*  ನನಗೆ ಆ್ಯಸಿಡ್‌ ಎರಚುವ ಬೆದರಿಕೆ ಬಗ್ಗೆ ನಾನೆಲ್ಲೂ ಹೇಳಿಕೊಂಡಿಲ್ಲ*  ರಾಘವೇಂದ್ರ ಶೆಟ್ಟಿ ಮತ್ತು ರೂಪಾ ಮೌದ್ಗಿಲ್‌ ನಡುವೆ ನಡೆದಿರುವ ಮಾತಿನ ಜಟಾಪಟಿ*  ಜಟಾಪಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ 

ಬೆಂಗಳೂರು(ಜೂ.03): ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಬೇಳೂರು ರಾಘವೇಂದ್ರ ಶೆಟ್ಟಿ ನನ್ನ ಮುಖಕ್ಕೆ ಆ್ಯಸಿಡ್‌ ಎರಚಿಸುವ ಬೆದರಿಕೆ ಹಾಕಿದ್ದು, ಈ ಬಗ್ಗೆ ನಾನೆಲ್ಲೂ ಹೇಳಿಕೊಂಡಿಲ್ಲ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಮೌದ್ಗಿಲ್‌ ಗಂಭೀರ ಆರೋಪ ಮಾಡಿದ್ದಾರೆ.

ಮೇ 27ರಂದು ನಡೆದ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವಾರ್ಷಿಕ ಸಭೆಯಲ್ಲಿ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ರೂಪಾ ಮೌದ್ಗಿಲ್‌ ನಡುವೆ ನಡೆದಿರುವ ಮಾತಿನ ಜಟಾಪಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

CCTV ವಿರೂಪಗೊಳಿಸಿರುವ ಆರೋಪ, ನಿಗಮದ ಅಧ್ಯಕ್ಷ ವಿರುದ್ಧ IPS ಡಿ. ರೂಪ ದೂರು

ಈ ಕುರಿತು ಪ್ರತಿಕ್ರಿಯಿಸಿರುವ ರೂಪಾ ಮೌದ್ಗಿಲ್‌, ‘ಸಭೆಯಲ್ಲಿ ಬೇಳೂರು ರಾಘವೇಂದ್ರ ಶೆಟ್ಟಿ ಒಂದು ಗಂಟೆಗಳ ಕಾಲ ಕೂಗಾಡಿ ಸಭೆ ನಡೆಯದಂತೆ ಅಡ್ಡಿಪಡಿಸಿದರು. ತಾನು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡರೆ ರೂಪಾ ಕಾರಣ ಎಂದು ಹೇಳುವ ಮೂಲಕ ನನಗೆ ಬೆದರಿಕೆ ಒಡ್ಡಿದರು. ಅದಲ್ಲದೆ, ನನ್ನ ಮುಖಕ್ಕೆ ಆ್ಯಸಿಡ್‌ ಎರಚಿಸುವ ಬೆದರಿಕೆ ಕೂಡಾ ಹಾಕಿದ್ದಾರೆ. ಐಪಿಸಿ ಪ್ರಕಾರ, ಆತ್ಮಹತ್ಯೆಯ ಬೆದರಿಕೆ ಹಾಕುವುದು ಶಿಕ್ಷಾರ್ಹ ಅಪರಾಧ. ಈ ಬಗ್ಗೆ ಪ್ರಕರಣ ದಾಖಲಿಸಲು ಅನುಮತಿ ಕೊಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ನೀಡಿರುವ ಆರು ಪುಟದ ವರದಿಯಲ್ಲಿ ಕೋರಿದ್ದೇನೆ. ಸಭೆಯಲ್ಲಿ ನಡೆದ ಜಟಾಪಟಿ ಬೆದರಿಕೆಯೊಡ್ಡುವ ಘಟನೆ ಬಗ್ಗೆ ಸರ್ಕಾರಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಸಾರ್ವಜನಿಕವಾಗಿ ಎಲ್ಲಿಯೂ ಹೇಳಿರಲಿಲ್ಲ. ಬಳಿಕ ಇದಾವುದನ್ನು ಲೆಕ್ಕಿಸದೆ ಕೆಲಸ ಮಾಡುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ಬೇಳೂರು ರಾಘವೇಂದ್ರ ಶೆಟ್ಟಿಮತ್ತು ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ ನಡುವೆ ಪತ್ರ ಸಮರ ಆರಂಭವಾಗಿತ್ತು. ಭ್ರಷ್ಟಾಚಾರ ಮತ್ತು ಅಧಿಕಾರ ದುರ್ಬಳಕೆಯ ಆರೋಪದಡಿ ಇಬ್ಬರೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದರು. ರಾಘವೇಂದ್ರ ಶೆಟ್ಟಿ ಮಂಗಳವಾರ (ಮೇ 31) ಮುಖ್ಯ ಕಾರ್ಯದರ್ಶಿಯವರಿಗೆ ಆರು ಪುಟಗಳ ಪತ್ರ ಬರೆದು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದರು.

ನಿಗಮದ ಕಡತಗಳನ್ನು ನೀಡುವಂತೆ ಪತ್ರ ಬರೆದರೂ ಸ್ಪಂದಿಸುತ್ತಿಲ್ಲ ಎಂದು ದೂರಿದ್ದರು. ಬುಧವಾರ (ಜೂನ್‌ 1) ಪ್ರತಿ ದೂರು ಸಲ್ಲಿಸಿರುವ ಡಿ.ರೂಪಾ, ‘ನಿಗಮದ ಅಧ್ಯಕ್ಷರು ಅಧಿಕಾರ ಇಲ್ಲದಿದ್ದರೂ ದೈನಂದಿನ ಆಡಳಿತದಲ್ಲಿ ಹಸ್ತಕ್ಷೇಪನಡೆಸುತ್ತಿದ್ದಾರೆ. 25 ಕೋಟಿ ರು.ಅಕ್ರಮ ನಡೆಸಿ ಪ್ರಧಾನ ವ್ಯವಸ್ಥಾಪಕ ವಜಾಗೊಂಡಿರುವ ಕಿಶೋರ್‌ ಕುಮಾರ್‌ ಎಂಬುವವರನ್ನು ಮರಳಿ ಅದೇ ಹುದ್ದೆಗೆ ನೇಮಕ ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದರು.