ಪ್ರಹ್ಲಾದ್‌ ಜೋಶಿಯವರು ನಮ್ಮ ಪಕ್ಷದ ಬಗ್ಗೆ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕುಟುಂಬದ ಕುರಿತು ಲಘುವಾಗಿ ಮಾತನಾಡಿದ್ದಾರೆ. ಆದರೆ, ತಮ್ಮ ಕಚೇರಿಯಲ್ಲಿ ನಡೆದಿರುವ ಈ ಕಳ್ಳ ವ್ಯವಹಾರದ ಬಗ್ಗೆ ಕೇಂದ್ರ ಸಚಿವರು ಏನು ಹೇಳುತ್ತಾರೆ? ಒಟ್ಟು ಎರಡೂವರೆ ಕೋಟಿ ರು. ಹಣ ಸಂದಾಯ ಆಗಿದೆ. ಈ ಹಣವನ್ನು ಯಾರಿಗೋಸ್ಕರ, ಯಾರು, ಯಾರಿಂದ ಹಣ ತೆಗೆದುಕೊಳ್ಳಲಾಗಿದೆ ಎಂಬುದರ ಬಗ್ಗೆ ಪ್ರಹ್ಲಾದ್‌ ಜೋಶಿ ಉತ್ತರ ಕೊಡಬೇಕಿದೆ: ಭೋಜೇಗೌಡ

ಬೆಂಗಳೂರು(ಫೆ.08): ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಖಿಲ ಭಾರತ ವೈದ್ಯಕೀಯ ಸಂಸ್ಥೆಯಲ್ಲಿ (ಏಮ್ಸ್‌) ಹುದ್ದೆ ಕೊಡಿಸಲು ಮತ್ತು ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್‌ಎಂಸಿ) ಸದಸ್ಯತ್ವ ಕೊಡಿಸಲು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ಕಚೇರಿ ಲಂಚದ ಹಣ ಪಡೆದಿದೆ ಎಂದು ವಿಧಾನ ಪರಿಷತ್‌ ಸದಸ್ಯ, ಜೆಡಿಎಸ್‌ ಮುಖಂಡ ಭೋಜೇಗೌಡ ಆರೋಪಿಸಿದ್ದಾರೆ. ಮಂಗಳವಾರ ಪಕ್ಷದ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ತಮ್ಮ ಆರೋಪಕ್ಕೆ ಸಂಬಂಧಿಸಿದ್ದು ಎನ್ನಲಾದ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

‘ಪ್ರಹ್ಲಾದ್‌ ಜೋಶಿಯವರು ನಮ್ಮ ಪಕ್ಷದ ಬಗ್ಗೆ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕುಟುಂಬದ ಕುರಿತು ಲಘುವಾಗಿ ಮಾತನಾಡಿದ್ದಾರೆ. ಆದರೆ, ತಮ್ಮ ಕಚೇರಿಯಲ್ಲಿ ನಡೆದಿರುವ ಈ ಕಳ್ಳ ವ್ಯವಹಾರದ ಬಗ್ಗೆ ಕೇಂದ್ರ ಸಚಿವರು ಏನು ಹೇಳುತ್ತಾರೆ? ಒಟ್ಟು ಎರಡೂವರೆ ಕೋಟಿ ರು. ಹಣ ಸಂದಾಯ ಆಗಿದೆ. ಈ ಹಣವನ್ನು ಯಾರಿಗೋಸ್ಕರ, ಯಾರು, ಯಾರಿಂದ ಹಣ ತೆಗೆದುಕೊಳ್ಳಲಾಗಿದೆ ಎಂಬುದರ ಬಗ್ಗೆ ಪ್ರಹ್ಲಾದ್‌ ಜೋಶಿ ಉತ್ತರ ಕೊಡಬೇಕಿದೆ’ ಎಂದರು.

ಬ್ರಾಹ್ಮಣ ಸಿಎಂ ವಿಚಾರ: ಕುಮಾರಣ್ಣಗೆ ನಮ್ಮ ಪಕ್ಷದ ಚಿಂತೆ ಬೇಡ: ಸಿಎಂ

‘ಅವರ ಕಚೇರಿಗೆ ಹಣ ಹೋಗಿದೆ. ರಾಷ್ಟ್ರೀಯ ವೈದ್ಯಕೀಯ ಮಂಡಳಿಯಲ್ಲಿ ಸದಸ್ಯರನ್ನಾಗಿ ಮಾಡುತ್ತೇವೆ ಎಂದು ಹಣ ಪಡೆದಿದ್ದಾರೆ. ಹಾಗೆಯೇ ಏಮ್ಸ್‌ ನಿರ್ದೇಶಕರನ್ನಾಗಿ ಮಾಡಲಾಗುತ್ತದೆ ಎಂದು ಹಣ ಪಡೆಯಲಾಗಿದೆ. ಕೇಂದ್ರದ ಮಾಜಿ ಆರೋಗ್ಯ ಸಚಿವರು ಪ್ರಹ್ಲಾದ್‌ ಜೋಶಿ ಅವರಿಗೆ ಬರೆದಿರುವ ಪತ್ರಕ್ಕೂ ಮತ್ತು ಈ ಹಣ ಸಂದಾಯಕ್ಕೂ ಇರುವ ಲಿಂಕ್‌ ಬಗ್ಗೆ ತನಿಖೆಯಾಗಬೇಕು. ಇದೇ ಪ್ರಕರಣದ ಬಗ್ಗೆ ಇನ್ನು ಹಲವು ದಾಖಲೆಗಳಿವೆ. ಇದು ಕೇವಲ ಸ್ಯಾಂಪಲ್‌, ಶೀಘ್ರದಲ್ಲಿಯೇ ಇನ್ನಷ್ಟುದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ’ ಎಂದರು.

ಆರೋಪ ಸುಳ್ಳು, ಮಾನನಷ್ಟ ಕೇಸ್‌ ಹಾಕುವೆ-ಜೋಶಿ

ರಾಷ್ಟ್ರೀಯ ವೈದ್ಯಕೀಯ ಮಂಡಳಿಗೆ ಸದಸ್ಯರನ್ನಾಗಿ ಮಾಡಲು ಹಣ ಪಡೆಯಲಾಗಿದೆ ಎಂಬ ಜೆಡಿಎಸ್‌ ನಾಯಕ ಭೋಜೇಗೌಡ ಅವರ ಆರೋಪವನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಬಲವಾಗಿ ನಿರಾಕರಿಸಿದ್ದಾರೆ.

ನಾನು ಹಳೆಯ ಕರ್ನಾಟಕ ಭಾಗದ ಬ್ರಾಹ್ಮಣರನ್ನು ದೂಷಿಸಲ್ಲ: ಕುಮಾರಸ್ವಾಮಿ

ಈ ಬಗ್ಗೆ ಟ್ವೀಟ್‌ ಮೂಲಕ ಸ್ಪಷ್ಟನೆ ನೀಡಿರುವ ಅವರು, ‘ತಳಬುಡವಿಲ್ಲದ ಹಾಗೂ ಜನರನ್ನು ದಾರಿ ತಪ್ಪಿಸುವ ಆಪಾದನೆ ಇದು. ಮೊದಲನೆಯದಾಗಿ ಆ ಪತ್ರವನ್ನು ವೈದ್ಯರೊಬ್ಬರಿಗೆ ಬರೆಯಲಾಗಿದೆ. ಖಂಡಿತವಾಗಿ ಅದು ನಾನಂತೂ ಅಲ್ಲ. ಅವರು ಹೇಳಿರುವ ಹೆಸರಿನ ಉದ್ಯೋಗಿ ನಮ್ಮ ಕಚೇರಿಯಲ್ಲ ಇಲ್ಲ’ ಎಂದು ತಿಳಿಸಿದ್ದಾರೆ.

ಈ ತರಹದ ಆಧಾರ ರಹಿತ ಆಪಾದನೆಯನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆ. ಇದು ನನ್ನ ತೇಜೋವಧೆ ಮಾಡುವ ಹುನ್ನಾರವಾಗಿದ್ದು, ಮಾನನಷ್ಟ ಮೊಕದ್ದಮೆ ದಾಖಲಿಸುವ ಬಗ್ಗೆ ಚಿಂತನೆ ನಡೆಸಿದ್ದೇನೆ ಎಂದು ಎಚ್ಚರಿಕೆ ನೀಡಿದ್ದಾರೆ.