ಕೇಂದ್ರ ಸರ್ಕಾರದ ಆದೇಶದನ್ವಯ ರಾಜ್ಯದೆಲ್ಲೆಡೆ ಕಾರಿನಲ್ಲಿ ಚಾಲಕ ಮಾತ್ರವಲ್ಲದೆ ಸಹ ಪ್ರಯಾಣಿಕರು ಕೂಡಾ ಕಡ್ಡಾಯವಾಗಿ ಸೀಲ್‌ ಬೆಲ್ಟ್‌ ಹಾಕಬೇಕಿದ್ದು, ತಪ್ಪಿದರೆ ಕಾರಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರೂ ಒಂದು ಸಾವಿರು ರು.ಗಳಂತೆ ದಂಡ ತೆರಬೇಕಾಗುತ್ತದೆ. 

ಬೆಂಗಳೂರು (ಅ.21): ಕೇಂದ್ರ ಸರ್ಕಾರದ ಆದೇಶದನ್ವಯ ರಾಜ್ಯದೆಲ್ಲೆಡೆ ಕಾರಿನಲ್ಲಿ ಚಾಲಕ ಮಾತ್ರವಲ್ಲದೆ ಸಹ ಪ್ರಯಾಣಿಕರು ಕೂಡಾ ಕಡ್ಡಾಯವಾಗಿ ಸೀಲ್‌ ಬೆಲ್ಟ್‌ ಹಾಕಬೇಕಿದ್ದು, ತಪ್ಪಿದರೆ ಕಾರಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರೂ ಒಂದು ಸಾವಿರು ರು.ಗಳಂತೆ ದಂಡ ತೆರಬೇಕಾಗುತ್ತದೆ. ಈ ಹೊಸ ನಿಯಮ ಬುಧವಾರದಿಂದಲೇ ಜಾರಿಗೆ ಬಂದಿದೆ. ಜನರ ಪ್ರಾಣ ಸುರಕ್ಷತೆ ಸಲುವಾಗಿ ದೇಶಾದ್ಯಂತ ಸೀಟ್‌ ಬೆಲ್ಟ್‌ ಧರಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಈ ಮೊದಲು ಸೀಟ್‌ ಬೆಲ್ಟ್‌ ಹಾಕದ ಚಾಲಕನಿಗೆ ಮಾತ್ರ 500 ರು. ದಂಡ ವಿಧಿಸಲಾಗುತ್ತಿತ್ತು. 

ಈ ದಂಡದ ಮೊತ್ತವನ್ನು ಪರಿಷ್ಕರಿಸಿರುವ ಸರ್ಕಾರವು, ಕಾರಿನಲ್ಲಿ ಪ್ರಯಾಣಿಸುವ ಎಲ್ಲರಿಗೂ ಸೀಟ್‌ ಬೆಲ್ಟ್‌ ಹಾಕುವುದು ಕಡ್ಡಾಯಗೊಳಿಸಿದೆ. ಬೆಂಗಳೂರಿನಲ್ಲಿ ಸೀಟ್‌ ಬೆಲ್ಟ್‌ ಹಾಕದವರಿಗೆ ಒಂದು ಸಾವಿರ ರು. ದಂಡ ವಿಧಿಸಲಾಗುತ್ತದೆ. ಪದೇ ಪದೇ ತಪ್ಪು ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆದರೆ ದಂಡವು ಕೇಂದ್ರ ಸರ್ಕಾರದ ಆದೇಶದಂತೆ ಒಂದು ಸಾವಿರ ರು. ಮಾತ್ರ ಇರಲಿದೆ ಎಂದು ಜಂಟಿ ಆಯುಕ್ತ (ಸಂಚಾರ) ಡಾ.ಬಿ.ಆರ್‌.ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ.

ಎಚ್ಚರ ಎಚ್ಚರ... ಸೀಟ್‌ ಬೆಲ್ಟ್‌ ಧರಿಸದಿದ್ದರೆ ಇನ್ನು 1000 ರು. ದಂಡ!

ಸೀಟ್‌ ಬೆಲ್ಟ್‌ ಅಳವಡಿಸಬೇಕು-ಪೊಲೀಸರ ಸೂಚನೆ: 2020ರ ಜನವರಿ ಬಳಿಕ ಮಾರುಕಟ್ಟೆಬಂದಿರುವ ಎಲ್ಲ ಮಾದರಿ ಕಾರುಗಳಿಗೆ ಮುಂಬದಿ ಹಾಗೂ ಹಿಂಬದಿ ಸೀಟ್‌ ಬೆಲ್ಟ್‌ ಸೌಲಭ್ಯವಿದೆ. ಆದರೆ ಆ ವರ್ಷಕ್ಕಿಂತ ಹಿಂದಿನ ಎಲ್ಲ ಹಳೆಯ ಕಾರುಗಳಿಗೆ ಹಿಂಬದಿ ಸೀಟ್‌ ಬೆಲ್ಟ್‌ ಅಲಭ್ಯವಾಗಿದ್ದು, ಕೇಂದ್ರ ಸರ್ಕಾರದ ಆದೇಶದನ್ವಯ ಆ ಕಾರುಗಳು ಕೂಡಾ ಸೀಟ್‌ ಬೆಲ್ಟ್‌ ಅಳವಡಿಸಿಕೊಳ್ಳಬೇಕಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ಸೀಟ್‌ ಬೆಲ್ಟ್‌ ವಿಷಯದಲ್ಲಿ ರಿಯಾಯತಿ ತೋರದೆ ಅನುಷ್ಠಾನಗೊಳಿಸುವಂತೆ ಸ್ಪಷ್ಟಪಡಿಸಿದೆ. ಹಾಗೆಯೇ ನಿಗದಿತ ಪ್ರಯಾಣಕರಿಗಿಂತ ಹೆಚ್ಚಿನವರು ಪ್ರಯಾಣಿಸಿದರೆ ಅದೂ ತಪ್ಪಾಗುತ್ತದೆ. ಸೀಟ್‌ ಬೆಲ್ಟ್‌ ಎಷ್ಟು ಜನರಿಗೆ ಲಭ್ಯವಿರುತ್ತದೆಯೋ ಅವರೆಲ್ಲ ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಉಳಿದ ಪ್ರಯಾಣಿಕರ ಬಗ್ಗೆ ಸರ್ಕಾರ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಹಳೆ ಕಾರುಗಳಿಗೆ ಕಾಲಾವಕಾಶ?: ಸೀಟ್‌ ಬೆಲ್ಟ್‌ ಸೌಲಭ್ಯವಿಲ್ಲದ ಹಳೆಯ ಕಾರುಗಳಿಗೆ ಸೀಟ್‌ ಬೆಲ್ಟ್‌ ಅಳವಡಿಸಿಕೊಳ್ಳಲು ಪೊಲೀಸರು ಸಮಯಾವಕಾಶ ನೀಡುವ ಬಗ್ಗೆ ಚಿಂತನೆ ನಡೆಸಿದ್ದು, ಈ ಬಗ್ಗೆ ಎರಡ್ಮೂರು ದಿನಗಳಲ್ಲಿ ಸರ್ಕಾರದ ನಿರ್ಧಾರ ಪ್ರಕಟಿಸಬಹುದು ಎಂದು ಮೂಲಗಳು ಹೇಳಿವೆ.

ಕಾರುಗಳಲ್ಲಿ ಆರು ಏರ್ಬ್ಯಾಗ್ ಕಡ್ಡಾಯ: ಆದೇಶದ ಜಾರಿ ಮುಂದೂಡಿಕೆ ಸಾಧ್ಯತೆ

ಸೀಟ್‌ ಬೆಲ್ಟ್‌ ಜಾಗೃತಿ ಬಳಿಕ ದಂಡ ಪ್ರಯೋಗ: ಸೀಟ್‌ ಬೆಲ್ಟ್‌ ಹಾಕದ ತಪ್ಪಿಗೆ ಏಕಾಏಕಿ ದಂಡ ಪ್ರಯೋಗ ಜಾರಿಗೊಳಿಸಿದರೆ ಸಾರ್ವಜನಿಕರ ಸಿಟ್ಟಿಗೆ ಗುರಿಯಾಗಬಹುದು ಎಂದು ಭಾವಿಸಿರುವ ಪೊಲೀಸರು, ಈ ಸಂಬಂಧ ಜಾಗೃತಿ ಮೂಡಿಸಿ ಬಳಿಕ ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ. ಈಗಾಗಲೇ ಠಾಣಾ ಮಟ್ಟದಲ್ಲಿ ಪೊಲೀಸರಿಗೆ ಸೀಟ್‌ ಬೆಲ್ಟ್‌ ಕುರಿತು ಅರಿವು ಮೂಡಿಸುವಂತೆ ಅಧಿಕಾರಿಗಳು ಕೂಡಾ ಸೂಚಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನ ಫಲಕಗಳು ಹಾಗೂ ಜಾಹೀರಾತು ಮೂಲಕ ಜಾಗೃತಿ ಹಮ್ಮಿಕೊಂಡಿದ್ದಾರೆ.