ಬೆಂಗಳೂರು(ಫೆ.17): ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್ಯಾಗ್‌ ಅಳವಡಿಕೆಯನ್ನು ಸೋಮವಾರ ಮಧ್ಯರಾತ್ರಿಯಿಂದಲೇ ಕಡ್ಡಾಯಗೊಳಿಸಿರುವುದರಿಂದ ಫಾಸ್ಟ್ಯಾಗ್‌ ಅಳವಡಿಸದ ಚಾಲಕರಿಗೆ ಮೊದಲ ದಿನವೇ ದುಪ್ಪಟ್ಟು ಶುಲ್ಕದ ಬಿಸಿ ತಟ್ಟಿದೆ. ಬೆಂಗಳೂರು, ಮಂಗಳೂರು, ಸೇರಿದಂತೆ ಹೆಚ್ಚಿನ ಟೋಲ್‌ಗೇಟ್‌ಗಳಲ್ಲಿ ವಾಹನ ಚಾಲಕರು ದುಪ್ಪಟ್ಟು ಶುಲ್ಕ ಪಾವತಿಗೆ ನಿರಾಕರಿಸಿ ಟೋಲ್‌ ಸಿಬ್ಬಂದಿ ಜೊತೆ ವಾಗ್ವಾದ, ಗಲಾಟೆ ನಡೆಸಿದ್ದರಿಂದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಭಾಯಿಸಿದ ಘಟನೆಗಳು ವರದಿಯಾಗಿವೆ.

ರಾಜ್ಯದ ಎಲ್ಲ ಟೋಲ್‌ಗಳಲ್ಲೂ ಸ್ಥಳದಲ್ಲೇ ಫಾಸ್ಟ್ಯಾಗ್‌ ಪಡೆದುಕೊಳ್ಳಲು ಡೆಸ್ಕ್‌ಗಳನ್ನು ತೆರೆದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೂ ಟೋಲ್‌ಗೇಟ್‌ಗಳಲ್ಲಿ ಹತ್ತು ಹಲವು ತಾಂತ್ರಿಕ ಸಮಸ್ಯೆಗಳು ತಲೆದೋರಿದ್ದರಿಂದ, ಜೊತೆಗೆ ಜನರೂ ದುಪ್ಪಟ್ಟು ದರ ತೆರಲು ಜಗಳ ತೆಗೆದದ್ದರಿಂದ ವಾಹನಗಳ ಸರತಿಸಾಲು ಉಂಟಾಯಿತು.

ಫಾಸ್ಟ್ಯಾಗ್‌ ಕಡ್ಡಾಯ: ‘ನಮ್ಮ ಕಾರು ಹೈವೇಯಲ್ಲಿ ಹೋಗಲ್ಲ’ ಎಂದು ಸುಮ್ಮನೇ ಕೂರಬೇಡಿ!

ದುಪ್ಪಟ್ಟು ದರದ ಬಿಸಿ:

ಫಾಸ್ಟ್ಯಾಗ್‌ ಇಲ್ಲದ ವಾಹನಗಳಿಗೆ ದುಪ್ಪಟ್ಟು ಸುಂಕ ವಿಧಿಸಿದ್ದಕ್ಕೆ ವಾಹನ ಚಾಲಕರು ಟೋಲ್‌ ಸಿಬ್ಬಂದಿ ಜೊತೆಗೆ ಗಲಾಟೆ ತೆಗೆದಿರುವ ಘಟನೆಗಳು ಬೆಂಗಳೂರಿನ ನೆಲಮಂಗಲ, ದೇವನಹಳ್ಳಿ, ಸಾದಹಳ್ಳಿ, ಹೊಸಕೋಟೆ, ತುಮಕೂರು ಜಿಲ್ಲೆಯ ಜಾಸ್‌ಗೇಟ್‌, ಕೋಲಾರ ಜಿಲ್ಲೆಯ ಹನುಮನಹಳ್ಳಿ, ವಿಜಯಪುರ ಜಿಲ್ಲೆಯ ಹಿಟ್ನಳ್ಳಿ, ಕೊಪ್ಪಳ ಜಿಲ್ಲೆಯ ಹಿಟ್ನಾಳ, ಕೆರೆಹಳ್ಳಿ, ನಂಜನಗೂಡು, ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಗಳಲ್ಲೂ ನಡೆದಿವೆ. ಅಲ್ಲದೆ ಫಾಸ್ಟ್ಯಾಗ್‌ ಖಾತೆಯಲ್ಲಿ ಹಣ ಇಲ್ಲದ್ದಕ್ಕೂ ದುಪ್ಪಟ್ಟು ಹಣ ವಿಧಿಸಿದ್ದರಿಂದ ಚಾಲಕರು ಗಲಾಟೆ ಮಾಡಿದರು. ಇಷ್ಟೇ ಅಲ್ಲದೆ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ, ಬೆಂಗಳೂರು ಹೊರವಲಯದ ಟೋಲ್‌ಗಳಲ್ಲಿ ಕಡೆ ಫಾಸ್ಟ್ಯಾಗ್‌ ಅಳವಡಿಸಿಕೊಂಡಿರುವ ವಾಹನಗಳ ಪೈಕಿ ಕೆಲ ವಾಹನಗಳ ಖಾತೆಯಿಂದ ಶುಲ್ಕ ಕಡಿತವಾಗದೆ ಸಮಸ್ಯೆ ಎದುರಾಗಿತ್ತು. ಈ ವೇಳೆ ಟೋಲ್‌ ಸಿಬ್ಬಂದಿ ದುಪ್ಪಟ್ಟು ಶುಲ್ಕ ಪಾವತಿಸುವಂತೆ ಕೇಳಿದ್ದಕ್ಕೆ ಚಾಲಕರು ಕಿಡಿಕಾರಿದರು. ಫಾಸ್ಟ್ಯಾಗ್‌ ಖಾತೆಯಲ್ಲಿ ಹಣವಿದ್ದರೂ ಕಡಿತವಾಗಿಲ್ಲ. ನಮ್ಮಿಂದ ಯಾವುದೇ ತಪ್ಪುಗಳಾಗಿಲ್ಲ. ದುಪ್ಪಟ್ಟು ಶುಲ್ಕ ಪಾವತಿಸುವುದಿಲ್ಲ ಎಂದು ಟೋಲ್‌ ಸಿಬ್ಬಂದಿಯನ್ನು ದಬಾಯಿಸಿದ ಘಟನೆಗಳು ಜರುಗಿದವು.

ಬೆಂಗಳೂರು, ತಲಪಾಡಿ ಟೋಲ್‌ಗಳಲ್ಲಿ ಫಾಸ್ಟ್ಯಾಗ್‌ ಇಲ್ಲದ ವಾಹನ ಚಾಲಕರು ಫಾಸ್ಟ್‌ಟ್ಯಾಗ್‌ ಲೇನ್‌ಗಳಲ್ಲೇ ವಾಹನ ನಿಲುಗಡೆ ಮಾಡಿ ಸಿಬ್ಬಂದಿ ಜೊತೆಗೆ ವಾಗ್ವಾದಕ್ಕೆ ಇಳಿದರು. ಹೀಗಾಗಿ ಫಾಸ್ಟ್ಯಾಗ್‌ ಅಳವಡಿಸಿಕೊಂಡ ವಾಹನಗಳ ಸುಗಮ ಸಂಚಾರಕ್ಕೂ ಅಡ್ಡಿಯಾಯಿತು.

ವಾಹನ ವಿವರ ಮಾರಾಟದಿಂದ 111 ಕೋಟಿ ರೂ. ಗಳಿಕೆ!

ಇದೇವೇಳೆ ಗದಗ ತಾಲೂಕಿನ ಅಡವಿಸೋಮಾಪುರ, ಹಾವೇರಿ ಜಿಲ್ಲೆಯ ಚಳಗೇರಿ, ಬಂಕಾಪುರ, ಹೊಸಪೇಟೆ ಬಳಿಯ ತಿಮ್ಮಲಾಪುರ, ಧಾರವಾಡ ಜಿಲ್ಲೆಯ ನರೇಂದ್ರ, ಗಬ್ಬೂರು, ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿ, ಹೊಳೆಗದ್ದೆ ಟೋಲ್‌ಗಳಲ್ಲಿ ಎಲ್ಲವೂ ವ್ಯವಸ್ಥಿತವಾಗಿದ್ದು, ಯಾವುದೇ ಸಮಸ್ಯೆಗಳಾಗಿಲ್ಲ. ಇಲ್ಲಿನ ಟೋಲ್‌ ಗೇಟ್‌ಗಳ ಎಲ್ಲ ಲೇನ್‌ಗಳಲ್ಲಿ ಫಾಸ್ಟ್ಯಾಗ್‌ ಅಳವಡಿಸಿದ ವಾಹನಗಳು ಸರಾಗವಾಗಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದ್ದು ಫಾಸ್ಟ್ಯಾಗ್‌ ಇಲ್ಲದ ವಾಹನಗಳಿಗೆ ಸ್ಥಳದಲ್ಲಿಯೇ ಅಳವಡಿಸಲಾಯಿತು.

ಮದುವೆ ಮನೆಗೆ ಹೊರಟಿದ್ದ ಬಸ್‌ ಲೇಟ್‌!

ಫಾಸ್ಟ್ಯಾಗ್‌ ಸರಿಯಾಗಿ ರೀಚಾಜ್‌ರ್‍ ಆಗದ್ದರಿಂದ ಮದುವೆ ಮನೆಗೆ ಹೊರಟಿದ್ದ ಬಸ್ಸೊಂದು ಸರಿಯಾದ ಸಮಯಕ್ಕೆ ಗಮ್ಯತಾಣಕ್ಕೆ ತಲುಪದೆ ಪಜೀತಿಗೀಡಾದ ಪ್ರಸಂಗ ಬೆಳಗಾವಿಯ ಹಿರೇಬಾಗೇವಾಡಿಯಿಂದ ವರದಿಯಾಗಿದೆ. ಬೆಳಗಾವಿಯಿಂದ ಕಡೂರಗೆ ಈ ಮದುವೆ ವಾಹನ ಹೊರಟಿತ್ತು. ಟೋಲ್‌ಗೇಟ್‌ನಲ್ಲಿ ದುಪ್ಪಟ್ಟು ದರ ತಪ್ಪಿಸುವ ಸಲುವಾಗಿ ಬಸ್‌ ಚಾಲಕ ಬಸ್‌ ಅನ್ನು ಸೈಡಿಗೆ ಹಾಕಿ ಫಾಸ್ಟ್ಯಾಗ್‌ ರೀಚಾಜ್‌ರ್‍ ಮಾಡಿದರು. ಆದರೆ ಅದು ಸರಿಯಾಗಿ ರೀಚಾಜ್‌ರ್‍ ಆಗದ ಹಿನ್ನೆಲೆಯಲ್ಲಿ ಫಾಸ್ಟ್ಯಾಗ್‌ ರೀಡ್‌ ಆಗಲಿಲ್ಲ. ಈ ವೇಳೆ ವಿಳಂಬವಾದ್ದರಿಂದ ಟೋಲ್‌ ಸಿಬ್ಬಂದಿ ವಿರುದ್ಧ ಬಸ್‌ನಲ್ಲಿದ್ದವರು ಆಕ್ರೋಶ ವ್ಯಕ್ತಪಡಿಸಿದರು.

ತಲುಪಾಡಿಯಲ್ಲಿ ಸುಂಕಪಟ್ಟಿಗೆ ಗಮ್‌ಟೇಪ್‌ ಹಚ್ಚಿದ ಸಿಬ್ಬಂದಿ

ಮಂಗಳೂರಿನ ತಲಪಾಡಿ ಟೋಲ್‌ನಲ್ಲಿ ಫಾಸ್ಟ್ಯಾಗ್‌ ರಹಿತ ವಾಹನ ಚಾಲಕರಿಗೆ ಟೋಲ್‌ ಮೊತ್ತ ಗೊತ್ತಾಗಬಾರದು ಎಂದು ಸುಂಕಪಟ್ಟಿಗೆ ಗಮ್‌ಟೇಪ್‌ನಲ್ಲಿ ಮರೆಮಾಚಲಾಗಿದೆ. ಇದರಿಂದಾಗಿ ವಾಹನ ಚಾಲಕರು ಹಾಗೂ ಟೋಲ್‌ ಸಿಬ್ಬಂದಿ ಜೊತೆ ವಾಗ್ವಾದ ನಡೆದಿದೆ. ಇದರಿಂದ ಅಸಮಾಧಾನಗೊಂಡ ವಾಹನ ಚಾಲಕರು ಟೋಲ್‌ ಸಿಬ್ಬಂದಿ ಜೊತೆ ತಗಾದೆ ತೆಗೆದಿದ್ದಾರೆ. ಈ ಹಿನ್ನೆಲೆಯಲ್ಲಿ ಟೋಲ್‌ ಪ್ಲಾಜಾಗಳಿಗೆ ಪೊಲೀಸ್‌ ಭದ್ರತೆಯೊಂದಿಗೆ ಕೆಎಸ್‌ಆರ್‌ಪಿ ಪೊಲೀಸರನ್ನೂ ನಿಯೋಜಿಸಲಾಗಿದೆ.

ಸ್ಥಳೀಯರಿಗೆ ಫಾಸ್ಟ್ಯಾಗ್‌ ಕಡ್ಡಾಯಕ್ಕೆ ವಿರೋಧ

ಟೋಲ್‌ಗೇಟ್‌ಗಳಲ್ಲಿ ಸ್ಥಳೀಯರಿಗೂ ಫಾಸ್ಟ್ಯಾಗ್‌ ಕಡ್ಡಾಯಕ್ಕೆ ವಿರೋಧ ವ್ಯಕ್ತವಾಗಿರುವ ಘಟನೆ ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ನಡೆದಿದೆ. ಇಲ್ಲಿನ ಟೋಲ್‌ಗೇಟ್‌ನಲ್ಲಿ ಸ್ಥಳೀಯರು ತಮಗೆ ರಿಯಾಯತಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಆದರೆ ಅದು ತಮ್ಮ ಕೈಯಲ್ಲಿಲ್ಲ ಎಂದು ಸ್ಥಳೀಯರು ಅಸಹಾಯಕತೆ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.

ಉಡುಪಿ : ಈ ಟೋಲ್‌ನಲ್ಲಿ ಸ್ಥಳೀಯರಿಗೆ ಸಂಪೂರ್ಣ ವಿನಾಯಿತಿ

410 ರೂ ಇದ್ದ ಸುಂಕಕ್ಕೆ 820 ರೂ ಕಕ್ಕಾಬಿಕ್ಕಿಯಾದ ಲಾರಿ ಚಾಲಕ!

ಬೆಂಗಳೂರಿನಿಂದ ತಿರುಪತಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರ ಹನುಮನಹಳ್ಳಿ ಲ್ಯಾನ್ಕೋ ಟೋಲ್‌ ಗೇಟ್‌ ಬಳಿ ಫಾಸ್ಟ್ಯಾಗ್‌ ಇಲ್ಲದೇ ಬಂದ ಲಾರಿ ಚಾಲಕನಿಗೆ ಟೋಲ್‌ ಸಿಬ್ಬಂದಿ .410 ಇದ್ದ ಸುಂಕದ ದುಪ್ಪಟ್ಟು .820 ಕಟ್ಟುವಂತೆ ಸೂಚಿಸಿದ್ದಾರೆ. ಇದರಿಂದ ಕಕ್ಕಾಬಿಕ್ಕಿಯಾದ ಲಾರಿ ಚಾಲಕ ಸಿಬ್ಬಂದಿ ಜೊತೆ ಗಲಾಟೆ ನಡೆಸಿದ್ದಾನೆ.