ಬೆಂಗಳೂರಿನ ರಾಜಾಜಿನಗರದಲ್ಲಿ, ಮೊಬೈಲ್ ಖರೀದಿಸುವ ನೆಪದಲ್ಲಿ ಬಂದ ವಂಚಕನೊಬ್ಬ, 76 ಸಾವಿರ ರೂಪಾಯಿ ಮೌಲ್ಯದ ಮೊಬೈಲ್‌ಗಳಿಗೆ ನಕಲಿ ಪೇಮೆಂಟ್ ಸ್ಕ್ರೀನ್‌ಶಾಟ್ ತೋರಿಸಿ ಅಂಗಡಿ ಮಾಲೀಕರಿಗೆ ವಂಚಿಸಿದ್ದಾನೆ. ಹಣ ಜಮೆಯಾಗದಿರುವುದನ್ನು ಅರಿತ ಮಾಲೀಕರು ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರು (ಫೆ.25): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆನ್‌ಲೈನ್ ಪೇಮೆಂಟ್ ಹೆಸರಿನಲ್ಲಿ ವ್ಯಾಪಾರಿಗಳಿಗೆ ಪಂಗನಾಮ ಹಾಕುವ ಜಾಲವೊಂದು ಸಕ್ರಿಯವಾಗಿದೆ. ರಾಜಾಜಿನಗರದ 6ನೇ ಬ್ಲಾಕ್‌ನಲ್ಲಿರುವ ಸಿದ್ಧರಾಜು ಅವರಿಗೆ ಸೇರಿದ 'ಕಲರ್ಸ್ ಮೊಬೈಲ್' ಶಾಪ್‌ನಲ್ಲಿ ಇಂತಹದ್ದೇ ಒಂದು ಶಾಕಿಂಗ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಮೊಬೈಲ್ ಖರೀದಿಸುವ ಸೋಗಿನಲ್ಲಿ ಬಂದ ವಂಚಕನೊಬ್ಬ ಮೊಬೈಲ್ ಶಾಪ್ ಮಾಲೀಕನಿಗೆ ಸಾವಿರಾರು ರೂಪಾಯಿ ವಂಚಿಸಿ ಪರಾರಿಯಾಗಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಕಲಿ ಪೇಮೆಂಟ್ ಸ್ಕ್ರೀನ್ ಶಾಟ್ ತೋರಿಸಿ 76 ಸಾವಿರ ವಂಚನೆ!

ಫೆಬ್ರವರಿ 12 ರಂದು ಅಭಿಷೇಕ್ ಎಂಬ ಯುವಕ ರಾಜಾಜಿನಗರದ ಕಲರ್ಸ್ ಮೊಬೈಲ್ ಶಾಪ್‌ಗೆ ಮೊಬೈಲ್ ಖರೀದಿಸುವ ಸೋಗಿನಲ್ಲಿ ಬಂದಿದ್ದಾನೆ. ಎರಡು ದುಬಾರಿ ಬೆಲೆಯ ಮೊಬೈಲ್‌ಗಳನ್ನು ಸೆಲೆಕ್ಟ್ ಮಾಡಿರುವ ವಂಚಕ, ಹಣವನ್ನು ಆನ್‌ಲೈನ್ ಮೂಲಕ ಪಾವತಿಸುವುದಾಗಿ ಹೇಳಿದ್ದಾನೆ. ಸುಮಾರು 76 ಸಾವಿರ ರೂಪಾಯಿ ಬಿಲ್ ಆಗಿದ್ದು, ಅದನ್ನು ಪಾವತಿಸಿದಂತೆ ನಕಲಿ ಸ್ಕ್ರೀನ್ ಶಾಟ್ ಸಿದ್ಧಪಡಿಸಿ ಮಾಲೀಕರಿಗೆ ತೋರಿಸಿದ್ದಾನೆ. ಆದರೆ ವಂಚಕನ ಬಗ್ಗೆ ತಿಳಿಯದೇ ಹಣ ಬಂದಿದೆ ಎಂದು ನಂಬಿದ ಮಾಲೀಕ ಎರಡು ಮೊಬೈಲ್‌ಗಳನ್ನು ವಂಚಕನಿಗೆ ನೀಡಿದ್ದಾರೆ. ಆದರೆ ಆಮೇಲೆ ಅಕೌಂಟ್ ಪರಿಶೀಲಿಸಿದಾಗ ಮಾಲೀಕನಿಗೆ ವಂಚನೆಗೊಳಗಾಗಿರುವುದು ಗೊತ್ತಾಗಿದೆ.

ಖತರ್ನಾಕ್ ಖದೀಮನ ಬೆನ್ನತ್ತಿದ ಮಾಗಡಿ ರೋಡ್ ಪೊಲೀಸರು

ವಂಚಕ ಎರಡು ಹೊಸ ಮೊಬೈಲ್‌ಗಳೊಂದಿಗೆ ಅಂಗಡಿಯಿಂದ ಹೋದ ಕೆಲ ಹೊತ್ತಿನ ನಂತರ ಸಿದ್ಧರಾಜು ಅವರು ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಹಣ ಜಮೆಯಾಗಿಲ್ಲದಿರುವುದು ಪತ್ತೆಯಾಗಿದೆ. ಆತ ತೋರಿಸಿದ ಪೇಮೆಂಟ್ ಸ್ಕ್ರೀನ್ ಶಾಟ್ ಸಂಪೂರ್ಣವಾಗಿ ನಕಲಿ ಎಂಬುದು ತಿಳಿದು ಮಾಲೀಕರು ಬೆಚ್ಚಿಬಿದ್ದಿದ್ದಾರೆ. ಈ ವಂಚನೆಯ ಕುರಿತು ತಕ್ಷಣವೇ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿ ಅಭಿಷೇಕ್ ಪತ್ತೆಗೆ ಜಾಲ ಬೀಸಿದ್ದಾರೆ.

YouTube video player