Asianet Suvarna News Asianet Suvarna News

ಕನ್ನಡದ ಕೆಲಸಕ್ಕೆ ಕಾಂಗ್ರೆಸಿಗರ ಅಡ್ಡಗಾಲೇಕೆ?

ದೆಹಲಿಯಲ್ಲಿ ಅವಮಾನವಾಗಿದ್ದು ನಮ್ಮ ನಿಯೋಗಕ್ಕಲ್ಲ, ಬದಲಿಗೆ ನಮ್ಮ ಭಾಷೆಗೆ ಎಂಬ ನೋವಿದೆ. ನಾವು ಹೋಗಿದ್ದು ಕನ್ನಡದ ಕೆಲಸಕ್ಕಾಗಿ. ಅದರಲ್ಲೂ ರಾಜಕೀಯ ಲಾಭವನ್ನು ನೋಡುವವರಿಗೆ ಏನೆನ್ನಬೇಕು? ರಾಷ್ಟ್ರ ರಾಜಧಾನಿಯಲ್ಲಿ ನಮ್ಮವರೇ ನಮ್ಮ ಭಾಷೆಯ ವಿಷಯದಲ್ಲಿ ರಾಜಕೀಯ ಮಾಡಿದರೆ ಕರ್ನಾಟಕದಿಂದ ಹೋದವರಿಗೆ ಏನನ್ನಿಸಬೇಡ!

BJP  Malavika Avinash slams congress over dubious stand on Kannada cause
Author
Bengaluru, First Published Mar 10, 2020, 1:35 PM IST

ಗುಂಪು, ಜನಾಂಗ, ಜನಸಮೂಹ, ರಾಜ್ಯ ಅಥವಾ ದೇಶ ಯಾವುದೇ ಇರಲಿ, ನಮ್ಮನಮ್ಮಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳಿರಲಿ, ಸಮಸ್ಯೆಗಳು ಎದುರಾದಾಗ ಅಥವಾ ಸಾಮೂಹಿಕ ಒಳಿತಿಗಾಗಿ ಮಾಡಿಕೊಳ್ಳುವ ಒಗ್ಗಟ್ಟು ಮನುಷ್ಯ ಸಹಜ. ನೆಲ, ಜಲ, ಭಾಷೆಯ ವಿಚಾರದಲ್ಲಿ ರಾಜಿಯಿಲ್ಲದ ಕಾರಣ, ಪಕ್ಷಭೇದ ಮರೆತು ಕನ್ನಡಿಗರೆಲ್ಲರೂ ಒಗ್ಗಟ್ಟನ್ನು ಮೆರೆದ ಹಲವು ಸನ್ನಿವೇಶಗಳು ಇತಿಹಾಸದ ಪುಟಗಳನ್ನಲಂಕರಿಸಿವೆ.

ಹಲವು ವರ್ಷಗಳಿಂದ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಒಂದು ನಿಯೋಗ ದೆಹಲಿಗೆ ಭೇಟಿ ನೀಡಿ, ಕೇಂದ್ರದ ವಿವಿಧ ಮಂತ್ರಿಗಳೊಂದಿಗೆ ಮಾತುಕತೆ ನಡೆಸಿ, ಕನ್ನಡ/ ಕನ್ನಡಿಗರಿಗೆ ದಕ್ಕಬೇಕಾದ ಪ್ರಾಶಸ್ತ್ಯ​ದ ಮನವಿಯನ್ನಿಟ್ಟು ಬರುವ ಪದ್ಧತಿ ನಮ್ಮಲ್ಲಿದೆ.

ಟಿವಿ ಚರ್ಚೆಯಲ್ಲಿ ಪ್ರಖರ ನಿಲುವು ವ್ಯಕ್ತಪಡಿಸುವ ದಿಟ್ಟೆ ಮಾಳವಿಕಾ!

ಅಂತೆಯೇ ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಟಿ.ಎ​ಸ್‌.ನಾಗಾಭರಣ ಅವರು ಮಾಚ್‌ರ್‍ 4-6, 2020ರಂದು ನಿಯೋಗ ಕೊಂಡೊ​ಯ್ದ​ರು. ಹಿರಿಯ ಶಿಕ್ಷಣ ತಜ್ಞರಾದ ಗುರುರಾಜ್‌ ಕರ್ಜಗಿ, ರಂಗಕರ್ಮಿ ಪ್ರಕಾಶ್‌ ಬೆಳವಾಡಿ, ಕನ್ನಡ ಹೋರಾಟಗಾರ ರಾ.ನಂ.ಚಂದ್ರಶೇಖರ್‌, ಕಾರ್ಮಿಕ ಹೋರಾಟಗಾರ ಸಿದ್ದಯ್ಯ, ನ್ಯಾಷನಲ್‌ ಲಾ ಸ್ಕೂಲ…ನ ಕಾನೂನು ಪ್ರಾಧ್ಯಾಪಕರಾದ ನಿರಂಜನ ಆರಾಧ್ಯ, ಪ್ರಾಧಿಕಾರದ ಕಾರ್ಯದರ್ಶಿಗಳಾದ ಮುರಳೀಧರ್‌ ಮತ್ತು ನಾನು ಆ ನಿಯೋಗದಲ್ಲಿದ್ದೆವು.

ಕನ್ನಡಕ್ಕೆ ಪ್ರಾಶಸ್ತ್ಯ ನಮ್ಮ ಬೇಡಿ​ಕೆ

ಶಿಕ್ಷಣ, ಉದ್ಯೋಗ, ಸೇವೆಗಳಲ್ಲಿ ಕನ್ನಡ ಮತ್ತು ಕನ್ನಡಿಗರಿಗೆ ಪ್ರಾಶಸ್ತ್ಯ ನೀಡುವುದು, ಸಾಂಸ್ಕೃತಿಕ ಪ್ರಾತಿನಿಧ್ಯ ಮತ್ತು ಶಾಸ್ತ್ರೀಯ ಭಾಷೆಯ ಉತ್ಥಾನಕ್ಕೆ ಸ್ವಾಯತ್ತೆ ಇವು ನಮ್ಮ ಚರ್ಚೆಯ ವಿಷಯಗಳಾಗಿದ್ದವು. ಆ ನಿಟ್ಟಿನಲ್ಲಿ ಹಿಂದಿನ ಬೆಳವಣಿಗೆಗಳ ದಾಖಲೆಗಳು, ನಿರ್ಣಯಗಳು, ಕಾಯ್ದೆಗಳು, ಸುಗ್ರೀವಾಜ್ಞೆಗಳು, ಮಾತೃಭಾಷೆ/ ರಾಜ್ಯ ಭಾಷೆಯ ಕಲಿಕೆಯನ್ನು ಕಡ್ಡಾಗೊಳಿಸುವುದಕ್ಕಾಗಿ ಮಾಡಬಹುದಾದ ಸಂವಿಧಾನದ ತಿದ್ದುಪಡಿಗೆ ಕರಡು ಮಸೂದೆ ಮುಂತಾದ ಸುಮಾರು 90 ಪುಟಗಳ ಸಮಗ್ರ ನಿವೇದನಾ ಪತ್ರವನ್ನು ಹೊತ್ತು ನಾವು ಹೋಗಿದ್ದೆವು.

ಏಕಾಏಕಿ ಕೂಗಾಡಿದ ಕಾಂಗ್ರೆಸ್‌ ಸಂಸದರು

ಕೇಂದ್ರ ಸಚಿವ ಸದಾನಂದಗೌಡರು ತಮ್ಮ ಮನೆಯಲ್ಲಿ ಊಟದೊಂದಿಗೆ ರಾಜ್ಯದ ಎಲ್ಲಾ ಸಂಸದರ ಜೊತೆ ಈ ಕುರಿತ ಮಾತುಕತೆಗೆ ನಮ್ಮನ್ನು ಆಹ್ವಾನಿಸಿದರು. ಪ್ರಸ್ತಾವನೆಯ ನಂತರ ನಮ್ಮ ನಿಯೋಗದ ಕಾನೂನು ತಜ್ಞರು ಮಾತನಾಡಲು ಆರಂಭಿಸಿದ್ದೇ ತಡ, ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ರಾಜೀವ್‌ ಗೌಡ ಅಪಸ್ವರ ಎತ್ತಿದರು. ಪೂರ್ವನಿಯೋಜಿತ ಎಂದು ಭಾಸವಾಗುವಂತೆ ಬಿ.ಕೆ.ಹರಿಪ್ರಸಾದ್‌ ದನಿಗೂಡಿಸಿದರು.

ಬಿಜೆಪಿಯ ಪ್ರತಾಪ್‌ ಸಿಂಹ ಉತ್ತರಿಸಲಾರಂಭಿಸುತ್ತಿದಂತೆ ಹರಿಪ್ರಸಾದ್‌ ಏರು ಧ್ವನಿಯಲ್ಲಿ ಮಾತನಾಡಿದರು. ಸದಾನಂದಗೌಡ ಸಮಾಧಾನಪಡಿಸಲು ಮುಂದಾದಾಗ, ಜಿ.ಸಿ.ಚಂದ್ರಶೇಖರ್‌ ಬೀದಿ ಜಗಳಕ್ಕೇ ನಿಂತರು. ಈ ಮಧ್ಯೆ ಕನಕಪುರದ ಡಿ.ಕೆ.ಸುರೇಶ್‌ ಕೂಡ ಕೂಗಾಡಿ ಆರ್ಭಟಿಸಿದರು. ನಳಿನ್‌ ಕುಮಾರ್‌ ಸಮಾಧಾನಪಡಿಸಲು ಮುಂದಾದರೂ ಯಾರ ಮಾತನ್ನೂ ಅವರು ಕೇಳಲು ತಯಾರಿರಲಿಲ್ಲ.

ಯಾವ ಕಾರಣಕ್ಕೆ ಅಪಸ್ವರ ಎಂದರೆ...

40-50 ಪೂರಕ ದಾಖಲೆಗಳ ಮಧ್ಯೆ ಕಾಂಗ್ರೆಸ್ಸಿನ ಕಣ್ಣು ಕುಕ್ಕಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ 2018ರ ಅಖಿಲ ಭಾರತೀಯ ಪ್ರತಿನಿಧಿ ಸಭೆಯ, ಭಾರತೀಯ ಭಾಷೆಗಳಿಗೆ ಪ್ರಾಶಸ್ತ್ಯ ನೀಡುವಂತೆ ಒತ್ತಾಯಿಸಲು ಕೈಗೊಂಡ ನಿರ್ಣಯದ ಪತ್ರ. ಅದನ್ನು ತೆಗೆಯಿರಿ, ನಂತರ ನಮ್ಮನ್ನು ಕರೆಯಿರಿ ಎಂದು ಕಾಂಗ್ರೆಸಿಗರು ಪಟ್ಟು ಹಿಡಿದರು.

ಅದನ್ನು ತೆಗೆಯುವ ಪ್ರಶ್ನೆಯಿಲ್ಲ, ನಿಮಗೆ ಬೇಕಿದ್ದನ್ನೂ ಸೇರಿಸುತ್ತೇವೆ, ಕುಳಿತು ಮಾತನಾಡಿ ಎಂದು ಎಷ್ಟುಆಗ್ರಹಿಸಿದರೂ, ಹಿರಿಯರಾದ ಆಸ್ಕರ್‌ ಫರ್ನಾಂಡಿಸ್‌ ಅವರನ್ನೂ ಕರೆದುಕೊಂಡು ಎಲ….ಹನುಮಂತಯ್ಯ, ಡಾ.ನಾಸೀರ್‌ ಹುಸೇನ್‌ ಸಮೇತರಾಗಿ ಕಾಂಗ್ರೆಸ್ಸಿಗರೆಲ್ಲರೂ ಹೊರನಡೆದರು.

ವಾಕೌಟ್‌ ಮಾಡುವುದಕ್ಕೆ ಅದೇನು ಸಂಸತ್ತಾ, ವಿಧಾನಸಭೆಯಾ? ಅದು ಕನ್ನಡದ ಸಭೆ, ಕನ್ನಡಕ್ಕಾಗಿ ನಡೆದ ಸಭೆ. ಅದರಿಂದ ಹೊರನಡೆದರೇನರ್ಥ? ಕನಿಷ್ಠ ಪಕ್ಷ ಊಟ ಮಾಡಿಕೊಂಡು ಹೋಗಿ ಎಂದು ಗೌಡರು ಕೇಳಿಕೊಂಡರು. ಅವರ ಮನವಿಯನ್ನೂ ಲೆಕ್ಕಿಸದೆ ಕಾಂಗ್ರೆಸಿಗರು ಹೊರಟುಬಿಟ್ಟರು. ನಮ್ಮವರೇ ನಮ್ಮ ಭಾಷೆಯ ವಿಷಯದಲ್ಲಿ ರಾಜಕೀಯ ಮಾಡಿದರೆ ಇಲ್ಲಿಂದ ಹೋದವರಿಗೇನನ್ನಿಸಬೇಡ?!

ಈ ಆಕ್ಷೇಪ ನ್ಯಾಯ​ಯು​ತ​ವೇ?

ಕಾಂಗ್ರೆಸಿಗರ ಆಕ್ಷೇಪ ವಿಷಯಾಧಾರಿತವಾಗಿದ್ದರೆ ಅದು ನ್ಯಾಯಯುತ. ಅವರಿಗೆ ಎಬಿ​ಪಿ​ಎ​ಸ್‌ನ ನಿರ್ಣಯದ ಬಗ್ಗೆ ತಕರಾರು ಇರಲು ಸಾಧ್ಯವೇ ಇಲ್ಲ. ಏಕೆಂದರೆ, ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಪೂರೈಸಬೇಕು. ಇಲ್ಲವಾದಲ್ಲಿ ರಾಜ್ಯಭಾಷೆಯನ್ನು ಕನಿಷ್ಠ ಪಕ್ಷ ಒಂದು ವಿಷಯವಾಗಿಯಾದರೂ ಕಡ್ಡಾಯವಾಗಿ ಮಕ್ಕಳು ಕಲಿಯಲೇಬೇಕೆಂಬ ನಮ್ಮ ಹಲವು ದಶಕಗಳ ಹೋರಾಟಕ್ಕೆ ಆ ನಿರ್ಣಯ ಪೂರಕವಾಗಿದೆ.

ಭಾರತೀಯ ಭಾಷೆಗಳಿಗೆ ಪ್ರಾಶಸ್ತ್ಯ ನೀಡುವುದರ ಜೊತೆಗೆ, ಮಾತೃಭಾಷೆ ಯಾವುದೇ ಇದ್ದರೂ, ​ವಾಸಿಸುವ ನೆಲದ ಭಾಷೆಯನ್ನು ಮಕ್ಕಳು ಕಲಿಯಬೇಕೆಂಬ ಮಹತ್ವದ ನಿರ್ಣಯವದು.

ನೀಟ್‌ನಂತೆಯೇ ಉಳಿದೆಲ್ಲಾ ಸ್ಪರ್ಧಾ​ತ್ಮಕ ಪರೀ​ಕ್ಷೆ​ಗ​ಳಲ್ಲಿ ಉತ್ತರಿಸಲು ಮತ್ತು ಆ ಪರೀಕ್ಷೆಗಳ ಪೂರ್ವಸಿದ್ಧತೆಗಾಗಿ ಅಧ್ಯಯನ ವಸ್ತುಗಳು, ನ್ಯಾಯಾಲಯಗಳಲ್ಲಿ ಸಂವಹನ ನಡೆಸಲು, ಪ್ರಾದೇಶಿಕ ಭಾಷೆಗೆ ಪ್ರಾಶಸ್ತ್ಯ ಮತ್ತು ಅವಕಾಶವಿರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜ್ಯ ಭಾಷೆಗಳ ಜತೆಜತೆಗೆ ಉಳಿದೆಲ್ಲಾ ಉಪಭಾಷೆಗಳು, ಪ್ರಾಂತೀಯ ಭಾಷೆಗಳು, ಲಿಪಿ ಮತ್ತು ಪೂರಕ ದೇಸಿ ಸಂಸ್ಕೃತಿ, ಸಾಹಿತ್ಯವನ್ನು ಉಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. ಇವು ನಿರ್ಣಯದ ಪ್ರಮುಖ ಅಂಶಗಳು. ಇದರಲ್ಲಿ ಯಾವುದು ಆಕ್ಷೇಪಾರ್ಹ?

ಗಾಂಧೀಜಿ ಮಾತನ್ನೇ ಮರೆ​ತಿ​ದ್ದಾ​ರೆ

ಅವರಿಗೆ ಅಸಹನೆ ಆರ್‌​ಎ​ಸ್‌​ಎಸ್‌ ಬಗ್ಗೆಯೇ ಹೊರತು ಸಂಘ ಕೈಗೊಂಡ ನಿರ್ಣಯದ ಬಗ್ಗೆ ಅಲ್ಲ. ಒಳ್ಳೆಯ ವಿಷಯವನ್ನು ಯಾರು ಹೇಳಿದರೂ ಕೇಳಿ ನಡೆಯಬೇಕೆಂದ ಗಾಂಧೀಜಿಯವರ ಮಾತನ್ನೇ ಮರೆತಿದ್ದಾರೆ ನೆಹರು-ಗಾಂಧಿ ಪರಿವಾರದ ಆರಾಧಕರು. ಉತ್ಥಾನ, ಪುಂಗವ, ವಿಕ್ರಮ, ಅಸೀಮ ಮತ್ತು ಹೊಸದಿಗಂತ ಇಂತಹ ಐದು ಕನ್ನಡ ಪತ್ರಿಕೆಗಳನ್ನು ಸಂಘ ಪರಿವಾರದ ಸಂಸ್ಥೆಗಳು ಪ್ರಕಟಿಸುತ್ತವೆ.

ರಾಷ್ಟ್ರೋತ್ಥಾನ ಪರಿಷತ್ತು ಸಾವಿರಾರು ಕನ್ನಡದ ಸಾಹಿತ್ಯವನ್ನು, ಪುಸ್ತಕಗಳನ್ನು ಮುದ್ರಿಸಿ ದಶಕಗಳಿಂದ ಪ್ರಕಟಿಸುತ್ತಾ ಬಂದಿದೆ. ಕರ್ನಾಟಕದ ಆರ್‌​ಎ​ಸ್‌​ಎಸ್‌ ತನ್ನ ಸಂಪೂರ್ಣ ಸಂವಹನವನ್ನು ಕನ್ನಡದಲ್ಲೇ ನಡೆಸುತ್ತದೆಯಾದ್ದರಿಂದ, ಅದು ಈ ನೆಲದ ಆರ್‌​ಎ​ಸ್‌​ಎ​ಸ್‌. ಕಾಂಗ್ರೆಸ್‌ ಅಥವಾ ಅದರ ಅಂಗ ಸಂಸ್ಥೆಗಳು ಕನ್ನಡದಲ್ಲಿ ಎಷ್ಟುಪತ್ರಿಕೆಗಳು, ಪುಸ್ತಕಗಳ ಪ್ರಕಟಣೆ, ಕನ್ನಡ ಸಂಸ್ಕೃತಿಯ ಅಧ್ಯಯನ ಕೇಂದ್ರಗಳು, ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಿವೆ?

ಕನ್ನಡದ ಆಡಳಿತದಲ್ಲಿ ಪರ್ಶಿಯನ್‌ ಭಾಷೆಯನ್ನು ತುರುಕಿ, ಕನ್ನಡದ ಕೊಡವರ, ಕ್ರೈಸ್ತರ, ಅಯ್ಯಂಗಾರರ ಮಾರಣಹೋಮ ನಡೆಸಿದ ಮತಾಂಧ ಟಿಪ್ಪುವಿನ ಜಯಂತಿ ನಡೆಸುವ ಕಾಂಗ್ರೆಸ್ಸಿಗರಿಗೆ ಆರ್‌​ಎ​ಸ್‌​ಎ​ಸ್‌​ನ ಕನ್ನಡಾಭಿಮಾನದ ಬಗ್ಗೆ ಮಾತನಾಡುವ ನೈತಿಕತೆ ಇದೆಯೆ? ಎ​ಲ್ಲಾ ರಾಜ್ಯದ ಮುಸಲ್ಮಾನರೂ ತಮ್ಮ ಮಾತೃ ಭಾಷೆಯಲ್ಲಿ ಮಾತನಾಡುತ್ತಾರೆ. ಆದರೆ ಕರ್ನಾಟಕದವರು ಉರ್ದುವಿನಲ್ಲಿ ಮಾತನಾಡುವುದಕ್ಕೆ ಟಿಪ್ಪು ಕಾರಣ ಎನ್ನುತ್ತಾರೆ ಎಸ್‌.ಎಲ್‌.ಭೈರಪ್ಪ.

22 ರಾಜ್ಯ ಭಾಷೆಗಳು ಮತ್ತು ಹಲವಾರು ಪ್ರಾಂತೀಯ ನುಡಿಗಳನ್ನಾಡುವ ದೇಶದ ಜನರ ಮೇಲೆ ತ್ರಿಭಾಷಾ ಸೂತ್ರ ಜಾರಿಗೊಳಿಸಿ, ಹಿಂದಿ ಹೇರಿಕೆಗೆ ಪಿತಾಮಹರೆನಿಸಿಕೊಂಡ ಕಾಂಗ್ರೆಸ್ಸಿಗರು ಭಾಷಾಭಿಮಾನದ ಕುರಿತು ಬೊಬ್ಬೆ ಹೊಡೆದರೆ ನಾವು ಕೇಳಿಸಿಕೊಳ್ಳಬೇಕೆ?

ಭಾಷೆಗೆ ಮಾಡಿದ ಅಪ​ಮಾ​ನ

ಕಾಂಗ್ರೆಸ್ಸಿಗರು ಸಭೆಯಿಂದ ಹೊರನಡೆದು ಕನ್ನಡಿಗರಿಗೆ ಮಾಡಿದ ಅಪಮಾನ ಒಂದೆಡೆಯಾದರೆ, ಕರ್ನಾಟಕದ ಮಾಜಿ ಪ್ರಧಾನಿಗಳ ಮೊಮ್ಮಗ, ಕರ್ನಾಟಕದ ಏಕೈಕ ಪ್ರಾದೇಶಿಕ ಪಕ್ಷದ ಏಕೈಕ ಸಂಸತ್‌ ಸದಸ್ಯ ಕನ್ನಡದ ಸಭೆಗೆ ಗೈರಾಗಿದ್ದನ್ನೂ ಮರೆಯಬಾರದು. ವಿಪರ್ಯಾಸವೆಂದರೆ ಕಾಂಗ್ರೆಸ್ಸಿನ ಆ ಗುಂಪಿನಲ್ಲಿ ಇದ್ದುದು ಒಬ್ಬರೇ ಲೋಕಸಭಾ ಸದಸ್ಯ. ಉಳಿದವರೆಲ್ಲಾ ಗೌರವಾನ್ವಿತ ಮೇಲ್ಮನೆಯ ಸದಸ್ಯರು.

ಹಿರಿಯರ ಮನೆಯ ಸದಸ್ಯರಿಂದ ಖಂಡಿತ ಈ ಕೀಳುಮಟ್ಟದ ರಾಜಕೀಯ ಮೇಲುಗೈತನದ ನಿರೀಕ್ಷೆ ಮಾಡಿ​ರ​ಲಿ​ಲ್ಲ. ಅವರು ಅಪಮಾನ ಮಾಡಿದ್ದು ನಮ್ಮ ನಿಯೋಗಕ್ಕಲ್ಲ, ನಮ್ಮ ಭಾಷೆಗೆ ಎಂಬ ನೋವಿದೆ. ನಾವು ಹೋಗಿದ್ದು ಕನ್ನಡಕ್ಕಾಗಿ. ಆ ಕರ್ತವ್ಯವನ್ನು ಮತ್ತೊಬ್ಬ ಕನ್ನಡಿಗ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಷಿಯವರ ನೆರವಿನೊಂದಿಗೆ ಸುಸೂತ್ರವಾಗಿ ಪೂರೈಸಿ ಮರಳಿದ್ದೇವೆ.

ಕೇಂದ್ರ​ದಿಂದ ಬೇಡಿ​ಕೆಗೆ ಸ್ಪಂದ​ನೆ

ನಿರ್ಮಲಾ ಸೀತಾರಾಮನ್‌, ರಮೇಶ್‌ ಪೋಖ್ರಿಯಾಲ್, ಪ್ರಕಾ​ಶ್‌ ಜಾವ್ಡೇಕರ್‌, ಡಾ.ಜಿತೇಂದ್ರ ಸಿಂಘ್‌, ಪ್ರಹ್ಲಾದ್‌ ಸಿಂಘ್‌ ಪಟೇಲ…, ಸುರೇಶ್‌ ಅಂಗಡಿ ಸಮೇತರಾಗಿ ಎ​ಲ್ಲಾ ಸಚಿವರೂ ಸಮಯಕೊಟ್ಟು ನಮ್ಮ ಅಳಲು, ಬೇಡಿಕೆಗಳನ್ನು ಆಲಿಸಿದರು. ಸಕಾರಾತ್ಮಕ ಪ್ರತಿಕ್ರಿಯೆ ನೀಡಿ ನಮ್ಮ ಬೇಡಿಕೆಗಳನ್ನು ತಾವು ರೂಪಿಸುವ ಎನ್‌​ಆ​ರ್‌​ಎ (National Recruitment Agency)ಯ ಹಾಗೂ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ನಿಯಮಗಳಲ್ಲಿ ಅಳವಡಿಸುವುದಾಗಿ ಭರವಸೆ ನೀಡಿದರು.

ಗ್ರಾಮೀಣ ಬ್ಯಾಂಕುಗಳಂತೆಯೆ, ರಾಷ್ಟ್ರೀಕೃತ ಬ್ಯಾಂಕುಗಳ ನೌಕರರಿಗೆ ‘ಸಾಧ್ಯವಾದಷ್ಟು’ ಎನ್ನುವ ನಿಬಂಧನೆಯ ಬದಲು ಕಡ್ಡಾಯವಾಗಿ ರಾಜ್ಯ ಭಾಷೆಯಲ್ಲಿ ಪರಿಣತಿ ಇರಬೇಕು ಎನ್ನುವ ಆಗ್ರಹಕ್ಕೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಆರ್ಥಿಕ ಸಚಿವೆ, ಹೆಚ್ಚೆಚ್ಚು ಕನ್ನಡದ ಮಕ್ಕಳು ಬ್ಯಾಂಕಿಂಗ್‌ ಪರೀಕ್ಷೆ ಬರೆಯಲಿ, ಆಗ ನಮಗೂ ನಿಮ್ಮ ಈ ಮನವಿಯನ್ನು ನೆರವೇರಿಸಲು ಅನುಕೂಲವಾಗುತ್ತದೆ ಎಂಬ ಸೂಕ್ಷ್ಮ ಸಲಹೆಯನ್ನೂ ನೀಡಿದರು. ಸದ್ಯದಲ್ಲೇ ನಮ್ಮ ರಾಜ್ಯದ ಸಂಸ್ಕೃತಿ ಮತ್ತು ಪ್ರಾಥಮಿಕ ಶಿಕ್ಷಣ ಸಚಿವರುಗಳಿಗೆ ನಿಯೋಗದ ವರದಿಯನ್ನೊಪ್ಪಿಸಿ ಆರು ತಿಂಗಳ ನಂತರ ಫಾಲೋಅಪ್‌ ಕೆಲಸಗಳನ್ನು ಮಾಡುವ ನಿರೀಕ್ಷೆಯಲ್ಲಿದ್ದೇವೆ.

-  ಮಾಳವಿಕಾ ಅವಿನಾಶ್‌ , ಬಿಜೆಪಿ ನಾಯಕಿ

Follow Us:
Download App:
  • android
  • ios