ಮೈಸೂರಿನಲ್ಲಿ 50:50 ನಿವೇಶನದ ಹಣ ವಾಪಸ್ ಕೇಳಿದ ವಿಚಾರಕ್ಕೆ ಆರ್‌ಟಿಐ ಕಾರ್ಯಕರ್ತ ಗಂಗರಾಜು ಮತ್ತು ಧನಂಜಯ ನಡುವೆ ಜಗಳ ನಡೆದಿದೆ. ಹಣ ವಾಪಸ್ ಕೇಳಿದ ಧನಂಜಯ ಕಾರಿನ ಬಾನೆಟ್ ಮೇಲೆ ಹತ್ತಿದ್ದು, ಗಂಗರಾಜು ಆತನನ್ನು ಹೊತ್ತೊಯ್ದ ಘಟನೆ ನಡೆದಿದೆ. 

ಮೈಸೂರು (ಮೇ.21): ಕೊಟ್ಟ ಹಣವನ್ನು ವಾಪಸ್ ಕೇಳಿದ ವ್ಯಕ್ತಿಗೆ ಆರ್‌ಟಿಐ ಕಾರ್ಯಕರ್ತನೊಬ್ಬ ಭಯಾನಕ ಅನುಭವ ನೀಡಿದ ಘಟನೆ ಕುವೆಂಪುನಗರದಲ್ಲಿ ನಡೆದಿದೆ. ಜನನಿಬಿಡ ಪ್ರದೇಶದಲ್ಲೇ ಹಾಡಹಗಲೇ ನಡೆದ ಈ ಘಟನೆ ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

50:50 ನಿವೇಶನದ ಹೆಸರಲ್ಲಿ ಹಣ ಪಡೆದ ಆರೋಪ

ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರಿಗೆ ಧನಂಜಯ ಎಂಬುವವರು 50:50 ಅನುಪಾತದಡಿ ನಿವೇಶನ ಖರೀದಿಗೆ ಹಣ ನೀಡಿದ್ದರೆಂದು ಹೇಳಲಾಗಿದೆ. ಆದರೆ ಮುಡಾ ಹಗರಣ ಬೆಳಕಿಗೆ ಬಂದ ಬಳಿಕ 50:50 ಅನುಪಾತದಡಿ ನಿವೇಶನ ಮಂಜೂರು ಪ್ರಕ್ರಿಯೆ ರದ್ದಾಗಿತ್ತು. ಇದಾದ ಬಳಿಕ ತಾನು ಕೊಟ್ಟ ಹಣವನ್ನು ವಾಪಸ್ ನೀಡುವಂತೆ ಧನಂಜಯ ಹಲವು ದಿನಗಳಿಂದ ಒತ್ತಾಯಿಸುತ್ತಿದ್ದರೆಂದು ತಿಳಿದುಬಂದಿದೆ.

ಸಬ್‌ ರಿಜಿಸ್ಟ್ರಾರ್ ಕಚೇರಿ ಬಳಿ ಜಗಳ

ಕಳೆದ ಹಲವು ದಿನಗಳಿಂದ ಹಣ ವಾಪಸ್ ಕೊಡುವಂತೆ ದುಂಬಾಲು ಬಿದಿದ್ದ ಧನಂಜಯ. ನಿನ್ನೆ ಸಬ್ ರಿಜಿಸ್ಟರ್ ಕಚೇರಿ ಬಳಿ ಗಂಗರಾಜು ಜೊತೆ ಗಲಾಟೆ ನಡೆದಿದೆ. ಇದೇ ವೇಳೆ ಗಂಗರಾಜು ಕಾರಿನಲ್ಲಿ ತೆರಳಲು ಮುಂದಾದಾಗ, ಹಣ ವಾಪಸ್ ಕೊಡಿಸುವಂತೆ ಒತ್ತಾಯಿಸಿ ಧನಂಜಯ ಕಾರಿನ ಬಾನೆಟ್ ಮೇಲೆ ಹತ್ತಿದ್ದಾನೆ ಎಂದು ಹೇಳಲಾಗಿದೆ.

ಬಾನೆಟ್ ಮೇಲೆಯೇ ಪೊಲೀಸ್ ಠಾಣೆವರೆಗೆ ಕಾರು ಚಾಲನೆ

ಇದಾದ ಬಳಿಕ ನಡೆದ ಘಟನೆಯ ದೃಶ್ಯಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಕಾರಿನ ಬಾನೆಟ್ ಮೇಲೆ ಧನಂಜಯ ಅಂಟಿಕೊಂಡಿದ್ದರು, ಗಂಗರಾಜು ಸಬ್‌ ರಿಜಿಸ್ಟ್ರಾರ್ ಕಚೇರಿಯಿಂದ ಕುವೆಂಪು ನಗರ ಪೊಲೀಸ್ ಠಾಣೆ ವ್ಯಾಪ್ತಿವರೆಗೆ ವೇಗವಾಗಿ ಕಾರು ಚಲಾಯಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಇಬ್ಬರಿಂದಲೂ ದೂರು: ಪೊಲೀಸರ ತನಿಖೆ ಆರಂಭ

ಈ ಸಂಬಂಧ ಧನಂಜಯ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮತ್ತೊಂದೆಡೆ ಗಂಗರಾಜು ಕೂಡ 'ಧನಂಜಯ ನನ್ನ ಮೇಲೆ ದಾಳಿ ಮಾಡಲು ಬಂದಿದ್ದರು. ಪ್ರಾಣರಕ್ಷಣೆಗಾಗಿ ಕಾರು ಚಲಾಯಿಸಿದೆ ಎಂದು ಪ್ರತಿದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಸಂಪೂರ್ಣ ಘಟನೆ ಕುರಿತು ತನಿಖೆ ಮುಂದುವರೆಸಿದ್ದಾರೆ.