ಬೆಂಗಳೂರಿನ ಬನ್ನೇರುಘಟ್ಟ ಸಮೀಪ ಅಪರಿಚಿತ ವೃದ್ಧೆಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಸುಮಾರು 50-60 ವರ್ಷದ ವೃದ್ಧೆಯ ಅರೆಬೆಂದ ಶವ ಪತ್ತೆಯಾಗಿದ್ದು, ಆಸ್ತಿ ವಿವಾದದ ಶಂಕೆ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದಲ್ಲಿ ವೃದ್ಧೆಯೊಬ್ಬರ ಭೀಕರ ಹತ್ಯೆ ನಡೆದಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಕಗ್ಗಲೀಪುರ ರಸ್ತೆಯ ಬಿಲ್ವಾರ ಪ್ರದೇಶದಲ್ಲಿ ಅಪರಿಚಿತ ವೃದ್ದೆಯೊಬ್ಬಳನ್ನು ಕ್ರೂರವಾಗಿ ಹತ್ಯೆಗೈದ ದುಷ್ಕರ್ಮಿಗಳು ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

60 ವರ್ಷದೊಳಗಿನ ವೃದ್ದೆ

ಸುಮಾರು 50 ರಿಂದ 60 ವರ್ಷದೊಳಗಿನ ವಯಸ್ಸಿನ ವೃದ್ದೆಯ ಮೃತದೇಹ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನೆಯ ಕ್ರೂರತೆಯನ್ನು ತೋರಿಸುತ್ತದೆ. ಸ್ಥಳೀಯರು ಬೆಳಿಗ್ಗೆ ಸುಮಾರು 9.30ರ ವೇಳೆಗೆ ಈ ದೃಶ್ಯ ಗಮನಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ತಕ್ಷಣವೇ ಬನ್ನೇರುಘಟ್ಟ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ವೃದ್ದೆಯನ್ನು ಬೇರೆಡೆ ಕೊಲೆ ಮಾಡಿ ನಂತರ ಈ ನಿರ್ಜನ ಪ್ರದೇಶಕ್ಕೆ ತಂದು ಬೆಂಕಿ ಹಚ್ಚಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ.

ಕೊಲೆಗೆ ಆಸ್ತಿ ವಿವಾದ ಕಾರಣವೇ?

ಈ ಕೊಲೆ ಪ್ರಕರಣಕ್ಕೆ ಆಸ್ತಿ ವಿವಾದವೇ ಕಾರಣವಾಗಿರಬಹುದು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮೃತ ವೃದ್ಧೆಯ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.