‘ಕಳೆದ ವಿಧಾನಸಭಾ ಚುನಾವಣೆ ವೇಳೆ ನನ್ನ ವಿರುದ್ಧ ಪಿತೂರಿ ಮಾಡಿದ್ದು, ಹಣ ಹಂಚಿದ್ದು ಎಲ್ಲವನ್ನೂ ಚುನಾವಣೆ ಬಳಿಕ ನಡೆದ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಆದರೆ, ಆ ಬಗ್ಗೆ ಇದುವರೆಗೆ ಯಾವುದೇ ಶಿಸ್ತು ಕ್ರಮ ಆಗಿಲ್ಲ. ಇಂಥ ವಾತಾವರಣದಲ್ಲಿ ನಾನು ಹೇಗೆ ಪಕ್ಷ ಸಂಘಟನೆ ಮಾಡಬೇಕು’ ಎಂದು ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರು (ಆ.18) :  ‘ಕಳೆದ ವಿಧಾನಸಭಾ ಚುನಾವಣೆ ವೇಳೆ ನನ್ನ ವಿರುದ್ಧ ಪಿತೂರಿ ಮಾಡಿದ್ದು, ಹಣ ಹಂಚಿದ್ದು ಎಲ್ಲವನ್ನೂ ಚುನಾವಣೆ ಬಳಿಕ ನಡೆದ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಆದರೆ, ಆ ಬಗ್ಗೆ ಇದುವರೆಗೆ ಯಾವುದೇ ಶಿಸ್ತು ಕ್ರಮ ಆಗಿಲ್ಲ. ಇಂಥ ವಾತಾವರಣದಲ್ಲಿ ನಾನು ಹೇಗೆ ಪಕ್ಷ ಸಂಘಟನೆ ಮಾಡಬೇಕು’ ಎಂದು ಮಾಜಿ ಸಚಿವ ಹಾಗೂ ಯಶವಂತಪುರ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ನಾನು ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರನ್ನು ಖುದ್ದಾಗಿ ಭೇಟಿ ಮಾಡಿ ಮಾತನಾಡುತ್ತೇನೆ. ಈಗಲೂ ಬಿಜೆಪಿಯಲ್ಲೇ ಇದ್ದೇನೆ. ಮುಂದೆಯೂ ಬಿಜೆಪಿಯಲ್ಲೇ ಇರುತ್ತೇನೆ. ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಶಾಸಕ ಸೋಮಶೇಖರ್‌ ಕಾಂಗ್ರೆಸ್‌ಗೆ ಬಂದರೆ ಸ್ವಾಗತ: ಸಚಿವ ಪರಮೇಶ್ವರ್‌

ಗುರುವಾರ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಂಬಲಿಗರ ಸಭೆ ನಡೆಸಿದರು. ಈ ಸಭೆಗೆ ಪಕ್ಕದ ನೆಲಮಂಗಲ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಶ್ರೀನಿವಾಸ್‌ ಅವರೂ ಆಗಮಿಸಿದ್ದುದು ಕುತೂಹಲ ಮೂಡಿಸಿತು.

ಬಳಿಕ ಮಾತನಾಡಿದ ಸೋಮಶೇಖರ್‌, ವಿಧಾನಸಭೆ ಚುನಾವಣೆ ವೇಳೆ ಯಶವಂತಪುರ ಕ್ಷೇತ್ರದ ಬಿಜೆಪಿಯ ಸ್ಥಳೀಯ ಕೆಲ ಕಾರ್ಯಕರ್ತರು ನನ್ನ ವಿರುದ್ಧವೇ ಕೆಲಸ ಮಾಡಿದ್ದರು. ಅವರ ವಿರುದ್ಧ ಈವರೆಗೂ ಯಾವುದೇ ಶಿಸ್ತುಕ್ರಮ ಜರುಗಿಸದಿರುವುದು ನನ್ನ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಂತ ನಾನು ಅಥವಾ ನನ್ನ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುವುದಿಲ್ಲ. ಪಕ್ಷ ಸೇರ್ಪಡೆಗೆ ನನಗೆ ಕಾಂಗ್ರೆಸ್‌ನಿಂದ ಯಾವುದೇ ಆಹ್ವಾನವೂ ಬಂದಿಲ್ಲ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌(Nalin kumar katee), ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj bommai), ಮಾಜಿ ಸಚಿವ ಸಿ.ಟಿ.ರವಿ ನನಗೆ ಕರೆ ಮಾಡಿ ಮಾತನಾಡಿದ್ದಾರೆ. ನಾನು ಪಕ್ಷ ಬಿಡುವೆ ಎಂದು ಎಲ್ಲೂ ಹೇಳಿಲ್ಲ ಎಂಬುದನ್ನು ಅವರಿಗೂ ಹೇಳಿದ್ದೇನೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳದಿದ್ದರೆ, ನಾನು ಕ್ಷೇತ್ರದಲ್ಲಿ ಹೇಗೆ ಪಕ್ಷ ಸಂಘಟನೆ ಮಾಡಲಿ? ಸದಾನಂದಗೌಡರು ನನ್ನನ್ನು ಮನೆಗೆ ಕರೆಸಿದ್ದರು. ಅವರಿಗೂ ಸ್ಥಳೀಯ ಕೆಲ ಕಾರ್ಯಕರ್ತರ ಪಕ್ಷ ವಿರೋಧ ಚಟುವಟಿಕೆ ಬಗ್ಗೆ ಹೇಳಿದ್ದೇನೆ. ಸದಾನಂದಗೌಡರು ಯಶವಂತಪುರ, ಬ್ಯಾಟರಾಯನಪುರ, ದಾಸರಹಳ್ಳಿ ಕ್ಷೇತ್ರಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಬಗ್ಗೆ ಕೇಂದ್ರ ನಾಯಕರಿಗೆ ಪತ್ರ ಬರೆದಿದ್ದಾರೆ. ಆ ಪತ್ರ ಹಾಗೂ ಸದಾನಂದಗೌಡರ ಮಾತಿಗೂ ಕಿಮ್ಮತ್ತಿಲ್ಲ ಎಂದು ತಿಳಿಸಿದರು.

ಬಿಜೆಪಿಯ ರಾಜ್ಯ-ಜಿಲ್ಲಾ ಮಟ್ಟದ ನಾಯಕರು ನನಗೆ ಯಾವುದೇ ತೊಂದರೆ ಮಾಡಿಲ್ಲ. ಆದರೆ, ಸ್ಥಳೀಯ ಕೆಲ ಬಿಜೆಪಿ ಕಾರ್ಯಕರ್ತರು ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ಅವರೇ ನನ್ನನ್ನು ಬಿಜೆಪಿಯಿಂದ ಕಳುಹಿಸುವಂತೆ ಕಾಣುತ್ತಿದೆ. ಚುನಾವಣೆ ಸಂದರ್ಭದಲ್ಲಿ ನನ್ನ ಹೆಸರಿನಲ್ಲಿ ಆಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ನನ್ನ ಮಗನನ್ನು ಸೋಲಿಸಬೇಕು ಎಂದು ಷಡ್ಯಂತ್ರ ಮಾಡಿದ್ದರು. ಈ ವಿಚಾರ ತಿಳಿದು ಪಕ್ಷದ ಮುಖಂಡರ ಗಮನಕ್ಕೆ ತಂದಿದ್ದೆ. ಚುನಾವಣೆ ಗೆದ್ದ ಬಳಿಕ ನಾನು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದೆ ಮರೆತಿದ್ದೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನನ್ನ ಕ್ಷೇತ್ರದ ವ್ಯಾಪ್ತಿಯ ಕೆಂಪೇಗೌಡ ಬಡಾವಣೆಗೆ ಬರುತ್ತಿರುವ ಬಗ್ಗೆ ಪತ್ರಿಕೆಗಳಿಂದ ತಿಳಿಯಿತು. ಹೀಗಾಗಿ ಅವರು ಕ್ಷೇತ್ರಕ್ಕೆ ಬಂದಾಗ ಭೇಟಿ ಮಾಡಿ ಕ್ಷೇತ್ರದ ಕುಡಿಯುವ ನೀರು ಹಾಗೂ ಕೆಂಪೇಗೌಡ ಬಡಾವಣೆ ಸಮಸ್ಯೆ ಬಗ್ಗೆ ಗಮನಕ್ಕೆ ತಂದೆ. ಆಗ ಶಿವಕುಮಾರ್‌ ಅವರು ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು. ಹೀಗಾಗಿ ನಾನು ಅವರ ಬಗ್ಗೆ ನಾಲ್ಕು ಒಳ್ಳೆ ಮಾತನಾಡಿದೆ. ಶಿವಕುಮಾರ್‌ ಜತೆಗೆ ಕ್ಷೇತ್ರದ ಅಭಿವೃದ್ಧಿ ಬಿಟ್ಟರೆ ರಾಜಕೀಯದ ಬಗ್ಗೆ ಮಾತನಾಡಿಲ್ಲ. ನನ್ನ ಬೆಂಬಲಿಗರೊಂದಿಗೂ ಮಾತನಾಡಿಲ್ಲ. ಆದರೆ, ನನ್ನ ವಿರುದ್ಧ ಪಿತೂರಿ ಮಾಡಿದವರೇ ಈಗಲೂ ಇದನ್ನೆಲ್ಲಾ ಸೃಷ್ಟಿಮಾಡುತ್ತಿದ್ದಾರೆ ಎಂದು ಸೋಮಶೇಖರ್‌ ಹೇಳಿದರು.

ಸಹಕಾರ ಕ್ಷೇತ್ರದಲ್ಲಿ ನಾನು ಈ ಮಟ್ಟಕ್ಕೆ ಬೆಳೆಯಲು ನನ್ನ ಗುರು ಡಿಕೆಶಿ ಕಾರಣ: ಎಸ್‌ಟಿ ಸೋಮಶೇಖರ್

ಕಾಂಗ್ರೆಸ್‌ಗೆ ಅರ್ಜಿ ಹಾಕಿಲ್ಲ:

ಸಿದ್ದರಾಮಯ್ಯ(Siddaramaiah), ಡಿ.ಕೆ.ಶಿವಕುಮಾರ್‌(DK Shivakumar)ಗೆ ಕಾಂಗ್ರೆಸ್‌ಗೆ ಬರುವಂತೆ ನನ್ನನ್ನು ಕರೆದಿಲ್ಲ. ಪಕ್ಷಕ್ಕೆ ಬರುವೆ ಎಂದು ನಾನೂ ಅಪ್ಲಿಕೇಶನ್‌ ಹಾಕಿಲ್ಲ. ಸ್ಥಳೀಯ ಕೆಲ ಬಿಜೆಪಿ ಕಾರ್ಯಕರ್ತರು, ಸೋಮಶೇಖರ್‌ ಲೋಕಸಭೆಗೆ ಹೋಗುತ್ತಾನೆ. ಮಗ ಯಶವಂತಪುರ ಕ್ಷೇತ್ರಕ್ಕೆ ಬರುತ್ತಾನೆ ಎಂದು ಮಾತನಾಡುತ್ತಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.

ನನ್ನ ವಿರುದ್ಧ ಕಿತಾಪತಿ ಮಾಡುತ್ತಿರುವವರು ಮೂಲ ಬಿಜೆಪಿಗರಲ್ಲ. ಅವರು ಬೇರೆ ಪಕ್ಷಗಳಿಂದ ಬಿಜೆಪಿಗೆ ಬಂದವರು. ಡಿ.ಕೆ.ಶಿವಕುಮಾರ್‌ ಕಾರ್ಯಕ್ರಮದ ವಿಡಿಯೊವನ್ನು ಇವರೇ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಇಷ್ಟೆಲ್ಲಾ ರಾಜಾರೋಷವಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದರೂ ಯಾರು ಕೇಳುತ್ತಿಲ್ಲವಲ್ಲಾ ಎಂಬುದಷ್ಟೇ ನನ್ನ ಬೆಂಬಲಿಗರ ಪ್ರಶ್ನೆಯಾಗಿದೆ ಎಂದು ಹೇಳಿದರು.