ಬೆಂಗಳೂರು(ಡಿ.05): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಾಯಕತ್ವದಲ್ಲೇ ಸರ್ಕಾರ ಪೂರ್ಣ ಅವಧಿ ಪೂರ್ಣಗೊಳಿಸಲಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಉತ್ತಮ ನಾಯಕರಾಗಿದ್ದಾರೆ. ಸಮಾಜದ ಪ್ರತಿ ಸಮುದಾಯದ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ನಾಯಕತ್ವ ಬದಲಾವಣೆ ಕುರಿತು ಯಾವ ಕಾರಣಕ್ಕಾಗಿ ಚರ್ಚೆಯಾಗುತ್ತಿದೆ ಎಂಬುದು ಗೊತ್ತಿಲ್ಲ. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಸರ್ಕಾರ ನಡೆಯುತ್ತಿದೆ. ಒಗ್ಗಟ್ಟಿನಿಂದ ಸರ್ಕಾರ ನಡೆಯುತ್ತಿದೆ.

ಕೇಂದ್ರ ನಾಯಕರಿಂದ ಸಿಎಂಗೆ ರಕ್ಷಣೆ: ಸಚಿವರ ಮಹತ್ವದ ಹೇಳಿಕೆ...!

ಹೀಗಿರುವಾಗ ನಾಯಕತ್ವ ಬದಲಾವಣೆ ವಿಷಯ ಪ್ರಸ್ತಾಪವು ಅಪ್ರಸ್ತುತ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡುವ ಉದ್ದೇಶ ಇಲ್ಲ. ಸರ್ಕಾರದ ಪೂರ್ಣ ಅವಧಿಯನ್ನು ಯಡಿಯೂರಪ್ಪ ಅವರು ಪೂರೈಸಲಿದ್ದಾರೆ. ಯಡಿಯೂರಪ್ಪ ವಿರುದ್ಧ ನನಗೆ ಯಾರು ದೂರು ನೀಡಿಲ್ಲ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲಿಯೇ ನಡೆಯಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಚರ್ಚೆ ನಡೆಸಲಾಗುವುದು. ಸಚಿವ ಆಕಾಂಕ್ಷಿಗಳು ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಬಾರದು. ಇದು ಬಿಜೆಪಿಯ ಸಂಸ್ಕೃತಿಯೂ ಅಲ್ಲ. ಪಕ್ಷದಲ್ಲಿ ಶಿಸ್ತು ಇದ್ದು, ಅದನ್ನು ಕಾಪಾಡಬೇಕು. ಏನೇ ಸಮಸ್ಯೆಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಿ ಬಗೆಹರಿಸಿಕೊಳ್ಳಬೇಕು. ಜನರ ಅಭಿವೃದ್ಧಿಗಾಗಿ ಸರ್ಕಾರವು ಜಾರಿಗೊಳಿಸಿರುವ ಯೋಜನೆಗಳನ್ನು ಜನಪ್ರಿಯಗೊಳಿಸುವ ಕೆಲಸವನ್ನು ಪಕ್ಷವು ಸಂಘಟನಾತ್ಮಕವಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂದು ತಿಳಿಸಿದರು.

ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಗಂಭೀರ ಆರೋಪ ಮಾಡಿದ ಪ್ರತಾಪ್ ಸಿಂಹ

ಬೂತ್‌ಮಟ್ಟದಿಂದ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಕಾರ್ಯನಿರ್ವಹಿಸಲಾಗುತ್ತದೆ. ಯೋಜನೆಗಳು ಫಲಾನುಭವಿಗಳಿಗೆ ತಲುಪದಿದ್ದರೆ ಅಂತಹವರನ್ನು ಗುರುತಿಸಿ ತಲುಪಿಸುವ ಕೆಲಸ ಮಾಡಲಾಗುವುದು. ಮೇಲೆ ಹಂತದ ನಾಯಕರಿಂದ ಹಿಡಿದು ಕೆಳ ಹಂತ ಕಾರ್ಯಕರ್ತರವರೆಗೆ ಸೇರಿ ಎಲ್ಲರೂ ಶ್ರಮಿಸುತ್ತೇವೆ. ಯಡಿಯೂರಪ್ಪ ಅವರು ಸಹ ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರದ ಕಾರ್ಯಕ್ರಮಗಳನ್ನು ಸಂಘಟನಾತ್ಮಕವಾಗಿ ಜನರಿಗೆ ಮುಟ್ಟಿಸುತ್ತೇವೆ ಎಂದು ಸಿಂಗ್‌ ಹೇಳಿದರು.