Asianet Suvarna News Asianet Suvarna News

ನಿಯಮಬಾಹಿರವಾಗಿ 6 ಕೋಟಿ ರೂ ಟೆಂಡರ್‌ ಆರೋಪಕ್ಕೆ ಡಿ. ರೂಪ ಸ್ಪಷ್ಟನೆ

* ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿಗೆ ಡಿ ರೂಪ ತಿರುಗೇಟು
* ನಿಯಮಬಾಹಿರವಾಗಿ 6 ಕೋಟಿ ರೂ ಟೆಂಡರ್‌ ಆರೋಪಕ್ಕೆ ಡಿ. ರೂಪ ಸ್ಪಷ್ಟನೆ
* ನಿಯಮಬಾಹಿರವಾಗಿ 6 ಕೋಟಿ ರೂ ಟೆಂಡರ್‌ ಕರೆದಿದ್ದಾರೆ ಎಂದು ಆರೋಪಿಸಿದ್ದ ರಾಘವೇಂದ್ರ ಶೆಟ್ಟಿ

IPS D Roopa Gives clarification On 6 crore Illegally tender allegation rbj
Author
Bengaluru, First Published Jun 2, 2022, 5:08 PM IST

ಬೆಂಗಳೂರು, (ಜೂನ್.02): ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಹಾಗೂ ಗಮದ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಮೌದ್ಗಿಲ್‌ ನಡುವಿನ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ.

ನಿಯಮಬಾಹಿರವಾಗಿ 6 ಕೋಟಿ ರೂ ಟೆಂಡರ್‌ ಕರೆದಿದ್ದಾರೆ ಎನ್ನುವ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಆರೋಪಕ್ಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಮೌದ್ಗಿಲ್‌ ಸ್ಪಷ್ಟನೆ ಕೊಟ್ಟಿದ್ದಾರೆ.

ಕ್ರಮಬದ್ಧವಾಗಿ  ಟೆಂಡರ್‌
ನಿಯಮಬಾಹಿರವಾಗಿ ಆರು ಕೋಟಿ ಟೆಂಡರ್‌ ಕರೆದಿದ್ದೇನೆ ಎಂದು ಬೇಳೂರು ಆರೋಪಿಸಿದ್ದಾರೆ. ಆದರೆ, ಈ ಟೆಂಡರ್‌ ಕ್ರಮಬದ್ಧವಾಗಿದೆ. ಕೆಟಿಪಿಪಿ ಕಾಯ್ದೆ ಉಲ್ಲಂಘನೆಯಾಗಿಲ್ಲ. ಟೆಂಡರ್‌ ಕರೆಯಲು ಅಧ್ಯಕ್ಷರ ಅನುಮತಿ ಬೇಕಿಲ್ಲ. ನಿಗಮದ ದೈನಂದಿನ ಚಟುವಟಿಕೆಗಳಲ್ಲಿ ಅಧ್ಯಕ್ಷರಿಗೆ ಯಾವ ಅಧಿಕಾರವೂ ಇರುವುದಿಲ್ಲ. ಆದರೂ ವಿನಾಕಾರಣ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸುತ್ತಿದ್ದರು ಎಂದು ದೂರಿದ್ದಾರೆ.

ಕರಕುಶಲ ನಿಗಮದಲ್ಲಿ IPS ವರ್ಸಸ್ ಅಧ್ಯಕ್ಷರ ವಾರ್...!

ಅಧ್ಯಕ್ಷ ರಾಘವೇಂದ್ರ ಶೆಟ್ಟಿಯು ನಾನು 6 ಕೋಟಿ ಟೆಂಡರ್ ಕರೆದಿದ್ದೇನೆ ಎಂದು ಹೇಳಿ ಅದೇ ದೊಡ್ಡ ಆರೋಪ ರೀತಿ ಬಿಂಬಿಸಿರುವದು ಅವರ ಅಜ್ಞಾನಕ್ಕೆ ಕನ್ನಡಿ ಹಿಡಿದಂತಿದೆ. ಟೆಂಡರ್ ಕರೆಯುವುದು ಪಾರದರ್ಶಕ ಹಾಗೂ ಸರಿಯಾದ ಪದ್ಧತಿ. ನಾನು ಎಂದೂ KTPP ಕಾಯ್ದೆ ಉಲ್ಲಂಘನೆ ಮಾಡಿಲ್ಲ.  ಕಾಯ್ದೆ ಪ್ರಕಾರವೇ e - portal ನಲ್ಲಿ ಟೆಂಡರ್ ಕರೆದಿದ್ದೇನೆ.  ಅಲ್ಲದೇ  ಟೆಂಡರ್ ಕರೆಯಲು ಚೇರ್ಮನ್ ಪರ್ಮಿಷನ್ ಬೇಕಿಲ್ಲ. ಚೇರ್ಮನ್ ರಾಘವೇಂದ್ರ ಶೆಟ್ಟಿ ಮತ್ತೂ ಅಜ್ಞಾನಿಯಂತೆ ವರ್ತಿಸುತ್ತಾ ಇದ್ದಾರೆ. ಅವರಿಗೆ ಸರ್ಕಾರದ ಆದೇಶ ಗೊತ್ತಿಲ್ಲವೆ? ಸರ್ಕಾರದ ಆದೇಶ DDPER 35 ARU 2003 ಪ್ರಕಾರ  ನಿಗಮದ     ದೈನಂದಿನ ಚಟುವಟಿಕೆಗಳಲ್ಲಿ ಚೇರ್ಮನ್ ಗೆ ಯಾವ ಅಧಿಕಾರವೂ ಇರುವುದಿಲ್ಲ ಎಂದು ಶೆಟ್ಟಿ ಆರೋಪಕ್ಕೆ ರೂಪ ತಿರುಗೇಟು ನೀಡಿದ್ದಾರೆ.

ಮುಖ್ಯ ಕಾರ್ಯದರ್ಶಿಗೆ ದೂರು
ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿಅವರು ನಿಗಮಕ್ಕೆ 25 ಕೋಟಿ ರು. ವಂಚಿಸಿ ವಜಾಗೊಂಡಿದ್ದ ವ್ಯಕ್ತಿಯ ಮರುನೇಮಕಕ್ಕೆ ಒತ್ತಡ ಹಾಕುವುದು ಸೇರಿದಂತೆ ಹಲವು ಅಕ್ರಮ, ಅಧಿಕಾರ ದುರುಪಯೋಗ ಹಾಗೂ ವಂಚನೆ ಎಸಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಮೌದ್ಗಿಲ್‌ ಅವರು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾಗೆ ದೂರು ನೀಡಿದ್ದಾರೆ.

CCTV ವಿರೂಪಗೊಳಿಸಿರುವ ಆರೋಪ, ನಿಗಮದ ಅಧ್ಯಕ್ಷ ವಿರುದ್ಧ IPS ಡಿ. ರೂಪ ದೂರು

ಬೇಳೂರು ವಿರುದ್ಧ ಆರೋಪಗಳ ಸರಣಿಯನ್ನೇ ಮಾಡಿರುವ ರೂಪಾ ಮೌದ್ಗಿಲ್‌, ನಿಗಮದಲ್ಲಿ ಅಕ್ರಮ, ಅವ್ಯವಹಾರ ನಡೆಯಲು ಅವಕಾಶ ನೀಡದೆ ಇರುವುದರಿಂದ ನನ್ನ ವಿರುದ್ಧ ಬೇಳೂರು ಸುಳ್ಳು ಆರೋಪ ಮಾಡಿದ್ದಾರೆ. ಉದಾಹರಣೆಗೆ, 2017-18ನೇ ಸಾಲಿನಲ್ಲಿ ನಿಗಮಕ್ಕೆ 25 ಕೋಟಿ ರು. ವಂಚಿಸಿ ವಜಾ ಆಗಿದ್ದ ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕ ಜಿ.ಕಿಶೋರ್‌ ಎಂಬುವರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಲು ಬೇಳೂರು 4-5 ಕೋಟಿ ರುಪಾಯಿಗೆ ಡೀಲ್‌ ಕುದುರಿಸಿದ್ದರು. ಇದಕ್ಕೆ ನಾನು ಅವಕಾಶ ನೀಡಿರಲಿಲ್ಲ ಎಂದು ಹೇಳಿದ್ದಾರೆ.

ನಿಗಮಕ್ಕೆ ನಾಲ್ವರು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ನೇಮಕಾತಿ ಆದೇಶ ನೀಡಲಾಗಿದೆ. ಆದರೆ ಇವರಾರ‍ಯರೂ ಎಂದೂ ಕಚೇರಿಯಲ್ಲಿ ಕಾರ್ಯನಿರ್ವಹಿಸಿಲ್ಲ. ಹೀಗಿದ್ದರೂ ಇವರ ಹೆಸರಿನಲ್ಲಿ ಬೇಳೂರು ಅವರೇ ಪ್ರತಿ ತಿಂಗಳೂ ತಾವೇ ಸಹಿ ಮಾಡಿ ನಿಗಮದಿಂದ ಸಂಬಳ ಪಡೆದಿದ್ದಾರೆ. ಇಷ್ಟಾದರೂ ಸಹ ತಮ್ಮ ಕೆಲಸಗಳಿಗೆ ನಿಗಮದ ಸಿಬ್ಬಂದಿಯನ್ನೇ ಬಳಸಿಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ.

ಶ್ರೀಕಾಂತ ಚೌರಿ ಎಂಬ ವ್ಯಕ್ತಿ ಕಳೆದ 10 ತಿಂಗಳಿಂದ ಬೇಳೂರು ಅವರ ಆಪ್ತ ಸಹಾಯಕನಾಗಿದ್ದು, ನಿಗಮದಿಂದ ಸಂಬಳ ಪಾವತಿಸಲಾಗುತ್ತಿತ್ತು. ಈತ ಪಿಎಸ್‌ಐ ಅಕ್ರಮದಲ್ಲಿ ಭಾಗಿಯಾಗಿ ಪೊಲೀಸರಿಂದ ಬಂಧಿಸಲ್ಪಟ್ಟು ಜೈಲು ಸೇರಿದ್ದು, ನಿಗಮಕ್ಕೆ ಕಪ್ಪು ಚುಕ್ಕೆಯಾಗಿದೆ. ಪಿಎಸ್‌ಐ ನೇಮಕ ಅಕ್ರಮ ಹಗರಣದಲ್ಲಿ ಬೇಳೂರು ಪಾತ್ರ ಏನು ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಹೈದರಾಬಾದ್‌ ಶೋ ರೂಂ ಉದ್ಘಾಟನೆಯ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದಾಗ ಹೆಸರಿನ ಮುಂದೆ ಡಾಕ್ಟರ್‌ ಎಂದು ಬರಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಆದ್ದರಿಂದ ಬೇಳೂರು ಅವರು ಎಲ್ಲಿಂದ ‘ಡಾಕ್ಟರ್‌’ ಪದವಿ ಪಡೆದರು ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

ಕಳೆದ ವರ್ಷ ನಿಗಮದ ಹೊಸ ಇನ್ನೋವಾ ಕ್ರಿಸ್ಟವಾಹನವನ್ನು ಹಿರಿಯೂರು ಬಳಿ ರಾತ್ರಿ ಹೊತ್ತು ಆಕ್ಸಿಡೆಂಟ್‌ ಮಾಡಿ ಚಾಲಕ ಮಾಡಿದ್ದು ಎಂದು ಸುಳ್ಳು ಹೇಳಿ ನಿಗಮದಿಂದ 10.84 ಲಕ್ಷ ಪಾವತಿ ಆಗುವಂತೆ ಮಾಡಿ ನಷ್ಟಉಂಟುಮಾಡಿದ್ದಾರೆ. ವೈಯಕ್ತಿಕ ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಬೇಳೂರು ಅಪರಾಧಿಯಾಗಿದ್ದು, ಪೊಲೀಸರ ಕೈಗೆ ಸಿಕ್ಕದೆ ತಪ್ಪಿಸಿಕೊಳ್ಳುತ್ತಿದ್ದರಿಂದ ನಿಗಮದ ಕಚೇರಿಗೆ ನೋಟಿಸ್‌ ಅಂಟಿಸಿದ್ದು ನಿಗಮದ ಹೆಸರಿಗೆ ಚ್ಯುತಿ ಬಂದಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
 

Follow Us:
Download App:
  • android
  • ios