ಕೊಡಗಿನ ವಿರಾಜಪೇಟೆಯಲ್ಲಿ ನಡೆದ 'ಮೆಮೋರಿಯಲ್ ಫುಟ್ಬಾಲ್ ಕಪ್' ಪಂದ್ಯಾವಳಿಯಲ್ಲಿ, ಸುಂಟಿಕೊಪ್ಪ ವಿರುದ್ಧ ಸೋತ ಕಡಂಗ ತಂಡದವರು ಸಂಭ್ರಮಾಚರಣೆ ಮಾಡುತ್ತಿದ್ದವರ ಮೇಲೆ ಡ್ರಮ್ ಎಸೆದಿದ್ದು, ಇದು ಮಾರಾಮಾರಿಗೆ ಕಾರಣವಾಯಿತು. ತಕ್ಷಣವೇ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ವಿರಾಜಪೇಟೆ (ಕೊಡಗು) (ನ.24): ಕ್ರೀಡಾಮನೋಭಾವ ಮೆರೆಯಬೇಕಿದ್ದ ಮೈದಾನವೊಂದು ನಿನ್ನೆ ರಾತ್ರಿ ಕ್ಷಣಕಾಲ ರಣರಂಗವಾಗಿ ಬದಲಾದ ಘಟನೆ ಕೊಡಗಿನ ವಿರಾಜಪೇಟೆಯಲ್ಲಿ ನಡೆದಿದೆ.
ವಿರಾಜಪೇಟೆ ತಾಲ್ಲೂಕು ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆಯುತ್ತಿದ್ದ ಪ್ರತಿಷ್ಠಿತ 'ಮೆಮೋರಿಯಲ್ ಫುಟ್ಬಾಲ್ ಕಪ್' ಪಂದ್ಯಾವಳಿಯ ವೇಳೆ ಎರಡು ತಂಡಗಳ ನಡುವೆ ಭಾರೀ ಗಲಾಟೆ ಏರ್ಪಟ್ಟಿದೆ. ಕಡಂಗ ಹಾಗೂ ಸುಂಟಿಕೊಪ್ಪ ತಂಡಗಳ ನಡುವಿನ ರೋಚಕ ಪಂದ್ಯದ ಬಳಿಕ ಈ ಘಟನೆ ನಡೆದಿದೆ.
ಫುಟ್‌ಬಾಲ್ ತಂಡಗಳ ನಡುವೆ ಗಲಾಟೆಗೆ ಕಾರಣವೇನು?
ಪಂದ್ಯದಲ್ಲಿ ಸುಂಟಿಕೊಪ್ಪ ತಂಡವು ಕಡಂಗ ತಂಡದ ವಿರುದ್ಧ ಜಯಗಳಿಸಿತ್ತು. ಗೆಲುವಿನ ಖುಷಿಯಲ್ಲಿದ್ದ ಸುಂಟಿಕೊಪ್ಪ ತಂಡದ ಆಟಗಾರರು ಮತ್ತು ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಈ ವೇಳೆ ಸೋಲಿನ ಆಘಾತದಲ್ಲಿದ್ದ ಕಡಂಗ ತಂಡದ ಕಡೆಯ ಕೆಲ ಯುವಕರು, ಸಂಭ್ರಮಿಸುತ್ತಿದ್ದವರ ಮೇಲೆ ಏಕಾಏಕಿ ಡ್ರಮ್ ಒಂದನ್ನು ಎಸೆದಿದ್ದಾರೆ ಎಂದು ವರದಿಯಾಗಿದೆ. ಇದೇ ವಿಚಾರವು ವಿಕೋಪಕ್ಕೆ ಹೋಗಿ, ಎರಡೂ ತಂಡಗಳ ನಡುವೆ ಮಾತಿನ ಚಕಮಕಿ ನಡೆದು, ಅದು ಮಾರಾಮಾರಿಗೆ ತಿರುಗಿದೆ.
ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ಹತೋಟಿ:
ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದ್ದಂತೆಯೇ, ತಕ್ಷಣವೇ ಮಧ್ಯಪ್ರವೇಶಿಸಿದ ವಿರಾಜಪೇಟೆ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಗಲಾಟೆ ನಿಯಂತ್ರಿಸಿದ ಪೊಲೀಸರು, ಕ್ರೀಡಾಂಗಣದಲ್ಲಿ ಶಾಂತಿ ಕಾಪಾಡುವ ಮೂಲಕ ಸ್ಥಗಿತಗೊಂಡಿದ್ದ ಪಂದ್ಯಾವಳಿಯನ್ನು ಮತ್ತೆ ಮುಂದುವರಿಸಲು ಅವಕಾಶ ಮಾಡಿಕೊಟ್ಟರು.


