₹3 ಲಕ್ಷ ಕಳ್ಳತನಕ್ಕೆ ಹೋದವನು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಸಿಕ್ಕಿಬಿದ್ದ!
ಮೈಸೂರು ಜಿಲ್ಲೆಯ ಗ್ರಾಮದಲ್ಲಿ ವಿಧವೆಯ ಮನೆಗೆ ಕಳ್ಳತನಕ್ಕೆ ನುಗ್ಗಿದ ಯುವಕನೊಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಸಿಕ್ಕಿಬಿದ್ದಿದ್ದಾನೆ. ಗ್ರಾಮಸ್ಥರು ಆತನನ್ನು ಕಂಬಕ್ಕೆ ಕಟ್ಟಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೈಸೂರು (ಜ.03): ಪತಿಯನ್ನು ಕಳೆದುಕೊಂಡು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ ಮಹಿಳೆಯ ಮನೆಗೆ ರಾತ್ರಿ ವೇಳೆ ಕಳ್ಳತನ ಮಾಡಲು ಮನೆಗೆ ನುಗಿದ್ದ ಯುವಕ ಮಲಗಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡು ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದಾನೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಬೊಕ್ಕಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳ್ಳತನ ಮಾಡಲು ಹೋಗಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿಸಿದ ಕಳ್ಳ ಹರ್ಷ ಇದೀಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದು ದರ್ಮದೇಟು ತಿಂದು ಪೊಲೀಸರ ಅತಿಥಿ ಆಗಿದ್ದಾರೆ. ಈತನನ್ನು ಪೊಲೀಸರಿಗೆ ಒಪ್ಪಿಸುವ ಮುನ್ನ ಗ್ರಾಮಸ್ಥರು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಕ್ಕೆ ಆತನಿಗೆ ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೊಕ್ಕಹಳ್ಳಿ ಗ್ರಾಮದ ಮಹಿಳೆ ಕಳೆದ 4 ತಿಂಗಳ ಹಿಂದೆ ತನ್ನ ಗಂಡನನ್ನು ಕಳೆದುಕೊಂಡಿದ್ದಳು. ಜೀವನೋಪಾಯಕ್ಕಾಗಿ ಮೈಸೂರಿನ ಬಿಸಿಎಂ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಳು. ಇವರಿಗೆ ಇದ್ದ ಒಂದು ಎಕರೆ ಜಮೀನನ್ನ ಭೋಗ್ಯಕ್ಕೆ ಹಾಕಿದ ಪರಿಣಾಮ ಮನೆಯಲ್ಲಿ 3 ಲಕ್ಷ ನಗದು ಇಟ್ಟುಕೊಂಡಿದ್ದಾರೆ. ಈ ಮಾಹಿತಿ ತಿಳಿದುಕೊಂಡಿದ್ದ ಕಳ್ಳ ಹರ್ಷ ಜನವರಿ 1ರ ಮಧ್ಯರಾತ್ರಿ ಮನೆಗೆ ನುಗ್ಗಿದ್ದಾನೆ. ಮನೆಯಲ್ಲಿ ಯಾರೋ ಬಂದಿದ್ದಾರೆ ಎಂಬ ಶಬ್ದವಾದ ಹಿನ್ನಲೆಯಲ್ಲಿ ಮನೆಯಲ್ಲಿದ್ದ ಮಹಿಳೆ ಎಚ್ಚರಗೊಂಡು ಪರಿಶೀಲಿಸಿದಾಗ ಅವರ ಅತ್ತೆ ಮಲಗಿದ್ದ ಮಂಚದ ಕೆಳಗೆ ಕಳ್ಳ ಹರ್ಷ ಅವಿತುಕೊಂಡಿರುವುದು ಗೊತ್ತಾಗಿದೆ.
ಇದನ್ನೂ ಓದಿ: ಪ್ರೀತಿಸಿದ ಹುಡುಗಿ ಬ್ರೇಕಪ್ ಹೇಳಿದ್ದಕ್ಕೆ ಜೀವ ಬಿಟ್ಟ ಯುವಕ!
ಆಗ ಧೈರ್ಯ ಮಾಡಿ ಕಳ್ಳನನ್ನು ಮಹಿಳೆ ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಆಗ ಆ ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಳ್ಳಲು ಆರಂಭಿಸಿದ ಕಳ್ಳ, ಮಹಿಳೆಯ ಖಾಸಗಿ ಅಂಗಾಂಗಗಳನ್ನು ಮುಟ್ಟಿ ಅಲ್ಲಿಂದ ಪರಾರಿ ಆಗಿದ್ದಾನೆ. ಈ ವಿಚಾರವನ್ನು ಮಹಿಳೆ ಗ್ರಾಮಸ್ಥರಿಗೆ ತಿಳಿಸಿದಾಗ ಆರೋಪಿ ಹರ್ಷನನ್ನ ಪತ್ತೆ ಹಚ್ಚಿ ಕಂಬಕ್ಕೆ ಕಟ್ಟಿಹಾಕಿ ಧರ್ಮದೇಟು ನೀಡಿದ್ದಾರೆ. ಆಗ ಹಣ ಕಳ್ಳತನ ಮಾಡಲು ಮನೆಗೆ ನುಗ್ಗಿದ್ದಾಗಿ ಹರ್ಷ ಒಪ್ಪಿಕೊಂಡಿದ್ದಾನೆ. ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಹರ್ಷನನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.