ಮಡದಿಗೆ ಮೊದಲ ಹೆರಿಗೆ ನಂತರ ಆಸ್ಪತ್ರೆ ಹೊರ ಮಲಗಿದ ಪತಿ, ಚಳಿಗೆ ಜೀವವೇ ಹಾರಿಹೋಯ್ತು!

ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಹೆಂಡತಿಗೆ ಮಗು ಜನಿಸಿದ ಖುಷಿಯಲ್ಲಿ ಆಸ್ಪತ್ರೆ ಮುಂದೆ ಮಲಗಿದ್ದ ತಂದೆ ಚಳಿಗೆ ಬಲಿಯಾಗಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಹೊರಗೆ ಮಲಗಿದ್ದ ವ್ಯಕ್ತಿಯ ಸಾವು ದುರಂತವಾಗಿದೆ.

Chamarajanagar poor man died after shivering from cold outside Mysuru KR Hospital sat

ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಮೈಸೂರು (ಜ.13):
ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ಹೆಂಡತಿ ಗರ್ಭಿಣಿಯಾದ ದಿನದಿಂದ ಕಡುಬಡತನದಲ್ಲಿಯೇ ಸುಖವಾಗಿ ನೋಡಿಕೊಂಡಿದ್ದಾನೆ. ತನಗೆ ಎಷ್ಟೇ ಕಷ್ಟ ಬಂದರೂ ಹೆಂಡತಿ, ಮಗು ಚೆನ್ನಾಗಿರಬೇಕು ಎಂದು ಯಾವುದೇ ಹಳ್ಳಿ, ತಾಲೂಕು ಆಸ್ಪತ್ರೆಗೆ ಸೇರಿಸದೇ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಹೆಂಡತಿ ಕರೆದುಕೊಂಡು ಬಂದು ಹೆರಿಗೆ ಮಾಡಿಸಿದ್ದಾನೆ.

ಕೋಟಿ ದೇವರ ಆಶೀರ್ವಾದ ಎಂಬಂತೆ ಗಂಡು ಮಗು ಜನಿಸಿದೆ. ರಾತ್ರಿ 10.30ರ ವೇಳೆಗೆ ಹೆಂಡತಿಯನ್ನು ವಿಚಾರಿಸಿ ಮಗುವನ್ನು ಮುದ್ದಿಸಿದ ಗಂಡನಿಗೆ ನೀನು ಇಲ್ಲಿ ಮಲಗುವಂತಿಲ್ಲ ಹೊರಗೆ ಹೋಗು ಎಂದು ಸಿಬ್ಬಂದಿ ಕಳಿಸಿದ್ದಾರೆ. ಆದರೆ, ಕೊನೆಗೂ ತನಗೆ ಮಗುವಾಯ್ತು, ಹೆಂಡತಿ ಆರೋಗ್ಯವಾಗಿದ್ದಾಳೆ ಎಂದು ಖುಷಿಯಿಂದ ಆಸ್ಪತ್ರೆಯ ಹೊರಗೆ ಬಂದು ತೆಳ್ಳನೆಯ ಬೆಡ್‌ಶೀಟ್ ಹೊದ್ದು ಮಲಗಿದ್ದ ನಾಗೇಶ್ ಬೆಳಗಾಗುವಷ್ಟರಲ್ಲಿ ಚಳಿಯನ್ನು ತಾಳಲಾಗದೇ ಸ್ಥಳದಲ್ಲಿಯೇ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಇತ್ತ ಹೆಂಡತಿಗೆ ಮಗು ಹುಟ್ಟಿದ ಖುಷಿಗಿಂತ ತನ್ನ ಗಂಡನ ಜೀವ ಹೋಯ್ತಲ್ಲ ಎಂಬ ನೋವು ಮಡುಗಟ್ಟಿದೆ.

ಇದೀಗ ನಿಮಗೆ ಅರ್ಥವಾಗಿದೆ ಎಂದುಕೊಳ್ಳುತ್ತೇವೆ. ಈ ಸುದ್ದು ಮಗು ಜನಿಸಿತು ಎಂದು ಖುಷಿ ಪಡಬೇಕಾದ ಸುದ್ದಿಯಂತು ಅಲ್ಲ. ಏಕೆಂದರೆ ಮಗು ಹುಟ್ಟಿದ ಖುಷಿಯಲ್ಲಿ ಆಸ್ಪತ್ರೆ ಮುಂದೆ ಮಲಗಿದ ತಂದೆ, ಮಲಗಿದ್ದಲ್ಲಿಯೇ ಸಾವಿಗೀಡಾಗಿದ್ದಾರೆ. ಆಸ್ಪತ್ರೆ ಒಳಗೆ ಮಲಗುವುದಕ್ಕೆ ಸ್ಥಳವಿಲ್ಲದೆ ಮೈ ಕೊರೆವ ಚಳಿಯಲ್ಲಿ ಹೊರಗೆ ಮಲಗಿದವರು ಬೆಳಗಾಗುವಷ್ಟರಲ್ಲಿ ಹೆಣವಾಗಿದ್ದಾರೆ. ಇದು ಪುತ್ರ ಸಂತಾನದ ಸಂತಸಕ್ಕಿಂತಲೂ ಪಿತೃ ವಿಯೋಗದ ದುಃಖವನ್ನು ಹೆಚ್ಚಿಸಿದ ದಾರುಣ ಘಟನೆಯಾಗಿದೆ‌. ಸುತ್ತಮುತ್ತಲ ನಾಲ್ಕು ಜಿಲ್ಲೆಗಳಿಗೆ ವರದಾನ ಆಗಿರುವ ಮೈಸೂರಿನ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ರೋಗಿಯ ಸಂಬಂಧಿ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ. ಕೆ.ಆರ್.ಆಸ್ಪತ್ರೆಯ ಹೆರಿಗೆ ವಿಭಾಗ ಚಲುವಾಂಬ ಆಸ್ಪತ್ರೆ ಕಟ್ಟಡದ ಮುಂಭಾಗ ಮಲಗಿದ್ದ ವ್ಯಕ್ತಿ ಮಲಗಿದ್ದಲ್ಲಿಯೇ ಅಸುನೀಗಿದ್ದಾರೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಚೌಡಳ್ಳಿ ಗ್ರಾಮದ ನಾಗೇಶ್ (47) ಮೃತ ವ್ಯಕ್ತಿ. ನಾಗೇಶ್ 4 ವರ್ಷಗಳ ಹಿಂದೆ ಗುಡ್ಲುಪೇಟೆ ತಾಲೂಕು ರಾಘವಪುರ ಗ್ರಾನದ ಅಶ್ವಥಮ್ಮ ಎಂಬುವರನ್ನು ಮದುವೆ ಆಗಿದ್ದರು. ಕೂಲಿ ಮಾಡಿ ಸಂಸಾರ ಸಾಗಿಸುತ್ತಿದ್ದ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದರು. ನಾಗೇಶ್ ಗರ್ಭಿಣಿ ಹೆಂಡತಿಯನ್ನು ಹೆರಿಗೆಗೆ ಕರೆದುಕೊಂಡು ಮೈಸೂರಿನ ಚಲುವಾಂಬ ಆಸ್ಪತ್ರೆಗೆ ಬಂದಿದ್ದರು. 4 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ದಂಪತಿಗೆ ನಿನ್ನೆಯಷ್ಟೇ ಗಂಡು ಮಗು ಜನಿಸಿತ್ತು. ಹೆಂಡತಿಗೆ ರಕ್ತದ ಕೊರತೆ ಇದ್ದ ಕಾರಣ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಇನ್ನು ತಂದೆಗೆ ಆಸ್ಪತ್ರೆ ಒಳಗೆ ಮಲಗಲು ಅವಕಾಶ ಇಲ್ಲದ ಕಾರಣಕ್ಕೆ ರಾತ್ರಿ 10.30ರ ಸುಮಾರಿಗೆ ಮಗು ನೋಡಿಕೊಂಡು ಬಂದು ಆಸ್ಪತ್ರೆ ಹೊರಗೆ ಮಲಗಿದ್ದರು. ಆದರೆ, ಬೆಳಗಾಗುವಷ್ಟರಲ್ಲಿ ನಾಗೇಶ್ ಮಲಗಿದ್ದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

ಇದನ್ನೂ ಓದಿ: ಮೈಸೂರು ಜೈಲಿನಲ್ಲಿ 3 ಕೈದಿಗಳ ಸಾವು: ಸೇವಿಸಿದ್ದು ಎಸ್ಸೆನ್ಸಾ, ಮಾದಕ ವಸ್ತುನಾ?

ಬೆಳಿಗ್ಗೆ ಆಸ್ಪತ್ರೆಯ ಸ್ವಚ್ಚತಾ ಸಿಬ್ಬಂದಿ ಎಂದಿನಂತೆ ಕಸ ಗುಡಿಸುತ್ತಿರುವಾಗ ಈ ವಿಷಯ ಬೆಳಕಿಗೆ ಬಂದಿದೆ. ಮುಂಜಾನೆ 6 ಗಂಟೆಯಿಂದ 7.30 ಗಂಟೆವರೆಗೂ ಈ ವ್ಯಕ್ತಿ ಎದ್ದು ಹೋಗುತ್ತಾರೆ ಎಂದು ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಕಾದು ನೋಡಿದ್ದಾರೆ. ಆದರೆ, ನಾಗೇಶ್ ಮಲಗಿದ್ದ ಸ್ಥಳದಿಂದ ಎದ್ದೇಳಲೇ ಇಲ್ಲ. ಇದನ್ನು ಗಮನಿಸಿದ ಸಿಬ್ಬಂದಿ‌ ಹತ್ತಿರಕ್ಕೆ ಹೋಗಿ ನೋಡಿದ್ದಾರೆ. ನಂತರ, ಆಸ್ಪತ್ರೆ ಭದ್ರತಾ ಸಿಬ್ಬಂದಿ ಕರೆದು ಪರಿಶೀಲನೆ ಮಾಡಿದ ಸಿಬ್ಬಂದಿಗೆ ನಾಗೇಶ್ ಸತ್ತು ಹೋಗಿರೋದನ್ನ ದೃಢ ಪಡಿಸಿಕೊಂಡಿದ್ದಾರೆ. 

ಕೆ.ಆರ್. ಆಸ್ಪತ್ರೆಯ ಆವರಣದಲ್ಲಿ ರೋಗಿಗಳ ಸಂಬಂಧಿಗಳಿಗೆ ಉಳಿಯಲು ಸರಿಯಾದ ವ್ಯವಸ್ಥೆ ಇಲ್ಲದಿರುವುದೇ ನಾಗೇಶ್ ಸಾವಿಗೆ ಕಾರಣ ಎಂಬ ಮಾತುಗಳು ಕೇಳಿ ಬಂದಿವೆ. ದಿನನಿತ್ಯ ನೂರಾರು ಸಂಖ್ಯೆಯಲ್ಲಿ ರೋಗಿಗಳು ದಾಖಲಾಗುವ ಆಸ್ಪತ್ರೆಯಲ್ಲಿ 20 ರಿಂದ 40 ಜನರಿಗಷ್ಟೇ ಮಲಗಲು ಶೆಲ್ಟರ್ ವ್ಯವಸ್ಥೆ ಇದೆ. ಹಾಗಾಗಿ, ರೋಗಿಗಳ ಸಂಬಂಧಿಗಳು ಚಳಿ, ಗಾಳಿ, ಮಳೆಯಲ್ಲಿ ಆಸ್ಪತ್ರೆ ಹೊರಗೇ ಮಲಗುವ ಸ್ಥಿತಿ ನಿರ್ಮಾಣ ಆಗಿದೆ. ಒಟ್ಟಾರೆ, ರೋಗ ವಾಸಿ ಮಾಡಿಕೊಂಡು, ಸಾವಿನಿಂದ ತಪ್ಪಿಸಿಕೊಳ್ಳೋಕೆ‌ ಜನ ಆಸ್ಪತ್ರೆಗೆ ಬರುತ್ತಾರೆ. ಆದರೆ, ಈತನ ಪ್ರಾಣ ಆಸ್ಪತ್ರೆ ಮುಂದೆ ಹೋಗಿದ್ದು ವಿಧಿಯಾಟ ಆಗಿದೆ. ಇದರಲ್ಲಿ ಆಸ್ಪತ್ರೆಯ ಆವರಣದಲ್ಲಿ ಸೌಲಭ್ಯದ ಕೊರತೆಯಿಂದಲೇ ಹೀಗೆ ಆಗಿದೆ ಅನ್ನೊದು ವಿಪರ್ಯಾಸವೆ ಸರಿ.

ಇದನ್ನೂ ಓದಿ: ₹3 ಲಕ್ಷ ಕಳ್ಳತನಕ್ಕೆ ಹೋದವನು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಸಿಕ್ಕಿಬಿದ್ದ!

Latest Videos
Follow Us:
Download App:
  • android
  • ios