ಸೀಟ್‌ ಬೆಲ್ಟ್‌ ಹಾಕದೆ ಕಾರು ಚಾಲನೆ ಮಾಡುವ ಮುನ್ನ ನಾಗರಿಕರೇ ಎಚ್ಚರ ವಹಿಸಿ. ಇನ್ನು ಮುಂದೆ ಸೀಟ್‌ ಬೆಲ್ಟ್‌ ಇಲ್ಲದೆ ವಾಹನ ಚಲಾಯಿಸುವವರಿಗೆ 1 ಸಾವಿರ ರು. ದಂಡ ಬೀಳಲಿದೆ. - ಈ ಸಂಬಂಧ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಆದೇಶ ಹೊರಡಿಸಿದ್ದಾರೆ. 

ಬೆಂಗಳೂರು (ಅ.20): ಸೀಟ್‌ ಬೆಲ್ಟ್‌ ಹಾಕದೆ ಕಾರು ಚಾಲನೆ ಮಾಡುವ ಮುನ್ನ ನಾಗರಿಕರೇ ಎಚ್ಚರ ವಹಿಸಿ. ಇನ್ನು ಮುಂದೆ ಸೀಟ್‌ ಬೆಲ್ಟ್‌ ಇಲ್ಲದೆ ವಾಹನ ಚಲಾಯಿಸುವವರಿಗೆ 1 ಸಾವಿರ ರು. ದಂಡ ಬೀಳಲಿದೆ. - ಈ ಸಂಬಂಧ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಆದೇಶ ಹೊರಡಿಸಿದ್ದಾರೆ. ಪ್ರಸುತ್ತ ರಾಜ್ಯದಲ್ಲಿ ಸೀಟ್‌ ಬೆಲ್ಟ್‌ ಹಾಕದೆ ಕಾರು ಚಲಾಯಿಸುವವರಿಗೆ 500 ರು ದಂಡ ವಿಧಿಸಲಾಗುತ್ತಿದ್ದು, ಬುಧವಾರದಿಂದ ಆ ದಂಡದ ಮೊತ್ತವು 1 ಸಾವಿರ ರು.ಗಳಿಗೆ ಏರಿಕೆ ಆಗಿದೆ. ಹೀಗಾಗಿ, ಕಾರು ಚಲಾಯಿಸುವ ಮುನ್ನ ಜಾಗ್ರತೆ ವಹಿಸಿ ಚಾಲಕರು ಸೀಟ್‌ ಹಾಕಿಕೊಳ್ಳುವುದೊಳಿತು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಕನ್ನಡಪ್ರಭ ಸರಣಿ ವರದಿ ಪ್ರಕಟಿಸಿತ್ತು: ಮಹಾರಾಷ್ಟ್ರದಲ್ಲಿ ಸೆ.4ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಖ್ಯಾತ ಉದ್ಯಮಿ, ಟಾಟಾ ಸಮೂಹದ ಮಾಜಿ ಮುಖ್ಯಸ್ಥ ಸೈರಸ್‌ ಮಿಸ್ತ್ರಿ ಮೃತಪಟ್ಟಿದ್ದರು. ಕಾರು ಪ್ರಯಾಣದ ವೇಳೆ ಸೀಟ್‌ ಬೆಲ್ಟ್‌ ಹಾಕದೆ ಹೋಗಿದ್ದು ಸೈರಸ್‌ ಅವರ ಸಾವಿಗೆ ಪ್ರಮುಖ ಕಾರಣವಾಗಿತ್ತು ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು. ಈ ಘಟನೆ ಬಳಿಕ ದೇಶಾದ್ಯಂತ ಸೀಟ್‌ ಬೆಲ್ಟ್‌ ಬಗ್ಗೆ ಜಾಗೃತಿ ಅಭಿಯಾನಗಳು ಶುರುವಾಗಿದ್ದವು. ಈ ಅಭಿಯಾನಕ್ಕೆ ‘ಕನ್ನಡಪ್ರಭ’ ಕೂಡ ಸೀಟ್‌ ಬೆಲ್ಟ್‌ ಮಹತ್ವದ ಕುರಿತು ಸರಣಿ ವಿಶೇಷ ವರದಿ ಪ್ರಕಟಿಸಿ ದನಿಗೂಡಿಸಿತ್ತು.

PSI Recruitment Scam: ಮುಂದಿನ ತಿಂಗಳು ಎಸ್‌ಐ ಕೇಸ್‌ ಚಾರ್ಜ್‌ಶೀಟ್‌: ಡಿಜಿಪಿ ಪ್ರವೀಣ್‌ ಸೂದ್‌

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸಚಿವ ನಿತಿನ್‌ ಗಡ್ಕರಿ ಅವರು, ಕಾರಿನಲ್ಲಿ ಚಾಲಕ ಸೇರಿದಂತೆ ಎಲ್ಲರೂ ಕಡ್ಡಾಯವಾಗಿ ಸೀಟ್‌ ಬೆಲ್ಟ್‌ ಹಾಕಬೇಕು. ಸೀಟ್‌ ಬೆಲ್ಟ್‌ ಹಾಕದ ತಪ್ಪಿಗೆ ವಿಧಿಸುವ ದಂಡದ ಮೊತ್ತವನ್ನು ಹೆಚ್ಚಿಸುವುದಾಗಿ ಎಚ್ಚರಿಕೆ ನೀಡಿದ್ದರು. ಅಂತೆಯೇ ಕೇಂದ್ರ ಸರ್ಕಾರವು ಸೀಟ್‌ ಬೆಲ್ಟ್‌ ಹಾಕದ ಪ್ರಕರಣಕ್ಕೆ ದಂಡವನ್ನು ಹೆಚ್ಚಿಸಿ ಆದೇಶಿಸಿತ್ತು. 3 ವರ್ಷಗಳ ಹಿಂದೆ ಸೀಟ್‌ ಬೆಲ್ಟ್‌ ದಂಡ ಮೊತ್ತವನ್ನು ಪರಿಷ್ಕರಿಸಿದ ಸರ್ಕಾರವು, 100 ರು.ನಿಂದ 500 ರು.ಗೆ ಹೆಚ್ಚಿಸಿತ್ತು. ಈಗ ಎರಡನೇ ಬಾರಿಗೆ ದಂಡ ಮೊತ್ತ ಪರಿಷ್ಕರಣೆಗೊಳಗಾಗಿದೆ.

ಸೋಮವಾರದಿಂದ ದಂಡ ಪ್ರಯೋಗ?: ಡಿಜಿಪಿ ಆದೇಶ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಸೀಟ್‌ ಬೆಲ್ಟ್‌ ಹಾಕದ ಕಾರು ಚಾಲಕರಿಗೆ ಸೋಮವಾರದಿಂದ ಅಧಿಕೃತವಾಗಿ ಜಾರಿಗೆ ಬರುವ ಸಾಧ್ಯತೆಗಳಿವೆ. ಈ ಪರಿಷ್ಕೃತ ದಂಡ ವಿಧಿಸಲು ಪಿಡಿಎ ಯಂತ್ರಗಳು ಅಪ್‌ಡೇಟ್‌ ಆಗಬೇಕಿದೆ. ಈ ಪ್ರಕ್ರಿಯೆ ಎರಡ್ಮೂರು ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಸೋಮವಾರದಿಂದ ಸೀಟ್‌ ಬೆಲ್ಟ್‌ ಹಾಕದ ವಾಹನ ಚಾಲಕರಿಗೆ ದಂಡ ವಿಧಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತ್ಯಾಜ್ಯ ನಿರ್ವಹಣೆ ಲೋಪ: ಕರ್ನಾಟಕಕ್ಕೆ 2900 ಕೋಟಿ ದಂಡ

ಸೈರಸ್‌ ಮಿಸ್ತ್ರಿ ಸಾವಿನ ಎಫೆಕ್ಟ್
- ಕಾರು ಅಪಘಾತದಲ್ಲಿ ಇತ್ತೀಚೆಗೆ ಮೃತಪಟ್ಟಿದ್ದ ಉದ್ಯಮಿ ಸೈರಸ್‌ ಮಿಸ್ತ್ರಿ
- ಸೀಟು ಬೆಲ್ಟ್‌ ಹಾಕದಿದ್ದುದೇ ಸಾವಿಗೆ ಕಾರಣವೆಂದು ತನಿಖೆಯಲ್ಲಿ ಪತ್ತೆ
- ಕಾರಿನ ಚಾಲಕರಿಗೆ ಈ ಹಿಂದಿನಿಂದಲೇ ಸೀಟು ಬೆಲ್ಟ್‌ ಕಡ್ಡಾಯವಿತ್ತು
- ಅದರ ದಂಡ 3 ವರ್ಷದ ಹಿಂದೆ 100ರಿಂದ 500ಕ್ಕೆ ಏರಿಸಿದ್ದ ಕರ್ನಾಟಕ
- ಈಗ ಕೇಂದ್ರದ ಸೂಚನೆಯಂತೆ 1000 ರು.ಗೆ ಏರಿಸಿದ ಪೊಲೀಸ್‌ ಇಲಾಖೆ