ಸಂಸದ ರಾಜಶೇಖರ್ ಹಿಟ್ನಾಳ್ ತಮ್ಮ 'ಅತ್ಯಾ೧ಚಾರ ಸಣ್ಣ ಕೊಲೆ' ಎಂಬ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹನುಮನ ಜನ್ಮಸ್ಥಳವಾದ ಅಂಜನಾದ್ರಿಯ ಪಾವಿತ್ರ್ಯತೆ ಕಾಪಾಡಲು ಈ ರೀತಿ ಹೇಳಿದ್ದಾಗಿ ಸ್ಪಷ್ಟನೆ ನೀಡಿದ್ದು, ಒಂದು ಘಟನೆಯನ್ನು ವೈಭವೀಕರಿಸಿದರೆ ಭಕ್ತರ ಮನಸ್ಸಿಗೆ ನೋವು ಆಗುತ್ತೆ ಎಂದರು.

ಕೊಪ್ಪಳ (ಜ.25): ತಮ್ಮ 'ಅತ್ಯಾ೧ಚಾರ ಸಣ್ಣ ಕೊಲೆ' ಎಂಬ ಹೇಳಿಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕೊಪ್ಪಳದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಸಂಸದ ರಾಜಶೇಖರ್ ಹಿಟ್ನಾಳ್, ತಮ್ಮ ಮಾತನ್ನು ಅಂಜನಾದ್ರಿ ಬೆಟ್ಟಕ್ಕೆ ಲಿಂಕ್ ಮಾಡಿ ಸಮರ್ಥಿಸಿಕೊಂಡಿದ್ದಾರೆ. ಒಂದು ಅಹಿತಕರ ಘಟನೆಯನ್ನು ಅತೀಯಾಗಿ ವೈಭವೀಕರಿಸುವುದರಿಂದ ಹನುಮನ ಜನ್ಮಸ್ಥಳವಾದ ಅಂಜನಾದ್ರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವೈಭವೀಕರಣದಿಂದ ಭಕ್ತರ ಮನಸ್ಸಿಗೆ ನೋವು

ಅಂಜನಾದ್ರಿ ಜೊತೆ ತಮಗೆ ಭಾವನಾತ್ಮಕ ಸಂಬಂಧವಿದೆ ಎಂದ ಹಿಟ್ನಾಳ್, ಈ ಪುಣ್ಯಕ್ಷೇತ್ರವನ್ನು ಜಗತ್ತಿಗೆ ಪರಿಚಯಿಸುವುದು ನನ್ನ ಉದ್ದೇಶವೇ ಹೊರತು ಘಟನೆಯನ್ನು ಹಗುರಗೊಳಿಸುವುದಲ್ಲ. ಇಲ್ಲಿ ನಡೆದ ಒಂದು ಘಟನೆಯನ್ನು ದೊಡ್ಡದಾಗಿ ಬಿಂಬಿಸಿದರೆ ಆಂಜನೇಯನ ಭಕ್ತರಿಗೆ ನೋವಾಗುತ್ತದೆ. ಮಾಧ್ಯಮಗಳು ನನ್ನ ಹೇಳಿಕೆಯನ್ನು ಕತ್ತರಿಸಿ ತೋರಿಸದೆ ಸಂಪೂರ್ಣವಾಗಿ ಬಿತ್ತರಿಸಬೇಕು ಎಂದು ಅವರು ಮನವಿ ಮಾಡಿದರು.

ಬಿಜೆಪಿ ನಾಯಕರ ಖಂಡನೆಗೆ ಹಿಟ್ನಾಳ್ ತಿರುಗೇಟು

ತಮ್ಮ ಹೇಳಿಕೆಯನ್ನು ಖಂಡಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ ಸಂಸದರು, 'ಬಿಜೆಪಿಯವರು ಯಾಕೆ ಇದನ್ನು ಇಷ್ಟೊಂದು ಖಂಡಿಸುತ್ತಿದ್ದಾರೆ ಎಂಬುದು ಜನರಿಗೆ ಸ್ಪಷ್ಟಪಡಿಸಲಿ' ಎಂದು ಸವಾಲು ಹಾಕಿದರು. ಅಂಜನಾದ್ರಿಯ ಬಗ್ಗೆ ಒಳ್ಳೆಯ ಪ್ರಚಾರ ಮಾಡುವುದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.