ಒಸಿಐ ಕಾರ್ಡ್ ರದ್ದು, ದೇಶದಿಂದ ಗಡಿಪಾರಾಗ್ತಾರಾ ಚೇತನ್ ಅಹಿಂಸಾ?
ಹಿಂದುತ್ವ, ಬ್ರಾಹ್ಮಣ್ಯ ದೇಶದ ದೇವಸ್ಥಾನಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಆಡಳಿತಾರೂಢ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ಚೇತನ್ ಅವರ ಸಾಗರೋತ್ತರ ಭಾರತೀಯ ನಾಗರೀಕ ಕಾರ್ಡ್ ರದ್ದು ಪಡಿಸಲಾಗಿದೆ. ಇದರ ಬೆನ್ನಲ್ಲಿಯೇ ಅವರು ದೇಶದಿಂದ ಗಡಿಪಾರಾಗ್ತಾರಾ? ಎನ್ನುವ ಪ್ರಶ್ನೆಗಳು ಎದ್ದಿವೆ.
ಬೆಂಗಳೂರು (ಏ.15): ಹೋರಾಟಗಾರ ಹಾಗೂ ಸ್ಯಾಂಡಲ್‌ವುಡ್ ನಟ ಚೇತನ್ ಅಹಿಂಸಾ ಅವರ ಸಾಗರೋತ್ತರ ಭಾರತೀಯ ನಾಗರೀಕ (ಓಸಿಐ) ಕಾರ್ಡ್‌ಅನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಈ ಕುರಿತಾಗಿ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಹಿಂದುತ್ವ, ಬ್ರಾಹ್ಮಣ್ಯ ಕುರಿತಾಗಿ ಅವರಾಡಿರುವ ವಿವಾದಿತ ಮಾತುಗಳು ಈಗ ಮುಳ್ಳಾಗಿ ಕಾಡಿದೆ. ಓಸಿಐ ಕಾರ್ಡ್ ರದ್ದು ಮಾಡಿರುವ ಕುರಿತಾಗಿ ತಡೆಯಾಜ್ಞೆ ತರುವುದಾಗಿ ನಟ ಹೇಳಿದ್ದರೂ, ಅದು ಅಷ್ಟೇನೋ ಸುಲಭವಿಲ್ಲ. ಓಸಿಐ ಕಾರ್ಡ್ ಎನ್ನುವುದು ಭಾರತೀಯ ಮೂಲದ ವಿದೇಶಿ ಪ್ರಜೆಗೆ ದೇಶಕ್ಕೆ ಸಿಗುವಂಥ ಶಾಶ್ವತ ವೀಸಾ. ಸಾಮಾನ್ಯ ವೀಸಾ ಅಥವಾ ಪ್ರಯಾಣದ ವೀಸಾಗಿಂತ ಹೆಚ್ಚಿನ ಮೌಲ್ಯ ಇದು ಹೊಂದಿರುತ್ತದೆ. ಓಸಿಐ ಕಾರ್ಡ್ ಪಡೆಯುವಾಗ ಸುಳ್ಳು ಮಾಹಿತಿ ನೀಡಿದಲ್ಲಿ, ದೇಶದಲ್ಲಿ ಅಹಿತಕರ ಕೆಲಸದಲ್ಲಿ ಭಾಗಿಯಾದರೆ ಅಂಥವರ ಓಸಿಐ ಕಾರ್ಡ್‌ಅನ್ನು ರದ್ದು ಮಾಡುವ ಅವಕಾಶವೂ ಕೇಂದ್ರ ಸರ್ಕಾರಕ್ಕೆ ಇರುತ್ತದೆ. ಅವರನ್ನು ದೇಶಕ್ಕೆ ಬರದಂತೆ ಬ್ಯಾನ್ ಮಾಡುವ ಅಧಿಕಾರವೂ ಸರ್ಕಾರಕ್ಕೆ ಇರುತ್ತದೆ. 2019ರಲ್ಲಿ ಬ್ರಿಟಿಷ್ ಮೂಲದ ಬರಹಗಾರ ಆತೀಶ್ ಅಲಿ ತೇಸರ್ ಅವರ ಓಸಿಐ ಕಾರ್ಡ್‌ಅನ್ನು ಕೇಂದ್ರ ರದ್ದು ಮಾಡಿತ್ತು. ಅದಲ್ಲದೆ, ಅವರನ್ನು ಭಾರತಕ್ಕೆ ಬರದಂತೆ ಬ್ಯಾನ್ ಮಾಡಿತ್ತು. ಟೈಮ್ ಮ್ಯಾಗಝೀನ್‌ನಲ್ಲಿ ಪ್ರಧಾನಿ ಮೋದಿ ನೀತಿಗಳನ್ನು ಟೀಕೆ ಮಾಡಿ ಬರೆದ ಕಾರಣಕ್ಕೆ ಅವರ ಓಸಿಐ ಕಾರ್ಡ್ ರದ್ದು ಮಾಡಿತ್ತು. ಆದರೆ, ಆತೀಶ್ ಅವರ ತಂದೆ ಪಾಕಿಸ್ತಾನ ಮೂಲದವರು ಎನ್ನುವ ಕಾರಣಕ್ಕಾಗಿ ಅವರ ಕಾರ್ಡ್‌ಅನ್ನು ರದ್ದು ಮಾಡಲಾಗಿದೆ ಎಂದು ಕೋರ್ಟ್ ತಿಳಿಸಿತ್ತು.
ಗಡಿಪಾರು ಮಾಡುವ ಅವಕಾಶವಿದೆ: ಓಸಿಐ ಕಾರ್ಡ್ ಉಳಿಸಿಕೊಳ್ಳಲು ವಿಫಲರಾದಲ್ಲಿ ಅವರನ್ನು ಗಡಿಪಾರು ಮಾಡುವ ಅವಕಾಶವೂ ಇದೆ. ಆದರೆ, ವೀಸಾ ರದ್ದುಗೊಂಡಾಗ ಆದಷ್ಟು ತ್ವರಿತವಾಗಿ ಈ ಕಾರ್ಡ್ ಹೊಂದಿರುವವರನ್ನು ಗಡಿಪಾರು ಮಾಡಲಾಗುವುದಿಲ್ಲ. ಸಾಗರೋತ್ತರ ಭಾರತೀಯ ಪ್ರಜೆ ಆಗಿರುವ ವ್ಯಕ್ತಿಗೆ ಈ ಕಾರ್ಡ್‌ಅನ್ನು ಉಳಿಸಿಕೊಳ್ಳುವ ಕೆಲ ಅವಕಾಶಗಳನ್ನೂ ನೀಡಲಾಗುತ್ತದೆ.
ಓಸಿಐ ಕಾರ್ಡ್ ಎಂದರೇನು?: ಭಾರತೀಯ ಮೂಲದ ವಿದೇಶಿ ಪ್ರಜೆಗೆ ಈ ದೇಶವು ನೀಡಿದ ಕಾನೂನಿನ ಸ್ಥಾನಮಾನ ಓಸಿಐ. ಇದು ದೇಶದ ಶಾಶ್ವತ ಪ್ರಜೆ ಎನ್ನುವ ಸ್ಥಾನಮಾನ ಹೋಲುತ್ತದೆಯಾದರೂ, ಪೂರ್ಣ ಪ್ರಮಾಣದಲ್ಲಿ ಅದಲ್ಲ. ವೀಸಾ ಹೊಂದಿರುವವರಿಗಿಂತ ಓಸಿಐ ಕಾರ್ಡ್ ಹೆಚ್ಚಿನ ಪ್ರಯೋಜನ ನೀಡುತ್ತದೆ. ಈ ಸ್ಥಾನಮಾನ ಪಡೆದ ಎಲ್ಲರಿಗೂ ಓಸಿಐ ಕಾರ್ಡ್ ಎನ್ನುವ ದಾಖಲೆಯನ್ನು ನೀಡುತ್ತದೆ. ಅನ್‌ಲೈನಲ್‌ನಲ್ಲಿ ಅರ್ಜಿ ಸಲ್ಲಿಸಿ, ಫೋಟೋಗಳು ಹಾಗೂ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಶುಲ್ಕ ಪಾವತಿಸಿದರೆ ಓಸಿಐ ಕಾರ್ಡ್ ಸಿಗುತ್ತದೆ. ಭಾರತದಲ್ಲಿ 15 ಸಾವಿರ ಹಾಗೂ ವಿದೇಶದಲ್ಲಿ 250 ಡಾಲರ್ ಶುಲ್ಕ ವಿಧಿಸಲಾಗುತ್ತದೆ. ಭಾರತೀಯ ನಾಗರಿಕರು ಬಹು ಪೌರತ್ವ ಅಥವಾ ಪಾಸ್‌ಪೋರ್ಟ್‌ಗಳನ್ನು ಹೊಂದಲು ಸಾಧ್ಯವಿಲ್ಲ. ಆದರೆ, ಪೌರತ್ವವನ್ನು ಬಿಟ್ಟುಕೊಟ್ಟಾಗ ಭಾರತದ ಸಾಗರೋತ್ತರ ನಾಗರೀಕ ಎನಿಸಿಕೊಳ್ಳುವ ಮೂಲಕ ಭಾರತೀಯ ನಾಗರಿಕರಿಗೆ ಅರ್ಹವಾಗಿರುವ ಅನೇಕ ಪ್ರಯೋಜನಗಳನ್ನು ಪಡೆಯಬಹುದು.
ನಟ ಚೇತನ್ ಅಹಿಂಸಾ ವೀಸಾ ರದ್ದು ಮಾಡಿದ ಕೇಂದ್ರ ಸರ್ಕಾರ!
ಓಸಿಐ ಕಾರ್ಡ್‌ಗೆ ಇರುವ ಲಾಭಗಳು:
-ಶಾಶ್ವತವಾಗಿ ಭಾರತದ ವೀಸಾ ಇವರಿಗೆ ಇರುತ್ತದೆ. ಎಷ್ಟು ಬಾರಿ ಬೇಕಾದರೂ ಇವರು ಭಾರತಕ್ಕೆ ಬರಬಹುದು.
-ಇಲ್ಲಿ ವಾಸ, ಕೆಲಸ ಹಾಗೂ ವ್ಯಾಪಾರವನ್ನು ಅನಿರ್ದಿಷ್ಟ ಕಾಲಾವಧಿಯವರೆಗೆ ಮುಂದುವರಿಸಬಹುದು
- ಸ್ವಂತಸ್ವತ್ತುಗಳನ್ನು ಹೊಂದಬಹುದು
- ಕೆಲವು ಷರತ್ತುಗಳನ್ನು ಪಾಲಿಸಿ ವಿದೇಶಿ ಪೌರತ್ವ ಒಪ್ಪಿಸಿದ ನಂತರ ಮತ್ತೊಮ್ಮೆ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು
ಕಲಿಯುಗದ ಕರ್ಣ'ನ ಸ್ಮಾರಕಕ್ಕೆ ಕೆಣಕಿದ ಚೇತನ್‌ಗೆ ಚಿತ್ರರಂಗದಿಂದ ಛೀಮಾರಿ
ಓಸಿಐ ಕಾರ್ಡ್ ಹೊಂದಿರುವವರಿಗೆ ಈ ಲಾಭಗಳಿಲ್ಲ
-ದೇಶದ ಪ್ರಜೆ ಆಗಿರದ ಕಾರಣ, ಮತ ಹಾಕಲು ಸಾಧ್ಯವಿಲ್ಲ
- ಸಾರ್ವಜನಿಕ ಕಚೇರಿಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಾಧ್ಯವಿಲ್ಲ.
- ಕೃಷಿಭೂಮಿ ಹಾಗೂ ತೋಟಗಳನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಭಾರತೀಯ ಪೌರತ್ವ ತ್ಯಜಿಸುವ ಮುನ್ನ ಇಲ್ಲಿ ಹೊಂದಿದ್ದ ಆಸ್ತಿ ಪಡೆಯಬಹುದು. ಅನುವಂಶಿಕ ಆಸ್ತಿಯನ್ನು ಪಡೆಯಬಹುದು.