ಹೇಳದೆ ಬೈಕ್ ತೆಗೆದುಕೊಂಡ ಹೋದ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ, ಬೆಂಗಳೂರಲ್ಲಿ ಘಟನೆ ನಡೆದಿದೆ. ಅಪ್ಪ ಹಾಗೂ ಮಗ ಇಬ್ಬರು ತೀವ್ರ ಸುಟ್ಟ ಗಾಯಗಳಿಂದ ಆಸ್ಪತ್ರೆ ದಾಖಲಾಗಿದ್ದಾರೆ. 

ಬೆಂಗಳೂರು (ಮೇ.03) ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ ನಡೆದಿದೆ. ತನಗೆ ಹೇಳದೆ ಬೈಕ್ ತೆಗೆದುಕೊಂಡು ಹೋಗಿದ್ದಾನೆ ಎಂದು ಆಕ್ರೋಶದಲ್ಲಿ ತಂದೆ ಸ್ವಂತ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಚನೆ ಕುಮಾರಸ್ವಾಮಿ ಲೇಔಟ್ ಪ್ರಗತಿಪುರದಲ್ಲಿ ನಡೆದಿದೆ. 19 ವರ್ಷದ ಮಗ ಮಲ್ಲಿಕಾರ್ಜುನ್ ತಂದೆಗೆ ಹೇಳದೆ ಬೈಕ್ ತೆಗೆದುಕೊಂಡು ಹೋಗಿದ್ದಾನೆ. ಇದರಿಂದ ಸಿಟ್ಟಾದ ಅಪ್ಪ ದೊಡ್ಡಮನಿ ಈ ಕೃತ್ಯ ಎಸಗಿದ್ದಾನೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Add Asianetnews Kannada as a Preferred SourcegooglePreferred

ಏನಿದು ಘಟನೆ?

45 ವರ್ಷದ ಆನಂದ್ ದೊಡ್ಡಮನಿ ಗಾರೆ ಕೆಲಸ ಮಾಡುತ್ತಿದ್ದ. ಇತ್ತ 19 ವರ್ಷದ ಮಗ ಮಲ್ಲಿಕಾರ್ಜುನ ಟೈಲ್ಸ್ ಕೆಲಸ ಮಾಡುತ್ತಿದ್ದ. ಈ ಮೂಲಕ ಇಬ್ಬರು ದುಡಿದು ಜೀವನ ನಿರ್ವಹಣೆ ಮಾಡುತ್ತಿದ್ದರು. ಮೇ 1 ರಂದು ಕಾರ್ಮಿಕರ ದಿನವಾಗಿದ್ದ ಕಾರಣ ಕೆಲಸಕ್ಕೆ ರಜೆ ಇತ್ತು. ಅಪ್ಪ ಹಾಗೂ ಮಗ ಇಬ್ಬರು ಮನೆಯಲ್ಲಿದ್ದರು. ರಜೆ ಇದ್ದ ಕಾರಣ ತಂದೆಯ ಬೈಕ್ ತೆಗೆದುಕೊಂಡು ಮಲ್ಲಿಕಾರ್ಜುನ್ ತೆರಳಿದ್ದಾನೆ. ಆದರೆ ಬೈಕ್ ತೆಗೆದುಕೊಳ್ಳುವಾಗ ಒಂದು ಮಾತು ಅಪ್ಪನಿಗೆ ಹೇಳಿಲ್ಲ ಅನ್ನೋದು ನಿಜ. ಆದರೆ ಅಪ್ಪ ನೀಡಿದ ಶಿಕ್ಷೆ ಮಾತ್ರ ಘನಘೋರ.

ಮೇ.1ರ ಸಂಜೆ ಬೈಕ್ ತೆಗೆದುಕೊಂಡು ಗೆಳೆಯರನ್ನು ಭೇಟಿ ಮಾಡಲು ಮಲ್ಲಿಕಾರ್ಜುನ್ ತೆರಳಿದ್ದಾನೆ. ರಾತ್ರಿಯಾಗುತ್ತಿದ್ದಂತೆ ಮಲ್ಲಿಕಾರ್ಜುನ್ ಮರಳಿ ಬಂದಿದ್ದಾನೆ. ತನ್ನನ್ನು ಕೇಳದೆ ಬೈಕ್ ತೆಗೆದುಕೊಂಡು ಹೋದ ಕಾರಣಕ್ಕೆ ಮಗನ ಮೇಲೆ ಆನಂದ್ ದೊಡ್ಡಮನಿ ಗರಂ ಆಗಿದ್ದ. ಹೇಳದೆ ಯಾಕೆ ಬೈಕ್ ತೆಗೆದುಕೊಂಡು ಹೋಗಿದ್ದೆ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ಅಪ್ಪ ಹಾಗೂ ಮಗನ ನಡುವೆ ಜಗಳ ಶುರುವಾಗಿದೆ. ಇದೇ ಜಗಳದಲ್ಲಿ ಬಾಟಲಿಯಲ್ಲಿದ್ದ ಪೆಟ್ರೋಲ್‌ನ್ನು ಮಗನ ಮೇಲೆ ಸುರಿದಿದ್ದಾರೆ. ಇಷ್ಟೇ ಅಲ್ಲ ಬೆಂಕಿ ಹಚ್ಚಿದ್ದಾರೆ.

ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಬೆನ್ನಲ್ಲೇ ಹೊತ್ತಿಕೊಂಡಿದೆ. ಇತ್ತ ಸೌದೆಗೂ ಬೆಂಕಿ ತಗುಲಿದೆ. ಮಗ ಮಲ್ಲಿಕಾರ್ಜುನ ಚೀರಾಡುತ್ತಿದ್ದರೆ, ಇತ್ತ ಆನಂದ್ ದೊಡ್ಡಮನಿಗೂ ಬೆಂಕಿ ತಗುಲಿದೆ. ಇಬ್ಬರ ಚೀರಾಟ ಶುರುವಾಗಿದೆ. ಸ್ಥಳೀಯರ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬಳಿಕ ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶೇಕಡಾ 40 ರಷ್ಟು ಸುಟ್ಟ ಗಾಯಗಳಿಂದ ಮಲ್ಲಿಕಾರ್ಜುನ್ ಬಳಲುತ್ತಿದ್ದರೆ, ತಂದೆ ಆನಂದ್ ದೊಡ್ಡಮನಿ ಶೇಕಡಾ 18ರಷ್ಟು ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಬರ್ನಿಂಗ್ ವಾರ್ಡ್ ನಲ್ಲಿ ಅಪ್ಪ ಮಗನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.