*   ಟ್ರಯಲ್‌ ಕೋರ್ಟ್‌ ವಿಚಾರಣೆ ರದ್ದು ಮಾಡಿದ ಹೈಕೋರ್ಟ್‌*  ದಾವೆ ಹೂಡಿದ್ದ ನಿವೃತ್ತ ಡಿಜಿಪಿ ಸತ್ಯನಾರಾಯಣರಾವ್‌*  ನ್ಯಾಯಾಲಯಕ್ಕೆ 20 ಕೋಟಿ ರು. ಮೊತ್ತಕ್ಕೆ ದಾಖಲಾಗಿದ್ದ ಖಾಸಗಿ ಮಾನನಷ್ಟ ಮೊಕದ್ದಮೆ  

ಬೆಂಗಳೂರು(ಜೂ.16):  ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ವಿರುದ್ಧ ನಿವೃತ್ತ ಡಿಜಿಪಿ ಎಚ್‌.ಎನ್‌. ಸತ್ಯನಾರಾಯಣ ರಾವ್‌ ದಾಖಲಿಸಿದ್ದ ಮಾನನಷ್ಟಮೊಕದ್ದಮೆಗೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಮಾನನಷ್ಟ ಮೊಕದ್ದಮೆ ಸಂಬಂಧ ತಮ್ಮ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಡಿ.ರೂಪಾ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ನನಗೆ ಬೆದರಿಕೆ ಹಾಕ್ತಾರೆ: ರೂಪಾ

ಪೂರ್ವಾನುಮತಿ ಪಡೆಯದ ರಾವ್‌:

ಸರ್ಕಾರಿ ಸೇವೆಯಲ್ಲಿರುವ ಡಿ.ರೂಪಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಮತ್ತು ಪ್ರಾಸಿಕ್ಯೂಷನ್‌ಗಾಗಿ ದೂರುದಾರರಾದ ಸತ್ಯನಾರಾಯಣ ರಾವ್‌ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿಲ್ಲ. ರೂಪಾ ಅವರು ಸತ್ಯನಾರಾಯಣ್‌ ರಾವ್‌ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಇಲಾಖೆಯ ಮುಖ್ಯಸ್ಥರಿಗೆ ಬರೆದಿರುವ ಪತ್ರವು ಅಧಿಕೃತ ಕರ್ತವ್ಯ ನಿರ್ವಹಣೆಯ ಭಾಗವಾಗಿದೆ. ಹಾಗಾಗಿ, ಅದು ಮಾನನಷ್ಟ ಪ್ರಕರಣವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಪ್ರಕರಣದ ವಿಚಾರಣೆ ಮುಂದುವರಿಸಲು ವಿಚಾರಣಾ ನ್ಯಾಯಾಲಯಕ್ಕೆ ಅನುಮತಿ ನೀಡಿದರೆ, ಅದು ಕಾನೂನು ದುರ್ಬಳಕೆಯಾಗಲಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌, ರೂಪಾ ವಿರುದ್ಧದ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿದೆ .

ಪ್ರಕರಣದ ವಿವರ:

2017ರ ಜು.12ರಂದು ರಾಜ್ಯ ಕಾರಾಗೃಹಗಳ ಇಲಾಖೆ ಡಿಜಿಐ ಆಗಿದ್ದ ಡಿ. ರೂಪಾ ಸರ್ಕಾರಕ್ಕೆ ವರದಿ ಸಲ್ಲಿಸಿ, ಕಾರಾಗೃಹ ಇಲಾಖೆ ಡಿಜಿಪಿಯಾಗಿದ್ದ ಎಚ್‌.ಎನ್‌. ಸತ್ಯನಾರಾಯಣ ರಾವ್‌ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿತರಾಗಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ಅವರಿಗೆ ವಿಶೇಷ ಸೌಲಭ್ಯ ಕಲ್ಪಿಸಲು 2 ಕೋಟಿ ರು. ಲಂಚ ಪಡೆದಿದ್ದಾರೆ ಎಂದು ವರದಿಯಲ್ಲಿ ಆರೋಪಿಸಿದ್ದರು.

ನಿಯಮಬಾಹಿರವಾಗಿ 6 ಕೋಟಿ ರೂ ಟೆಂಡರ್‌ ಆರೋಪಕ್ಕೆ ಡಿ. ರೂಪ ಸ್ಪಷ್ಟನೆ

2017ರ ಜು.31ರಂದು ಸೇವೆಯಿಂದ ನಿವೃತ್ತರಾಗಿದ್ದ ಸತ್ಯನಾರಾಯಣ ರಾವ್‌, ಡಿ.ರೂಪಾ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ನಗರದ 9ನೇ ಎಸಿಎಂಎಂ ನ್ಯಾಯಾಲಯಕ್ಕೆ 20 ಕೋಟಿ ರು. ಮೊತ್ತಕ್ಕೆ ಖಾಸಗಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ವಿಚಾರಣೆ ವೇಳೆ ಡಿ.ರೂಪಾ ಪರ ವಕೀಲರು, ‘ಅರ್ಜಿದಾರರು ತಮ್ಮ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ದೂರುದಾರರ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ತಪಾಸಣೆಯ ವೇಳೆ ಜೈಲಿನಲ್ಲಿ ಕಂಡ ಸತ್ಯಾಂಶಗಳನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಹಾಗಾಗಿ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 199 ಪ್ರಕಾರ ಸರ್ಕಾರಿ ಸೇವಕರ ವಿರುದ್ಧ ಮಾನನಷ್ಟಮೊಕದ್ದಮೆ ಹೂಡಬೇಕಾದರೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಈ ಪ್ರಕರಣದಲ್ಲಿ ದೂರುದಾರರು ಯಾವುದೇ ಪೂರ್ವಾನುಮತಿ ಪಡೆದಿಲ್ಲ’ ಎಂದು ತಿಳಿಸಿದ್ದರು. ಈ ವಾದವನ್ನು ಒಪ್ಪಿದ ಹೈಕೋರ್ಚ್‌ ಮಾನನಷ್ಟಮೊಕದ್ದಮೆ ಸಂಬಂಧ ನಡೆಯುತ್ತಿದ್ದ ವಿಚಾರಣೆಯನ್ನು ರದ್ದು ಮಾಡಿದೆ.