ಕೆನಡಾ ರಾಜಧಾನಿ ಒಟ್ಟಾವಾದ ಶಾಪಿಂಗ್ ಮಾಲ್ ಒಂದರ ಬಳಿ ಅಪರಿಚಿತ ದುಷ್ಕರ್ಮಿಗಳು ಬೆಂಗಳೂರಿನ ನೆಲಮಂಗಲ ಬಳಿಯ ತ್ಯಾಮಗೊಂಡ್ಲು ಮೂಲದ ಚಂದನ್ ಕುಮಾರ್ (37) ಎಂಬ ಟೆಕ್ಕಿಯನ್ನು ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಒಟ್ಟಾವಾ (ಕೆನಡಾ) : ಕೆನಡಾ ರಾಜಧಾನಿ ಒಟ್ಟಾವಾದ ಶಾಪಿಂಗ್ ಮಾಲ್ ಒಂದರ ಬಳಿ ಅಪರಿಚಿತ ದುಷ್ಕರ್ಮಿಗಳು ಬೆಂಗಳೂರಿನ ನೆಲಮಂಗಲ ಬಳಿಯ ತ್ಯಾಮಗೊಂಡ್ಲು ಮೂಲದ ಚಂದನ್ ಕುಮಾರ್ (37) ಎಂಬ ಟೆಕ್ಕಿಯನ್ನು ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಿದ್ದಾರೆ. ದಾಳಿಯ ತೀವ್ರತೆಗೆ ಚಂದನ್‌ರ ಅವರ ದೇಹ ತೀವ್ರ ಘಾಸಿಗೊಂಡಿದೆ. ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಇದೊಂದು ಉದ್ದೇಶಪೂರ್ವಕ ಕೃತ್ಯ ಎಂದು ಕಂಡುಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂದನ್ 7 ವರ್ಷದ ಹಿಂದೆ ಕೆನಡಾಕ್ಕೆ ತೆರಳಿ ಐಟಿ ಉದ್ಯೋಗ
ಚಂದನ್ 7 ವರ್ಷದ ಹಿಂದೆ ಕೆನಡಾಕ್ಕೆ ತೆರಳಿದ್ದು, ಐಟಿ ಉದ್ಯೋಗದಲ್ಲಿದ್ದರು. ಟೊರಾಂಟೋ ಕನ್ನಡ ಸಂಘದ ಸಾಮಾಜಿಕ ಜಾಲತಾಣದ ಸಮನ್ವಯಕಾರರಾಗಿ, ಬ್ರಾಂಪ್ಟನ್‌ನಲ್ಲಿರುವ ಶಿರಡಿ ಸಾಯಿಬಾಬಾ ದೇವಾಲಯ ಮತ್ತು ಅಖಿಲ ವಿಶ್ವ ಆರ್ಯವೈಶ್ಯ ಮಹಾಸಭಾದ ಕೆನಡಾ ಘಟಕದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.ಆಗಿದ್ದೇನು?:
ಶನಿವಾರ ಮಧ್ಯಾಹ್ನ ಸುಮಾರು 3.31ರ ವೇಳೆಗೆ ಚಂದನ್ ತಮ್ಮ ಕಾರಿನಲ್ಲಿ ರೆಕ್ಸ್‌ಡೆಲ್ ಬುಲ್‌ವರ್ಡ್‌ನ ವುಡ್‌ಬಿನ್ ಮಾಲ್‌ನ ಪಾರ್ಕಿಂಗ್ ಪ್ರದೇಶದಲ್ಲಿ ತೆರಳುತ್ತಿದ್ದರು. ಆಗ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿದ್ದಾರೆ. ತಕ್ಷಣ ಪೊಲೀಸರಿಗೆ ಸುದ್ದಿ ತಲುಪಿದೆ. ಪೊಲೀಸರು ಸ್ಥಳಕ್ಕೆ ಬಂದು ತೀವ್ರವಾಗಿ ಗಾಯಗೊಂಡಿದ್ದ ಚಂದನ್‌ರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ದಾಳಿಯ ತೀವ್ರತೆಗೆ ಚಂದನ್ ಮೃತಪಟ್ಟಿದ್ದಾರೆ.
ಇತ್ತ ಪಾತಕಿಗಳು ವಾಹನದ ಮೂಲಕ ಸ್ಥಳದಿಂದ ಪರಾರಿಯಾಗಿದ್ದಾರೆ.ಚಂದನ್‌ರ ಬಿಳಿ ಬಣ್ಣದ ಎಸ್‌ಯುವಿ ಕಾರಿನ ಮುಂಭಾಗ 10 ಗುಂಡು ಹೊಕ್ಕಿರುವುದು ಮತ್ತು ಚಾಲಕನ ಬದಿ ಕಿಟಕಿ ಗಾಜು ಒಡೆದಿರುವ ಚಿತ್ರಗಳು ದೊರಕಿವೆ. ಈ ದಾಳಿ ಟೋರಾಂಟೋದಲ್ಲಿ ನಡೆದ ಈ ವರ್ಷದ 3ನೇ ಹತ್ಯೆ ಎಂಬುದು ಗಮನಾರ್ಹ.
‘ಈ ರೀತಿಯ ಗುಂಡಿನ ದಾಳಿ, ವಿಶೇಷವಾಗಿ ಮಾಲ್‌ನಲ್ಲಿ, ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಹೇಗೆ ಕಳವಳ ಉಂಟುಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಲ್ಲೆ. ಪೊಲೀಸರು ಸಾಕ್ಷ್ಯಗಳಿಗಾಗಿ ಹುಡುಕುತ್ತಿದ್ದಾರೆ. ಎಷ್ಟು ಶಂಕಿತರಿದ್ದಾರೆ ಮತ್ತು ಎಷ್ಟು ಗುಂಡು ಹಾರಿಸಲಾಗಿದೆ ಎಂಬ ವಿವರಗಳನ್ನು ಸಂಗ್ರಹಿಸಲು ಕೆಲಸ ಮಾಡುತ್ತಿದ್ದಾರೆ’ ಎಂದು ಇನ್ಸ್‌ಪೆಕ್ಟರ್ ಎರಲ್ ವ್ಯಾಟ್ಸನ್ ತಿಳಿಸಿದ್ದಾರೆ.
ಕುಟುಂಬದಲ್ಲಿ ಮಡುಗಟ್ಟಿದ ಶೋಕ:
ಚಂದನ್‌ರ ಅನಿರೀಕ್ಷಿತ ಮರಣವು ತ್ಯಾಮಗೊಂಡ್ಲುವಿನಲ್ಲಿರುವ ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟುವಂತೆ ಮಾಡಿದೆ. ‘ನಾವು ಕನಸಿನಲ್ಲಿಯೂ ಇದನ್ನು ನಿರೀಕ್ಷಿಸಿರಲಿಲ್ಲ. ಅವನು ಕೆನಡಾಕ್ಕೆ ಹೋಗಿ 6-7 ವರ್ಷಗಳಾಗಿವೆ. ಆದ್ದರಿಂದ ಹಿಂತಿರುಗಿ ಬರಲು ಹೇಳುತ್ತಿದ್ದೆವು. ಆದರೆ ಅವನು ನಮ್ಮ ಮಾತನ್ನು ಕೇಳಲಿಲ್ಲ’ ಎಂದು ಚಂದನ್‌ರ ತಂದೆ ನಂದಕುಮಾರ್ ಕಣ್ಣೀರಿಟ್ಟಿದ್ದಾರೆ.
ಕನ್ನಡ ಸಂಘ ಪ್ರಾರಂಭಿಸಿದ್ದೇ ಕಾರಣ?:
ಚೇತನ್ ಕುಮಾರ್ ಟೊರೊಂಟೊದಲ್ಲಿ ಕನ್ನಡ ಸಂಘವನ್ನು ಪ್ರಾರಂಭಿಸಿದ್ದರು. ಇದೇ ಅವರ ಹತ್ಯೆಗೆ ಕಾರಣವಾಗಿರಬಹುದು ಎಂದು ಚಂದನ್‌ರ ತಾಯಿ ಸಂಶಯ ವ್ಯಕ್ತಪಡಿಸಿದ್ದಾರೆ.
ಮೃತದೇಹ ತರಿಸಲು ಸರ್ಕಾರಕ್ಕೆ ಮನವಿ:
ಮಗನ ಅಂತ್ಯಕ್ರಿಯೆಯನ್ನು ಹುಟ್ಟೂರು ತ್ಯಾಮಗೊಂಡ್ಲುವಿನಲ್ಲೇ ನೆರವೇರಿಸಲು ಪೋಷಕರು ನಿರ್ಧರಿಸಿದ್ದಾರೆ. ಹೀಗಾಗಿ ಮೃತದೇಹವನ್ನು ದೇಶಕ್ಕೆ ತರಲು ಸಹಾಯ ಮಾಡುವಂತೆ ಮೃತನ ತಂದೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.


