ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ನಾಪತ್ತೆಯಾಗಿದ್ದಾರೆ. ಫೆಬ್ರವರಿ 12ರಂದು ಟಿಲ್ಡೆನ್ ರೀಜನಲ್ ಪಾರ್ಕ್ ಬಳಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಅವರ ಪತ್ತೆಗಾಗಿ ಸ್ಥಳೀಯ ಪೊಲೀಸ್ ಶೋಧ ಕಾರ್ಯ ನಡೆಸುತ್ತಿವೆ.

ಕ್ಯಾಲಿಫೋರ್ನಿಯಾ: ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ಆತಂಕ ಮೂಡಿಸಿದೆ. ಸಾಕೇತ್ ಶ್ರೀನಿವಾಸಯ್ಯ (24) ಎಂಬ ಯುವಕ ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದು, ಕುಟುಂಬದವರು ಹಾಗೂ ಸ್ನೇಹಿತರು ಆತಂಕ್ಕೀಡಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾರ್ಕ್ ನಲ್ಲಿ ಕೊನೆಯದಾಗಿ ಕಾಣಿಸಿದ್ದ ಸಾಕೇತ್

ಸಾಕೇತ್ ಕ್ಯಾಲಿಫೋರ್ನಿಯಾದ ಪ್ರಸಿದ್ಧ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿ (UC Berkeley) ನಲ್ಲಿ ಎಂಎಸ್ (MS) ಪದವಿ ವ್ಯಾಸಂಗ ಮಾಡುತ್ತಿದ್ದು, ಸಿಕ್ಕಿರುವ ಮಾಹಿತಿಯಂತೆ ಫೆಬ್ರವರಿ 12ರಂದು ಅವರು ಕ್ಯಾಲಿಫೋರ್ನಿಯಾದ ಟಿಲ್ಡೆನ್ ರೀಜನಲ್ ಪಾರ್ಕ್ ನೊಳಗಿನ ಕೆರೆಯ ಬಳಿ ಕೊನೆಯದಾಗಿ ಕಾಣಿಸಿಕೊಂಡಿದ್ದ. ಅದಾದ ಬಳಿಕ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಆರತಿ ಕೃಷ್ಣ, ಸಾಕೇತ್ ನಾಪತ್ತೆಯಾದ ವಿಚಾರವನ್ನು ಭಾರತೀಯ ರಾಯಭಾರಿ ಕಚೇರಿಗೂ ತಿಳಿಸಲಾಗಿದೆ, ಹುಡುಕಾಟ ಕಾರ್ಯಾಚರಣೆ ಮುಂದುವರಿದಿದೆ ಎಂದು ಹೇಳಿದ್ದಾರೆ. ಭಾರತೀಯ ರಾಯಭಾರಿ ಕಚೇರಿ ಕೂಡ ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ, ಸ್ಥಳೀಯ ಅಧಿಕಾರಿಗಳೊಂದಿಗೆ ಮಾಹಿತಿ ಹಂಚಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸಾಕೇತ್ ಅವರ ತಂದೆ ತುಮಕೂರಿನವರಾಗಿದ್ದು ಹಾಗೂ ತಾಯಿ ಚಿಕ್ಕಮಗಳೂರು ಮೂಲದವರಾಗಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ ಸಾಕೇತ ಅಮೆರಿಕಾಕ್ಕೆ ತೆರಳಿದ್ದು, ಪಂಜಾಬ್ ಮೂಲದ ಯುವಕನೊಂದಿಗೆ ರೂಮ್‌ಮೇಟ್ ಆಗಿದ್ದ. ಸಹಪಾಠಿಗಳು ಮತ್ತು ಸ್ನೇಹಿತರೊಂದಿಗೆ ಸಾಕೇತ್ ಉತ್ತಮ ಸಂಬಂಧ ಹೊಂದಿದ್ದ.

ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ

ಆರತಿ ಕೃಷ್ಣ ಅವರ ಪ್ರಕಾರ, ಭಾನುವಾರವರೆಗೆ ಸಾಕೇತ್ ಎಲ್ಲರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ. ಸೋಮವಾರ ತನ್ನ ತಾಯಿಗೆ ಫೋನ್ ಮಾಡಿದ್ದು, ಬಳಿಕ ತಾಯಿ ವಾಪಸ್ ಕರೆ ಮಾಡಿದಾಗ ಸಾಕೇತ್ ಕರೆ ಸ್ವೀಕರಿಸಿಲ್ಲ. ಅದಾದ ನಂತರದಿಂದ ಆತನ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಕುಟುಂಬದವರು ಈ ಚಿಂತೆಗೀಡಾಗಿದ್ದಾರೆ.

ಸಾಕೇತ್ ಪೋಷಕರು ಅನಿವಾಸಿ ಭಾರತೀಯ ಸಂಘವನ್ನು ಸಂಪರ್ಕಿಸಿದ್ದು, ಹುಡುಕಾಟಕ್ಕೆ ಹೆಚ್ಚಿನ ಸಹಕಾರ ಕೋರಿದ್ದಾರೆ. ಸ್ಥಳೀಯ ಪೊಲೀಸ್ ಇಲಾಖೆ, ವಿಶ್ವವಿದ್ಯಾಲಯದ ಆಡಳಿತ ಮತ್ತು ಸ್ವಯಂಸೇವಕ ತಂಡಗಳು ಸೇರಿ ಸಾಕೇತ್ ಪತ್ತೆಗೆ ಪ್ರಯತ್ನ ನಡೆಸುತ್ತಿವೆ. ಈ ಘಟನೆ ಕರ್ನಾಟಕ ಹಾಗೂ ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯ ಸಮುದಾಯದಲ್ಲಿ ತೀವ್ರ ಆತಂಕ ಹುಟ್ಟಿಸಿದ್ದು, ಸಾಕೇತ್ ಸುರಕ್ಷಿತವಾಗಿ ಪತ್ತೆಯಾಗಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.

Scroll to load tweet…