಿ 5 ಸಾವಿರ ಮಕ್ಕಳಿಗೆ ಪ್ರಾಯೋಗಿಕವಾಗಿ ಕನ್ನಡವನ್ನು ಬೋಧನೆ ಮಾಡಬೇಕು ಮುಂದಿನ ವರ್ಷದಿಂದ ರಾಜ್ಯದ ಎಲ್ಲಾ ಮದರಸಾಗಳು ಕನ್ನಡ ಬೋಧನೆಯನ್ನು ಪ್ರಾರಂಭ ಮಾಡಬೇಕು. ಈ ಕುರಿತಾಗಿ ಅಧಿಕಾರಿಗಳು ವಿವರವಾದ ಪ್ರಸ್ತಾವನೆಯನ್ನು ಸಿದ್ಧ ಮಾಡಬೇಕು ಎಂದಿದ್ದರು.

ಅಲ್ಪಸಂಖ್ಯಾತರ ನಿರ್ದೇಶನಾಲಯದ ಯೋಜನೆಯಡಿ ವಿದೇಶದಲ್ಲಿ ವ್ಯಾಸಂಗ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 20 ಲಕ್ಷ ರೂ.ಗಳ ಪ್ರೋತ್ಸಾಹಧನವನ್ನು 30 ಲಕ್ಷ ರೂ.ಗೆ ಹೆಚ್ಚಿಸಲು ಮತ್ತು ಐಐಟಿ, ಎನ್‌ಐಟಿ ಸೇರಿದಂತೆ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹಧನವನ್ನು ರೂ 2 ಲಕ್ಷದಿಂದ ರೂ 4 ಲಕ್ಷ ಹೆಚ್ಚಿಸುವಂತೆಯೂ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಸಿನಿಮಾಗಳಿಂದ ದೂರ ಉಳಿದಿರುವ ಚೇತನ್‌, ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೆ ನೀಡುವುದರಲ್ಲೇ ಬ್ಯುಸಿಯಾಗಿದ್ದಾರೆ. ಈ ಹಿಂದೆ ಸಸ್ಯಾಹಾರ ಮತ್ತು ಮಾಂಸಾಹಾರದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದ ಇನ್ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷ ಸುಧಾಮೂರ್ತಿ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಸೋಮವಾರ ಮತ್ತೊಂದು ಟ್ವೀಟ್‌ ಮಾಡಿದ್ದ ಅವರು ಭಾರತ-ಇಂಗ್ಲೆಂಡ್‌ ನಡುವರ ಏರ್ಪಡುತ್ತಿರುವ ವ್ಯಾವಹಾರಿಕ ಒಪ್ಪಂದದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದರು.

ಗಾಂಧಿ, ನೆಹರು ಮೀಸಲಾತಿ ವಿರೋಧಿಗಳು: ನಟ ಚೇತನ್‌ ಅಹಿಂಸಾ

"ಭಾರತ ಮತ್ತು ಯುಕೆ ಪ್ರಸ್ತುತ ಅಂತರರಾಷ್ಟ್ರೀಯ ವ್ಯಾಪಾರ ಒಪ್ಪಂದದ ಮಾತುಕತೆ ನಡೆಸುತ್ತಿವೆ. ಯುಕೆ ಪ್ರಧಾನಿಯವರ ಪತ್ನಿ ಅಕ್ಷತಾ ಅವರು (ನಾರಾಯಣ ಮತ್ತು ಸುಧಾ ಮೂರ್ತಿಯವರ ಪುತ್ರಿ) ಇನ್ಫೋಸಿಸ್‌ನಲ್ಲಿ 5,000 ಕೋಟಿ ರೂಪಾಯಿ ಷೇರುಗಳನ್ನು ಹೊಂದಿರುವುದರಿಂದ ಯುಕೆ ಪ್ರಧಾನಿ ರಿಷಿ ಸುನಕ್ ಅವರ ಕುಟುಂಬವು ಈ ವ್ಯಾಪಾರ ಒಪ್ಪಂದದಿಂದ ಶೀಘ್ರವಾಗಿ ಪ್ರಯೋಜನ ಪಡೆಯಲಿದೆ. ಇಂತಹ ನಾಚಿಕೆಗೇಡಿನ ಕ್ರೋನಿ ಕ್ಯಾಪಿಟಲಿಸಂ ಸ್ವೀಕಾರಾರ್ಹವಲ್ಲ, ಇದು ಅನೈತಿಕ ಮತ್ತು ಅಸಹ್ಯಕರವಾಗಿದೆ" ಎಂದು ಹೇಳಿಕೊಂಡಿದ್ದಾರೆ.

ಒಸಿಐ ಕಾರ್ಡ್‌ ರದ್ದು, ದೇಶದಿಂದ ಗಡಿಪಾರಾಗ್ತಾರಾ ಚೇತನ್‌ ಅಹಿಂಸಾ?