ನವದೆಹಲಿ(ಫೆ.14): ವಾಹನ ಮತ್ತು ವಾಹನ ಸವಾರರ ಮಾಹಿತಿಯನ್ನು ‘ವಾಹನ್‌’ ಮತ್ತು ‘ಸಾರಥಿ’ ವೆಬ್‌ಸೈಟ್‌ ಮೂಲಕ ಡಿಜಿಟಲೀಕಣಗೊಳಿಸಿರುವ ಕೇಂದ್ರ ಸರ್ಕಾರ, ಡಿಜಿಟಲ್‌ ಸ್ವರೂಪದಲ್ಲಿರುವ ಜನರ ಈ ಖಾಸಗಿ ಮಾಹಿತಿಯನ್ನು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುವ ಮೂಲಕ ಭರ್ಜರಿ 111 ಕೋಟಿ ರು. ಆದಾಯ ಸಂಗ್ರಹಿಸಿದೆ.

ಸರ್ಕಾರದ ಈ ಹೊಸ ಆದಾಯದ ಮೂಲಕ ಕುರಿತು ಸ್ವತಃ ಕೇಂದ್ರ ರಸ್ತೆ ಸಾರಿಗೆ ಖಾತೆ ಸಚಿವ ನಿತಿನ್‌ ಗಡ್ಕರಿ ಅವರೇ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಆದರೆ 111 ಕೋಟಿ ರು. ಆದಾಯವನ್ನು ಎಷ್ಟುಅವಧಿಯಲ್ಲಿ ಸಂಗ್ರಹಿಸಿಲಾಗಿದೆ ಎಂದು ಅವರು ಮಾಹಿತಿ ನೀಡಿಲ್ಲ.

‘ವಾಹನ್‌’ ಮತ್ತು ‘ಸಾರಥಿ’ ವೆಬ್‌ಸೈಟ್‌ಗಳಲ್ಲಿನ ದತ್ತಾಂಶಗಳನ್ನು ಕೇಂದ್ರ ಗೃಹ ಸಚಿವಾಲಯ, ಕಾನೂನು ಜಾರಿ ಸಂಸ್ಥೆಗಳು, ವಿಮಾ, ಬ್ಯಾಂಕ್‌, ಆಟೋಮೊಬೈಲ್‌ ಸೇರಿದಂತೆ 170ಕ್ಕೂ ಹೆಚ್ಚು ಸಂಸ್ಥೆಗಳ ಜೊತೆ ಹಂಚಿಕೊಳ್ಳಲಾಗಿದೆ. ಈ ಪೈಕಿ ಮರ್ಸಿಡಿಸ್‌ ಬೆಂಜ್‌, ಬಿಎಂಡಬ್ಲ್ಯು, ಬಜಾಜ್‌ ಅಲೈಯನ್‌ ವಿಮಾ ಕಂಪನಿ, ಆ್ಯಕ್ಸಿಸ್‌ ಬ್ಯಾಂಕ್‌ ಮೊದಲಾದವುಗಳು ಸೇರಿವೆ. ಹೀಗೆ ದತ್ತಾಂಶ ಮಾರಾಟದ ಮೂಲಕ ಸರ್ಕಾರಕ್ಕೆ 111 ಕೋಟಿ ರು. ಆದಾಯ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಈ ಎರಡು ವೆಬ್‌ಸೈಟ್‌ನಲ್ಲಿ 25 ಕೋಟಿ ವಾಹನ ನೋಂದಣಿ ದಾಖಲೆ ಮತ್ತು 15 ಕೋಟಿ ವಾಹನ ಚಾಲನಾ ಪರವಾನಗಿಯ ಮಾಹಿತಿ ಇದೆ.

ಸಗಟು ಸೇಲ್‌ ಬಂದ್‌:

ಇದೇ ವೇಳೆ ವಾಹನ ಸವಾರರ ಚಾಲನಾ ಪರವಾನಗಿ (ಡಿಎಲ್‌) ಮತ್ತು ವಾಹನಗಳ ನೋಂದಣಿ ಕುರಿತ ಮಾಹಿತಿ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಸಗಟು ಸ್ವರೂಪದಲ್ಲಿ ಮಾರಾಟ ಮಾಡುವ 2019ರ ಪ್ರಸ್ತಾಪವನ್ನು ಕೈಬಿಡಲಾಗಿದೆ. ಖಾಸಗಿ ಮಾಹಿತಿ ಸೋರಿಕೆ ಮತ್ತು ಖಾಸಗಿತನ ಕುರಿತ ಕಳವಳಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕಳೆದ ವರ್ಷವೇ ಈ ನೀತಿಯನ್ನು ಕೈಬಿಡಲಾಗಿದೆ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ.

ಈ ಯೋಜನೆಯಡಿ ಯಾವುದೇ ಸಂಸ್ಥೆಗಳು ವಾರ್ಷಿಕ 3 ಕೋಟಿ ರು. ನೀಡಿ, ವಾಹನ್‌ ಮತ್ತು ಸಾರಥಿ ವೆಬ್‌ಸೈಟ್‌ನ ಮಾಹಿತಿಯನ್ನು ಒಂದು ವರ್ಷಗಳ ಕಾಲ ಬಳಸಬಹುದಿತ್ತು. ಶಿಕ್ಷಣ ಸಂಸ್ಥೆಗಳಿಗೆ ಕೇವಲ 5 ಲಕ್ಷ ರು.ನಲ್ಲಿ ಈ ಮಾಹಿತಿ ನೀಡಲಾಗುತ್ತಿತ್ತು.

ರಕ್ಷಣೆಗೆ ಕ್ರಮ:

ಇಂಥ ಮಾಹಿತಿ ಪಡೆದ ಸಂಸ್ಥೆಗಳು ಮಾಹಿತಿ ಬಳಸಿಕೊಂಡ ಬಗ್ಗೆ ಪ್ರತಿ 3 ತಿಂಗಳಿಗೊಮ್ಮೆ ಭದ್ರತಾ ಲೆಕ್ಕಪರಿಶೋಧನೆಗೆ ಒಳಪಡಬೇಕಿತ್ತು. ಅದರ ಆಧಾರದಲ್ಲಿ ಮುಂದಿನ 3 ತಿಂಗಳ ಮಾಹಿತಿಯನ್ನು ಅಂಥ ಕಂಪನಿಗಳಿಗೆ ನೀಡಲಾಗುತ್ತಿತ್ತು.