ಬಿಜೆಪಿ ಶಾಸಕ ಸೋಮಶೇಖರ್ ಕಾಂಗ್ರೆಸ್‌ಗೆ ಬಂದರೆ ಸ್ವಾಗತ: ಸಚಿವ ಪರಮೇಶ್ವರ್
ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಹಿಂದೆ ಕಾಂಗ್ರೆಸ್‌ಗೆ ದುಡಿದಿದ್ದವರು. ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಕೆಲಸ ಮಾಡಿದ್ದರು. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಅವರನ್ನು ಬೆಂಗಳೂರು ನಗರ ಜಿಲ್ಲಾಧ್ಯಕ್ಷನ್ನಾಗಿಯೂ ಮಾಡಿದ್ದೆ. ಅವರು ಪಕ್ಷಕ್ಕೆ ಬಂದರೆ ಸ್ವಾಗತ.
ಬೆಂಗಳೂರು (ಆ.17): ‘ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹಿಂದೆ ಕಾಂಗ್ರೆಸ್‌ಗೆ ದುಡಿದಿದ್ದವರು. ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಕೆಲಸ ಮಾಡಿದ್ದರು. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಅವರನ್ನು ಬೆಂಗಳೂರು ನಗರ ಜಿಲ್ಲಾಧ್ಯಕ್ಷನ್ನಾಗಿಯೂ ಮಾಡಿದ್ದೆ. ಅವರು ಪಕ್ಷಕ್ಕೆ ಬಂದರೆ ಸ್ವಾಗತ, ನಾವು ಅವರಿಗೆ ಯಾವುದೇ ಭೇದ ಮಾಡುವುದಿಲ್ಲ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಟಿ.ಸೋಮಶೇಖರ್ ಅವರ ಗುಣಗಾನ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಎಸ್.ಟಿ. ಸೋಮಶೇಖರ್ ಪಕ್ಷಕ್ಕೆ ಬರುತ್ತೇನೆ ಎಂದರೆ ಒಪ್ಪುತ್ತೇವೆ. ಆದರೆ ಈವರೆಗೆ ನಾನು ಅವರನ್ನು ಸಂಪರ್ಕ ಮಾಡಿಲ್ಲ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದಾಗ ಜಿಲ್ಲಾಧ್ಯಕ್ಷರಾಗಿ ಅವರು ಒಳ್ಳೆಯ ಕೆಲಸ ಮಾಡಿದ್ದರು. ಪಕ್ಷವೂ ಅವರನ್ನು ಅದೇ ರೀತಿ ನೋಡಿಕೊಂಡಿದ್ದರು. ನಮ್ಮ ಪಕ್ಷದಲ್ಲಿ ಎರಡು ಬಾರಿ ಶಾಸಕರಾಗಿದ್ದರು. ಇಲ್ಲೇ ಇದ್ದಿದ್ದರೆ ಅವರಿಗೆ ಸಚಿವ ಸ್ಥಾನ ಸಿಗುತ್ತಿತ್ತು. ಈಗಲೂ ಅವರಿಗೆ ಅಲ್ಲಿ ಬೇಸರವಾಗಿ ಪಕ್ಷಕ್ಕೆ ವಾಪಸು ಬರುವುದಾದರೆ ಒಪ್ಪುತ್ತೇವೆ ಎಂದು ಹೇಳಿದರು.
ಅವರಿಗೆ ಅಡೆತಡೆ ಮಾಡಲ್ಲ: ಸೋಮಶೇಖರ್ ಅವರು ಸ್ಥಾನಮಾನ ನೋಡಿ ಬರುವುದಾಗಿ ಹೇಳಿಲ್ಲ. ನಮ್ಮ ಪಕ್ಷದ ಸಿದ್ಧಾಂತ ನೋಡಿ ಬರುವುದಾದರೆ ಬರಬಹುದು. ಅವರಿಗೆ ಅಡತಡೆ ಮಾಡುವುದಿಲ್ಲ ಜತೆಗೆ ಯಾವುದೇ ಭೇದ ಮಾಡುವುದಿಲ್ಲ. ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಅಧಿಕಾರ ಸಿಗುತ್ತದೆ. ರಾಜಕೀಯದಲ್ಲಿ ಎಲ್ಲವೂ ಸಾಧ್ಯ ಎಂದು ಹೇಳುವ ಮೂಲಕ ಘರ್‌ವಾಪಸಿಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.
ಕಾಂಗ್ರೆಸ್ ಸೇರುವ ಯಾವುದೇ ಪರಿಸ್ಥಿತಿ ಬಂದಿಲ್ಲ: ಶಾಸಕ ಶಿವರಾಮ್ ಹೆಬ್ಬಾರ್
ಉಪೇಂದ್ರ ತಪ್ಪು ಒಪ್ಪಿಕೊಂಡಿದ್ದಾರೆ: ನಟ ಉಪೇಂದ್ರ ತನ್ನ ಹೇಳಿಕೆ ದುರುದ್ದೇಶದಿಂದ ಕೂಡಿದ್ದಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಇಲ್ಲಿ ಉಪೇಂದ್ರ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಎಂಬ ಬೇಧವಿಲ್ಲ. ಕಾನೂನು ಎಲ್ಲರಿಗೂ ಒಂದೇ. ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು. ಉಪೇಂದ್ರ ತಪ್ಪು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಇದನ್ನು ಕಾನೂನು ಬೇರೆ ದೃಷ್ಟಿಯಿಂದ ನೋಡುತ್ತದೆ. ಈ ವಿಚಾರವಾಗಿ ನಾನು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಲ್ಲ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದ ಉದ್ದೇಶವೇ ಬೇರೆ ಎಂದರು.