ಬಿಜೆಪಿ ಎಂದಿಗೂ ಎಚ್.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ ಮಂಡ್ಯದಲ್ಲಿ ಹೇಳಿದ್ದಾರೆ. ಇದೇ ವೇಳೆ, ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿ, ಹೈಕಮಾಂಡ್ ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ಮಂಡ್ಯ (ನ.24): ಬಿಜೆಪಿ ಎಂದಿಗೂ ಎಚ್‌.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡೋಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. 

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರಾಜ್ಯದಲ್ಲಿ ರಾಜಕೀಯ ಕ್ರಾಂತಿ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ ಬಗ್ಗೆ ವ್ಯಂಗ್ಯವಾಡಿ, ಅವರನ್ನು ಕರೆದುಕೊಂಡು ಹೋಗಿ ಸಿಎಂ ಮಾಡುವುದಕ್ಕೆ ಅದು ಕಾಂಗ್ರೆಸ್‌ ಪಕ್ಷವಲ್ಲ. ಕುಮಾರಸ್ವಾಮಿಗೆ ತಮ್ಮ ಬಂಡವಾಳ ಗೊತ್ತಾಗಿಯೇ ಬಿಜೆಪಿ ಹಿಂದೆ ಹೋಗಿದ್ದಾರೆ. ಬಿಜೆಪಿಯಲ್ಲಿ ಇವರ ಆಟ ನಡೆಯೋಲ್ಲ, ಬಿಜೆಪಿಯವರು ಇವರನ್ನು ಎಂದಿಗೂ ಸಿಎಂ ಮಾಡುವುದಿಲ್ಲ ಎಂದು ಖಡಕ್ಕಾಗಿ ಹೇಳಿದರು.

ಸಿಎಂ ಬದಲಾವಣೆ ಹೈಕಮಾಂಡ್ ನಿರ್ಧರಿಸುತ್ತೆ:

ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂಬ ಕೂಗೆದ್ದಿದೆ. ಈ ಸಂಬಂಧ ಹೈಕಮಾಂಡ್ ಸೂಕ್ತ ಸಂದೇಶ ಕೊಡಬೇಕಾಗುತ್ತದೆ. ಕೆಲವೊಂದು ಸಂದರ್ಭ ಹೀಗೆ ಆಗುವುದು ಸಾಮಾನ್ಯ. ಕರ್ನಾಟಕ ದೊಡ್ಡ ರಾಜ್ಯವಾಗಿರುವುದರಿಂದ ಹೈಕಮಾಂಡ್‌ನವರು ಸೂಕ್ತ ಸಮಯದಲ್ಲಿ ಸರಿಯಾದ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.