ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ ಎಂದು ಎಐಸಿಸಿ ಅಧ್ಯಕ್ಷರೇ ಹೇಳಿರುವುದರಿಂದ ಆ ಚರ್ಚೆ ಅಪ್ರಸ್ತುತ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಉಪಚುನಾವಣೆ ಫಲಿತಾಂಶಕ್ಕೂ ಸಚಿವ ಸಂಪುಟ ಪುನಾರಚನೆಗೂ ಯಾವುದೇ ಸಂಬಂಧವಿಲ್ಲ, ಅದು ಒಂದು ಸಹಜ ಪ್ರಕ್ರಿಯೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ ಎಂದು ಎಐಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ಅವರೇ ಈ ರೀತಿ ಹೇಳಿದ ಮೇಲೆ ನಾವೆಲ್ಲ ಆ ವಿಚಾರ ಕುರಿತು ಮಾತನಾಡುವುದೇ ಅಪ್ರಸ್ತುತ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾವು ಮಾತನಾಡುವುದು ಅಪ್ರಸ್ತುತ

ಸದಾಶಿವನಗರದ ತಮ್ಮ ನಿವಾಸದ ಬಳಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಸಂದರ್ಭ ಬಂದಾಗ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದಾರೆ. ಅವರು ಹೇಳಿದ ಮೇಲೆ ಇನ್ನೇನು ಉಳಿಯಿತು. ಜತೆಗೆ ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ ಎಂದಿದ್ದಾರೆ. ಬದಲಾವಣೆಯಿದ್ದರೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಸಂದರ್ಭ, ಸನ್ನಿವೇಶ ಬರಲಿ ಎಂದು ಸ್ಪಷ್ಟಪಡಿಸಿದ್ದಾರೆ. ಅವರೇ ಹಾಗೆ ಹೇಳಿದ ಮೇಲೆ ನಾವು ಮಾತನಾಡುವುದು ಅಪ್ರಸ್ತುತ ಎಂದರು.

ಉಪಚುನಾವಣೆ ಫಲಿತಾಂಶ ನಂತರ ಸಚಿವ ಸಂಪುಟ ಪುನಾರಚನೆಯಾಗುತ್ತದೆ ಎಂಬ ಚರ್ಚೆ ಕುರಿತು ಮಾತನಾಡಿ, ಉಪಚುನಾವಣೆ ಫಲಿತಾಂಶಕ್ಕೂ ಸಚಿವ ಸಂಪುಟ ಪುನಾರಚನೆಗೂ ಸಂಬಂಧವಿಲ್ಲ. ಸಚಿವ ಸಂಪುಟ ಪುನಾರಚನೆ ಎಂಬುದು ಸಹಜ ಪ್ರಕ್ರಿಯೆ. ಸರ್ಕಾರ ರಚನೆಯಾದ ಎರಡೂವರೆಯಿಂದ ಮೂರು ವರ್ಷಗಳಿಗೆ ಸಚಿವ ಸಂಪುಟ ಪುನಾರಚನೆಯಾಗುವುದು ಸಹಜ. ಸದ್ಯಕ್ಕೆ ಅದರ ಚರ್ಚೆಯಿಲ್ಲ. ಚರ್ಚೆ ಶುರುವಾದಾಗ ಆ ವಿಚಾರದ ಬಗ್ಗೆ ಮಾತನಾಡೋಣ ಎಂದು ತಿಳಿಸಿದರು.

ಇದನ್ನೂ ಓದಿ: 2ನೇ ಸಂಸಾರ ಪೋಷಿಸುವ ವ್ಯಕ್ತಿ ತನ್ನ ತಾಯಿ ಪೋಷಣೆ ನಿರಾಕರಿಸುವಂತಿಲ್ಲ: ಹೈಕೋರ್ಟ್ ಆದೇಶ

ಚು.ಆಯೋಗ ಜೇಬಲ್ಲಿಟ್ಟುಕೊಂಡು ಗೆಲುವು

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಮಾತನಾಡಿದ ಪ್ರಿಯಾಂಕ್‌ ಖರ್ಗೆ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವು ಸಾಧಿಸಿಲ್ಲ. ಅದು ಚುನಾವಣಾ ಆಯೋಗದ ಗೆಲುವು. ಎಸ್‌ಐಆರ್‌, ಕ್ಷೇತ್ರ ಮರುವಿಂಗಡಣೆ ಮೂಲಕ ಚುನಾವಣೆ ಹೇಗೆ ನಡೆಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಜನರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿ, 27 ಲಕ್ಷ ಜನರು ದೂರು ನೀಡಿದ್ದರೂ ಅದನ್ನು ಇತ್ಯರ್ಥ ಮಾಡದೆ ಚುನಾವಣೆ ನಡೆಸಲಾಗಿದೆ. ಬಿಜೆಪಿ ಚುನಾವಣಾ ಆಯೋಗವನ್ನು ಜೇಬಲ್ಲಿಟ್ಟುಕೊಂಡು ಗೆಲುವು ಸಾಧಿಸಿದೆ. ಪಶ್ಚಿಮ ಬಂಗಾಳದ ಮಾದರಿಯ್ಲೇ ಕರ್ನಾಟಕದಲ್ಲೂ ಎಸ್‌ಐಆರ್‌ ಮಾಡುವ ಸಾಧ್ಯತೆಯಿದ್ದು, ಅದರ ಬಗ್ಗೆ ಎಚ್ಚರವಹಿಸುತ್ತೇವೆ ಎಂದರು.

ಇದನ್ನೂ ಓದಿ: ಮುಂದಿನ ವಾರ ಸಿದ್ದು, ಡಿಕೆಗೆ ದಿಲ್ಲಿಗೆ ಬುಲಾವ್‌? ನಾಯಕತ್ವ, ಸಂಪುಟ ಪುನಾರಚನೆ ಚರ್ಚೆ ಸಂಭವ