ಮೈಸೂರು, (ನ.14):  ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರು ಮಂಡ್ಯ ಸಂಸದೆ ಸುಮಲತಾ ವಿರುದ್ಧ ಏನೂ ಕೆಲಸ ಮಾಡಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಅಧಿಕಾರಿಯೊಬ್ಬರ ಜೊತೆ ಫೋನ್‌ನಲ್ಲಿ ಮಾತನಾಡುತ್ತಾ, ‘ದೇವೇಗೌಡರ ಕುಟುಂಬದವರನ್ನು ಸೋಲಿಸಲು ಸುಮಲತಾ ಅವರನ್ನು ಗೆಲ್ಲಿಸಿದ್ದಾರಷ್ಟೇ. ಮಂಡ್ಯದಲ್ಲಿ ಒಂದು ಕೆಲಸ ಮಾಡುವುದಕ್ಕೂ ಬಿಡುತ್ತಿಲ್ಲ. ಮಂಡ್ಯದ ಯಾವುದೇ ಕೆಲಸ ಇದ್ದರೂ ನನಗೆ ಹೇಳಿ. ಆ ಯಮ್ಮಾ ಏನೂ ಕೆಲಸ ಮಾಡುವುದಿಲ್ಲ ಎಂದು ಟೀಕಿಸಿದ್ದಾರೆ.

ಕರ್ನಾಟಕ ಬಿಜೆಪಿ ಉಸ್ತುವಾರಿ ಬದಲಾವಣೆ 

ಮಂಡ್ಯ ತಾಲೂಕಿನ ಯಲಿಯೂರು ಗ್ರಾಮಸ್ಥರ ಅಹವಾಲು ಸ್ವೀಕರಿಸಲು ಪ್ರತಾಪ್ ಸಿಂಹ ಬಂದಿದ್ದರು. ಈ ವೇಳೆ ಬೆಂಗಳೂರು-ಮೈಸೂರು ದಶಪಥ ಕಾಮಗಾರಿಯ ಬಗ್ಗೆ ಅಧಿಕಾರಿಯ ಜೊತೆ ಫೋನ್‌ನಲ್ಲಿ ಮಾತನಾಡಿದ್ದಾರೆ. ಆ ಅಧಿಕಾರಿ ಸುಮಲತಾ ವಿರುದ್ಧ ದೂರು ಹೇಳಿದಾಗ ಪ್ರತಾಪ್‌ ಸಿಂಹ ಸುಮಲತಾ ಕಾರ್ಯ ವೈಖರಿ ಬಗ್ಗೆ ಕಿಡಿಕಾರಿದ್ದಾರೆ ಎನ್ನಲಾಗಿದೆ. 

ಸದ್ಯ ಪ್ರತಾಪ್‌ ಸಿಂಹ ಸುಮಲತಾ ವಿರುದ್ಧ ಆ ಯಮ್ಮಾ ಕೆಲಸ ಮಾಡಲ್ಲ ಎಂದು ಆರೋಪಿಸಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸುಮಲತಾ ಬೆಂಬಲಿಗರು ಪ್ರತಾಪ್‌ ಸಿಂಹ ವಿರುದ್ಧ ಕಿಡಿಕಾರಿದರೆ, ಇನ್ನೂ ಹಲವರು ಪ್ರತಾಪ್‌ ಸಿಂಹ ಸರಿಯಾಗಿಯೇ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.