ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗೊಂಡ ಸಮುದಾಯದ ಆರಾಧ್ಯ ದೈವ ಶ್ರೀ ಜಟಗಾ ಮಹಾಸತಿ ದೇವಿಯ ಜಾತ್ರೆಯು ಶ್ರದ್ಧಾ ಭಕ್ತಿಯಿಂದ ನೆರವೇರಿತು. ಈ ಜಾತ್ರೆಯಲ್ಲಿ ಕಬ್ಬಿನ ಕುಡಿ ಖರೀದಿಸುವುದು ಒಂದು ಪ್ರಮುಖ ಪದ್ಧತಿಯಾಗಿದ್ದು, ಇದು ಸಂಪತ್ತು ವೃದ್ಧಿ ಮತ್ತು ನವದಂಪತಿಗಳ ಸಂತಾನ ಭಾಗ್ಯದ ನಂಬಿಕೆ

ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸಮಸ್ತ ಗೊಂಡ ಸಮುದಾಯದವರ ಆರಾಧ್ಯ ದೈವ, ಶ್ರೀ ಜಟಗಾ ಮಹಾಸತಿ ದೇವಿಯ ಜಾತೆಯು ಶ್ರದ್ಧಾ ಭಕ್ತಿ ಸಂಭ್ರಮದೊಂದಿಗೆ ನೆರವೇರಿತು. ಮಕರ ಸಂಕ್ರಾಂತಿಯ ನಂತರ ಭಟ್ಕಳದಲ್ಲಿ ನಡೆಯುವ ಎರಡನೇ ದೊಡ್ಡ ಜಾತ್ರೆ ಇದಾಗಿದೆ.

ಗೊಂಡ ಸಮಾಜದ ಜಾನಪದ ಶೈಲಿಯಲ್ಲಿ ಈ ಜಾತ್ರೆ ನಡೆಯುತ್ತಿದ್ದು, ದೇವಸ್ಥಾನವೂ ಪ್ರಮುಖವಾಗಿ ಗೊಂಡ ಸಮಾಜದವರೇ ನಂಬಿಕೊಂಡು ಬಂದ ಸ್ಥಳವಾಗಿದೆ. ಈ ಜಾತ್ರೆಯಲ್ಲಿ ಕಬ್ಬಿನ ಕುಡಿಯನ್ನು ಖರೀದಿಸುವುದು ಒಂದು ಪದ್ಧತಿಯಾಗಿದ್ದು, ಇಲ್ಲಿ ಕಬ್ಬಿನ ಕುಡಿಯ ಖರೀದಿಗೂ ಒಂದು ವಿಶೇಷ ಮಹತ್ವವನ್ನು ಕಲ್ಪಿಸಲಾಗಿದೆ.

ಸುಗ್ಗಿಯ ಸಂಭ್ರಮದಲ್ಲಿರುವ ರೈತರು ತಮ್ಮ ಬಿಡುವಿನ ವೇಳೆ ಜಾತ್ರೆಯಲ್ಲಿ ಬಂದು ಮನೆ ಮನೆಗೆ ಕಬ್ಬು ಕೊಂಡೊಯ್ಯಲಿ, ಆ ಕುಡಿಯು ಸಹಸ್ರ ಕುಡಿಯಾಗಿ ಮನೆ ಯಜಮಾನನ ಸಂಪತ್ತು ವೃದ್ಧಿಯಾಗಲಿ ಎನ್ನುವ ಹಾರೈಕೆಯೊಂದಿಗೆ ಹಿಂದಿನಿಂದ ಬಂದ ಪದ್ಧತಿ. ಇನ್ನೊಂದೆಟೆ ಜಾತ್ರೆಯ ನಂತರ ಮುಂದಿನ ಜಾತ್ರೆಯ ತನಕ ಮದುವೆಯಾಗಿರುವ ಗೊಂಡ ಸಮಾಜದ ನೂತನ ವಧೂ-ವರರು ಜಾತ್ರೆಗೆ ಬಂದು ಇಲ್ಲಿನ ಕೋಕ್ತಿ ಕೆರೆಯಲ್ಲಿ ಸ್ನಾನ ಮಾಡಿ ದೇವರ ದರ್ಶನವನ್ನು ಪಡೆಯಬೇಕು. ಅವರು ವಾಪಸು ಮನೆಗೆ ಹೋಗುವಾಗ ಕಬ್ಬಿನ ಕುಡಿಯನ್ನು ತೆಗೆದುಕೊಂಡು ಹೋದರೆ ಅವರ ಕುಟುಂಬದ ಕುಡಿ ಮುಂದುವರಿಯುವ ನಂಬಿಕೆ ಕೂಡಾ ಇಲ್ಲಿ ಅಡಗಿದೆ.

ಆದರೆ, ಕೆಲವು ವರ್ಷಗಳಿಂದ ಕೋಕ್ತಿ ಕೆರೆಯಲ್ಲಿ ಹೂಳು ತುಂಬಿ ನೀರು ಕಲುಷಿತಗೊಂಡಿದ್ದರಿಂದ ಸ್ನಾನ ಮಾಡಲು ಯೋಗ್ಯವಾಗಿಲ್ಲವಾದ್ದರಿಂದ ಸ್ನಾನ ಮಾಡುವ ಪದ್ಧತಿಯನ್ನು ನಿಲ್ಲಿಸಲಾಗಿದೆ. ಹಲವರು ನಂಬಿಕೆ ಪ್ರತೀಕವಾಗಿ ಕೆರೆಯ ನೀರನ್ನು ಪ್ರೋಕ್ಷಣ್ಯ ಮಾಡಿಕೊಂಡು ದೇವರಲ್ಲಿ ಪ್ರಾರ್ಥಿಸುತ್ತಾರೆ. 

ಇನ್ನು ಕ್ಷೇತ್ರದಲ್ಲಿ ಮಹಾಸತಿ ದೇವರ ಪೂಜೆ, ಶೇಡಿ ಮರದ ಪೂಜೆ ವಿಶೇಷ ಹರಕೆಯಾಗಿದೆ. ಗುಡಿಜಟಗಾ ದೇವಸ್ಥಾನದಲ್ಲಿ ರುಂಡ ಪೂಜೆ ಸಲ್ಲಿಸಿ ದೇವಸ್ಥಾನದಿಂದ ದೈವಾರಾಧನೆ ಮತ್ತು ಗೊಂಡರ ಸಾಂಪ್ರದಾಯಿಕ ಡಕ್ಕೆ ಕುಣಿತದೊಂದಿಗೆ ರುಂಡಗಳನ್ನು ಮೆರವಣಿಗೆಯ ಮೂಲಕ ಶ್ರೀ ಮಹಾಸತಿ ಪಾದದಡಿ ರುಂಡಗಳನ್ನಿಟ್ಟು ಪೂಜೆ ಸಲ್ಲಿಸಲಾಯಿತು.

ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಹಲವು ಪ್ರಮುಖರು ಮಹಾಸತಿ ದೇವಿಯ ದರ್ಶನ ಪಡೆದರು. ಜಾತ್ರೆಯ ಹಿನ್ನೆಲೆಯಲ್ಲಿ ಡಿವೈಎಸ್ಪಿ ಮಹೇಶ್ ನೇತೃತ್ವದಲ್ಲಿ

ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.