ಮಾಜಿ ಸಿಎಂ ಕುಮಾರಸ್ವಾಮಿಯವರು ನಮ್ಮ ಪಕ್ಷದ ಬಗ್ಗೆ ಚಿಂತನೆ ಮಾಡುವ ಅಗತ್ಯ ಇಲ್ಲ. ಅವರ ಪಕ್ಷವನ್ನು ಮೊದಲು ಅವರು ಸರಿ ಮಾಡಿಕೊಳ್ಳಲಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ನವದೆಹಲಿ (ಫೆ.6) : ಮಾಜಿ ಸಿಎಂ ಕುಮಾರಸ್ವಾಮಿಯವರು ನಮ್ಮ ಪಕ್ಷದ ಬಗ್ಗೆ ಚಿಂತನೆ ಮಾಡುವ ಅಗತ್ಯ ಇಲ್ಲ. ಅವರ ಪಕ್ಷವನ್ನು ಮೊದಲು ಅವರು ಸರಿ ಮಾಡಿಕೊಳ್ಳಲಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಭಾನುವಾರ ದೆಹಲಿಯಲ್ಲಿ ಸುದ್ದಿಗಾರೊಂದಿಗೆ ಅವರು ಮಾತನಾಡಿದರು. ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ದೇಶಸ್ಥ ಬ್ರಾಹ್ಮಣ ವರ್ಗಕ್ಕೆ ಸೇರಿದ ಪ್ರಹ್ಲಾದ್‌ ಜೋಶಿ ಅವರನ್ನು ಮುಂಬರುವ ಚುನಾವಣೆ ಬಳಿಕ ಈ ರಾಜ್ಯದ ಮುಖ್ಯಮಂತ್ರಿ ಮಾಡುವ ಹುನ್ನಾರ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ನಡೆದಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಅವರು ಆಕ್ರೋಶ ವ್ಯಕ್ತಪಡಿಸಿದರು. ಜಾತಿ ಮಾತುಗಳು ರಾಜಕಾರಣದಲ್ಲಿ ಅಪ್ರಸ್ತುತ. ಪಕ್ಷಗಳು ಹಾಗೂ ಅದರ ಕಾರ್ಯಕ್ರಮಗಳ ಬಗ್ಗೆ ಮಾತಾಡಬೇಕು. ನಮ್ಮ ಪಕ್ಷದ ಬಗ್ಗೆ ಚಿಂತನೆ ಮಾಡುವ ಅಗತ್ಯ ಅವರಿಗಿಲ್ಲ. ಅವರು ಕಷ್ಟಪಟ್ಟು ಓಡಾಡುತ್ತಿದ್ದಾರೆ. ಮೊದಲು ತಮ್ಮ ಪಕ್ಷವನ್ನು ಸರಿ ಮಾಡಿಕೊಳ್ಳಲಿ. ವೈಯಕ್ತಿಕವಾಗಿ ಆರೋಪ ಮಾಡಿದರೆ ಜನರು ತಲೆ ಕೆಡಿಸಿಕೊಳ್ಳಲ್ಲ. ಕುಮಾರಣ್ಣಗೆ ಇಂತಹ ಮಾಹಿತಿ ಎಲ್ಲಿಂದ ಬರುತ್ತೆ ಗೊತ್ತಿಲ್ಲ ಎಂದು ಹೇಳಿದರು.

ನನಗೆ ಯಾವುದೇ ದಾಖಲೆ ನೀಡಿಲ್ಲ:

ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ರಮೇಶ ಜಾರಕಿಹೊಳಿಯವರು ದೆಹಲಿಗೆ ಬಂದಿರುವ ವಿಚಾರ ನನಗೆ ಗೊತ್ತಿಲ್ಲ. ಸಿಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ನನಗೆ ಯಾವುದೇ ದಾಖಲೆ ನೀಡಿಲ್ಲ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಪೂರ್ಣ ವಿವರವನ್ನು ನೀಡಿದರೆ, ಆ ಬಗ್ಗೆ ನಾನು ತೀರ್ಮಾನ ಮಾಡ್ತಿನಿ. ನಾನು ಈಗಾಗಲೇ ಈ ಬಗ್ಗೆ ಸ್ಪಷ್ಟಪಡಿಸಿದ್ದೇನೆ. ಯಾವ ಕೇಸು?, ವಿಷಯ ಏನು? ಎಂಬ ಎಲ್ಲಾ ವಿವರ ನೀಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಬ್ರಾಹ್ಮಣ ಸಿಎಂ ಅಭ್ಯರ್ಥಿ ಪ್ರಹ್ಲಾದ್‌ ಜೋಶಿ ಪರ ಬ್ಯಾಟಿಂಗ್‌: ಕುಮಾರಸ್ವಾಮಿಗೆ ಸಿ.ಟಿ.ರವಿ ಟಾಂಗ್

ಎಚ್‌ಡಿಕೆ ಹೇಳಿಕೆಗೆ ಪಕ್ಷಾತೀತ ಆಕ್ರೋಶ:

ಟ್ವೀಟ್‌ ಮೂಲಕ ಕುಮಾರಸ್ವಾಮಿ ಹೇಳಿಕೆ ಖಂಡಿಸಿರುವ ಸಚಿವ ಅಶೋಕ್‌, ಸ್ವಾತಂತ್ರ್ಯ ಹೋರಾಟದಲ್ಲಿಯೂ ಬ್ರಾಹ್ಮಣರ ತ್ಯಾಗ, ಬಲಿದಾನ ಸಾಕಷ್ಟಿದೆ. ಯಾವುದೇ ಜಾತಿಯ ಬಗ್ಗೆ ಈ ರೀತಿ ಕೀಳಾಗಿ ಮಾತನಾಡುವುದು ಮಾಜಿ ಮುಖ್ಯಮಂತ್ರಿಯಾಗಿರುವವರಿಗೆ ಶೋಭೆ ತರುವಂಥದ್ದಲ್ಲ. ತಕ್ಷಣ ಅವರು ಬ್ರಾಹ್ಮಣ ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ರವಿಕುಮಾರ್‌ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮತ್ತು ಬ್ರಾಹ್ಮಣರ ಕುರಿತ ಕುಮಾರಸ್ವಾಮಿ ಅವರ ಅವಹೇಳನಕಾರಿ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತದೆ. ಸಾವರ್ಕರ್‌, ಗೋಖಲೆ, ತಿಲಕ್‌, ರಾನಡೆ ಮೊದಲಾದವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅವರೆಲ್ಲರೂ ಬ್ರಾಹ್ಮಣರಾದರೂ ಸ್ವಂತ ಜಾತಿ ಬಗ್ಗೆ ಕಿಂಚಿತ್ತೂ ಯೋಚಿಸಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಭಯದಿಂದ ಕುಮಾರಸ್ವಾಮಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಮುನಿಸ್ವಾಮಿ ಮಾತನಾಡಿ, ಚುನಾವಣೆಯಲ್ಲಿ ಗೊಂದಲ ಸೃಷ್ಟಿಸಲು ಕುಮಾರಸ್ವಾಮಿ ಬಾಂಬ್‌ ಹಾಕಿದ್ದಾರೆ. ಅವರದ್ದು ಬಾಂಬ್‌ ಅಲ್ಲ, ಅದು ಠುಸ್‌ ಬಾಂಬ್‌. ಬಿಜೆಪಿಯಲ್ಲಿ ಬೊಮ್ಮಾಯಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇದು ಬಿಜೆಪಿಯ ಆಂತರಿಕ ವಿಚಾರ, ನಮ್ಮ ಪಕ್ಷ ಒಡೆಯುವ ಇವರ ಪ್ರಯತ್ನ ಫಲಿಸದು. ಕುಮಾರಸ್ವಾಮಿಯವರು ಮೊದಲು ತಮ್ಮ ಮನೆಯಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ಆರಿಸಿಕೊಳ್ಳಲಿ. ನಂತರ ನಮ್ಮ ಪಕ್ಷದ ಬಗ್ಗೆ ಯೋಚಿಸಲಿ ಎಂದು ಹೇಳಿದರು.

ಬ್ರಾಹ್ಮಣ ಪ್ರಹ್ಲಾದ್‌ ಜೋಶಿ ಸಿಎಂ- 8 ಮಂದಿ ಡೆಪ್ಯೂಟಿ ಸಿಎಂ: ಬಿಜೆಪಿಯಲ್ಲಿ ಪ್ರಳಯ ಸೃಷ್ಟಿಸಿದ ಕುಮಾರಸ್ವಾಮಿ

ದಿನೇಶ್‌ ಖಂಡನೆ:

ಕುಮಾರಸ್ವಾಮಿ ಅವರು ಯಾವ ಅರ್ಥದಲ್ಲಿ ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಯಾವ ಉದ್ದೇಶದಿಂದ ಹೇಳಿದ್ದಾರೆ ಎಂಬುದೂ ಗೊತ್ತಿಲ್ಲ. ಜಾತಿ ಹೆಸರು ರಾಜಕೀಯಕ್ಕೆ ಎಳೆದು ತರುವುದು ಸರಿಯಲ್ಲ. ಕುಮಾರಸ್ವಾಮಿ ಹೇಳಿಕೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕಾಂಗ್ರೆಸ್‌ ನಾಯಕ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯಿಸಿದ್ದಾರೆ.

ಯಾಕೆ ಆ ರೀತಿ ಮಾತನಾಡಿದೆ ಎಂಬುದನ್ನು ಕುಮಾರಸ್ವಾಮಿ ಅವರೇ ಹೇಳಬೇಕು. ಆ ರೀತಿ ಜಾತಿ ಹೆಸರನ್ನು ಇಟ್ಟುಕೊಂಡು ಮಾತನಾಡುವುದು ಮಾಜಿ ಮುಖ್ಯಮಂತ್ರಿ ಅವರಿಗೆ ಶೋಭೆ ತರುವುದಿಲ್ಲ. ಒಂದು ಸಮುದಾಯವನ್ನು ಎಳೆದು ತಂದು ಹಾಗೆ ಮಾತನಾಡುವುದು ಸರಿಯಲ್ಲ. ಎಲ್ಲಾ ಜಾತಿ ಸಮುದಾಯದಲ್ಲೂ ಅನೇಕ ಉಪ ಸಮುದಾಯಗಳು ಇದ್ದೇ ಇರುತ್ತದೆ. ಹೀಗಾಗಿ ರಾಜಕೀಯ ಹೇಳಿಕೆಗಳಿಗೆ ಜಾತಿ ಎಳೆದು ತರಬಾರದು ಎಂದು ಅಭಿಪ್ರಾಯಪಟ್ಟರು.