ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ತಾನು ಸರ್ಕಾರ 6 ತಿಂಗಳಲ್ಲಿ ಬೀಳುತ್ತದೆ ಎಂದು ಹೇಳಿಲ್ಲ, ಆದರೆ ರಾಜಕೀಯ ಬೆಳವಣಿಗೆಗಳ ಬಗ್ಗೆ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದೇನೆ ಗ್ಯಾರಂಟಿ ಯೋಜನೆಗಳಲ್ಲೇ ಮುಳುಗಿರುವ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ರೈತರನ್ನು ಕಡೆಗಣಿಸಿದೆ ಎಂದು ಆರೋಪಿಸಿದರು.
ಕೋಲಾರ (ನ.24): ನಾನೂ ಊಹೆಯಲ್ಲೂ ಇಲ್ಲ, ಭ್ರಮೆಯಲ್ಲೂ ಇಲ್ಲ, ಮುಖ್ಯಮಂತ್ರಿ ಅವಕಾಶ ಸಿಕ್ಕಾಗ ಲೂಟಿ ಮಾಡಬೇಕು ಅನ್ನುವುದೇ ಕಾಂಗ್ರೆಸ್ ಅವರ ಉದ್ದೇಶ, ಈಗ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿ ಶನಿವಾರ ನಡೆದ ನಮ್ಮ ಪಕ್ಷದ ೨೫ನೇ ವರ್ಷದ ಕಾರ್ಯಕ್ರಮದಲ್ಲಿ ನಾನು ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಯಾವುದೇ ಕ್ರಾಂತಿ ಬಗ್ಗೆ ಮಾತನಾಡಿಲ್ಲ:
ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯಾವುದೇ ಕ್ರಾಂತಿ ಅಥವಾ ಹಗಲು ಕನಸಿನ ಬಗ್ಗೆ ಹೇಳಿಲ್ಲ, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದೇನೆ ಎಂದು ಹೇಳಿದರು. ಯಾವುದೇ ಪಕ್ಷ, ಯಾವುದೇ ನಾಯಕರು ಏನು ತೀರ್ಮಾನ ಮಾಡುತ್ತಾರೋ ಎಂಬುದನ್ನು ನಾವು ಊಹೆ ಮಾಡಲಿಕ್ಕಾಗಲ್ಲ, ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಮೈ ಮರೆಯದೆ ಕೆಲಸ ಮಾಡುವಂತೆ ಕರೆ ನೀಡಿದ್ದೇನೆ. ಏನೂ ಬೇಕಾದರೂ ಆಗಬಹುದು ಎಂದು ಹೇಳಿದ್ದೇ ಹೊರತು, ಸರ್ಕಾರ ೬ ತಿಂಗಳಲ್ಲಿ ಬೀಳುತ್ತೆ ಎಂದು ನಾನು ಹೇಳಿಲ್ಲ ಎಂದು ತಿಳಿಸಿದರು.
ಸರ್ಕಾರ ಗ್ಯಾರಂಟಿ ಬಿಟ್ಟು ಮುಂದೆ ಹೋಗಿಲ್ಲ:
ಈಗಿನ ಸರ್ಕಾರ ೧೩೬ ಸ್ಥಾನ ಗೆದ್ದರೂ ಸಹ ಗ್ಯಾರಂಟಿ ಘೋಷಣೆ ಮಾಡಿ ಅವುಗಳನ್ನು ಬಿಟ್ಟು ಮುಂದೆ ಹೋಗಿಲ್ಲ, ಗ್ಯಾರಂಟಿಯಿಂದ ಜನ ನೆಮ್ಮದಿಯಿಂದ ಬದುಕುತ್ತಿದ್ದಾರಾ, ಮೆಕ್ಕೆಜೋಳ ಬೆಳೆದ ರೈತರ ಪರಿಸ್ಥಿತಿ ಏನು, ಕೋಲಾರದ ರೈತರ ಜೀವನ ಸುಧಾರಿಸಿದೆಯೇ ಎಂದು ಪ್ರಶ್ನಿಸಿದರು.


