ವಿದೇಶಿ ಮಹಿಳೆ ಮೇಲಿನ ಅತ್ಯಾಚಾರವನ್ನು 'ಸಣ್ಣ ಘಟನೆ' ಎಂದು ಕರೆದ ಸಂಸದ ರಾಜಶೇಖರ್ ಹಿಟ್ನಾಳ್ ಅವರ ಹೇಳಿಕೆಗೆ ಬಿಜೆಪಿ ಎಂಎಲ್‌ಸಿ ಹೇಮಲತಾ ನಾಯಕ್ ತೀವ್ರ ಆಕ್ರೋಶ. ಇದು ಮಹಿಳಾ ಕುಲಕ್ಕೆ ಮಾಡಿದ ಅವಮಾನ, ಸಂಸದರು ತಕ್ಷಣ ಕ್ಷಮೆ ಕೇಳದಿದ್ದರೆ ಅವರ ಮನೆಗೆ ನುಗ್ಗಿ ಪ್ರತಿಭಟಿಸುವುದಾಗಿ ಎಚ್ಚರಿಕೆ

ಕೊಪ್ಪಳ (ಜ.25): ವಿದೇಶಿ ಮಹಿಳೆ ಮೇಲಿನ ಅತ್ಯಾ೧ಚಾರವನ್ನು ಸಣ್ಣ ಘಟನೆ ಎಂದಿರುವ ಸಂಸದ ರಾಜಶೇಖರ್ ಹಿಟ್ನಾಳ್ ತಕ್ಷಣವೇ ಕ್ಷಮೆ ಕೇಳಬೇಕೆಂದು ಬಿಜೆಪಿ ಎಂಎಲ್‌ಸಿ ಹೇಮಲತಾ ನಾಯಕ್ ಆಗ್ರಹಿಸಿದ್ದಾರೆ. ಸಂಸದರ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯ ಬಾಯಲ್ಲಿ ಇಂತಹ ಕೀಳುಮಟ್ಟದ ಮಾತುಗಳು ಬರಬಾರದಿತ್ತು ಎಂದು ಅವರು ಕೊಪ್ಪಳದಲ್ಲಿ ವಾಗ್ದಾಳಿ ನಡೆಸಿದರು.

ಪ್ರವಾಸೋದ್ಯಮ ಸಮರ್ಥನೆಗೆ ಹೆಣ್ಣಿನ ಮಾನ ಹರಾಜು

ಪ್ರವಾಸೋದ್ಯಮವನ್ನು ಸಮರ್ಥಿಸುವ ಭರದಲ್ಲಿ ಅತ್ಯಾ೧ಚಾರದಂತಹ ಘೋರ ಕೃತ್ಯವನ್ನು 'ಸಣ್ಣದು' ಎನ್ನುವುದು ತಪ್ಪು. ಇದು ಇಡೀ ಮಹಿಳಾ ಕುಲಕ್ಕೆ ಮಾಡಿದ ಅವಮಾನ.ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬುದಕ್ಕೆ ಸಂಸದರ ಈ ಹೇಳಿಕೆಯೇ ಸಾಕ್ಷಿ. ಅವರ ಮನಸ್ಸಿನಲ್ಲಿದ್ದ ಮಾತುಗಳೇ ಇಂದು ಬಾಯಲ್ಲಿ ಹೊರಬಂದಿವೆ ಎಂದು ಹೇಮಲತಾ ನಾಯಕ್ ಆಕ್ರೋಶ ಹೊರಹಾಕಿದರು.

ಮನೆಗೆ ನುಗ್ಗುವ ಎಚ್ಚರಿಕೆ ನೀಡಿದ ಎಂಎಲ್‌ಸಿ

'ನನ್ನನ್ನು ಬಾಯಿ ತುಂಬ ಅಕ್ಕ ಎಂದು ಕರೆಯುವ ಸಂಸದರು, ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸಣ್ಣದು ಎನ್ನುತ್ತಿರುವುದು ನೋವು ತಂದಿದೆ' ಎಂದ ಅವರು, ಸಂಸದರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳದಿದ್ದರೆ ಅವರ ಮನೆಗೆ ನುಗ್ಗಿ ಪ್ರತಿಭಟನೆ ನಡೆಸುವುದಾಗಿ ಗಡುವು ನೀಡಿದ್ದಾರೆ. ಕ್ಷಮೆ ಕೇಳದಿದ್ದರೆ ಈ ಕಪ್ಪು ಚುಕ್ಕೆ ನಿಮ್ಮ ಹೆಸರಿನಲ್ಲಿ ಅಚ್ಚಳಿಯದೇ ಉಳಿಯಲಿದೆ ಎಂದು ಎಚ್ಚರಿಸಿದ್ದಾರೆ.