ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಲಾಗಿದ್ದ 'ಕಾಕ್ರೋಚ್ ಜನತಾ ಪಾರ್ಟಿ'ಯ ಮಾನವ ಸರಪಳಿ ಪ್ರತಿಭಟನೆ ಟೌನ್ ಹಾಲ್ ಬಳಿ ವಿಫಲವಾಗಿದೆ. ಪೊಲೀಸರ ಬಿಗಿ ಭದ್ರತೆ ಮತ್ತು ಎಚ್ಚರಿಕೆಯಿಂದಾಗಿ ಯಾರೂ ಭಾಗವಹಿಸಲಿಲ್ಲ, ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅಬ್ಬರಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ ನಗರದ ಟೌನ್ ಹಾಲ್ ಬಳಿ ಭಾನುವಾರ ಮಾನವ ಸರಪಳಿಗೆ ಕರೆ ನೀಡಿತ್ತಾದರೂ ಯಾರೂ ಕೂಡಾ ಆಗಮಿಸಿರಲಿಲ್ಲ. ಮಾನವ ಸರಪಳಿ ಹಾಗೂ ಸಭೆ ನಡೆಸುವುದಾಗಿ ಜಾಲತಾಣದಲ್ಲಿ ನೀಡಿದ್ದ ಕರೆಗೆ ಯಾರೂ ಸ್ಪಂದಿಸಲಿಲ್ಲ.

Add Asianetnews Kannada as a Preferred SourcegooglePreferred

ಬಿಗಿ ಪೊಲೀಸ್‌ ಭದ್ರತೆ

ಕಾಕ್ರೋಚ್ ಜನತಾ ಪಾರ್ಟಿ ಬೆಂಬಲಿಸಿ ‘ಶಾಂತಿಯುತ ಮಾನವ ಸರಪಳಿ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರಿಗೆ ಆಹ್ವಾನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತ ಹರೀಶ್ ಬೈರಪ್ಪ ಎಂಬುವರು ಕರೆ ನೀಡಿದ್ದರು. ಆದರೆ ಪೊಲೀಸರು ಈ ಕಾರ್ಯಕ್ರಮಕ್ಕೆ ಯಾರಿಗೂ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೂ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್‌ ಭದ್ರತೆ ಏರ್ಪಡಿಸಿದ್ದರು.

ಟೌನ್‌ಹಾಲ್ ಮುಂದಿನ ರಸ್ತೆಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ 100ಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. 2 ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿತ್ತು. ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸಭೆಯ ಬಗ್ಗೆ ಪೋಸ್ಟ್ ಶೇರ್ ಮಾಡಿದವರಿಗೆ ನೋಟಿಸ್ ಕೂಡ ನೀಡಿದ್ದರು. ಒಂದು ವೇಳೆ ಸಭೆಗೆ ನಿಯಮ ಉಲ್ಲಂಘಿಸಿ ಯಾರಾದರೂ ಬಂದರೆ ಅಂತವರನ್ನು ಬಂಧಿಸಿ ಕರೆದೊಯ್ಯಲು ಎರಡು ಬಿಎಂಟಿಸಿ ಬಸ್‌ಗಳನ್ನು ಸಿದ್ದಪಡಿಸಲಾಗಿತ್ತು.

ಪೊಲೀಸರ ಈ ಎಲ್ಲ ಕಟ್ಟುನಿಟ್ಟಿನ ಕ್ರಮಗಳಿಂದ ಯಾರೊಬ್ಬರು ಇತ್ತ ಸುಳಿಯಲಿಲ್ಲ ಎಂದು ತಿಳಿದು ಬಂದಿದೆ. ಕಾಕ್ರೋಚ್ ಜನತಾ ಪಾರ್ಟಿಯವರು ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಅಬ್ಬರಿಸುತ್ತಾರೆ ಹೊರತು ಬೀದಿಯಲ್ಲಿ ಇಳಿದು ಹೋರಾಟ ಮಾಡುವ ಮನಸ್ಥಿತಿ ಇಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಕಾಂಗ್ರೆಸ್‌ ಮುಖಂಡ ಸೂರ್ಯ ಮುಕುಂದರಾಜ್‌ಗೆ ನೊಟೀಸ್

ಕಾಕ್ರೋಚ್ ಜನತಾ ಪಾರ್ಟಿ ಟೌನ್ ಹಾಲ್ ಬಳಿ ನಡೆಸಲು ಉದ್ದೇಶಿಸಲಾಗಿದ್ದ ಮಾನವ ಸರಪಳಿ ಮತ್ತು ಸಭೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಶೇರ್ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಸೂರ್ಯ ಮುಕುಂದರಾಜ್‌ಗೆ ಎಸ್.ಜೆ.ಪಾರ್ಕ್ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.ಹೈಕೋರ್ಟ್ ಆದೇಶದ ಪ್ರಕಾರ ಪುರಭವನದ ಬಳಿ ಪ್ರತಿಭಟನೆ, ಮಾನವ ಸರಪಳಿ ನಿರ್ಮಿಸಿ ಮೌನ ಪ್ರತಿಭಟನೆ ಮಾಡಲು ಅವಕಾಶವಿಲ್ಲ. ಸ್ವಾತಂತ್ರ್ಯ ಉದ್ಯಾನ ಹೊರತು ಪಡಿಸಿ ಬೇರೆ ಕಡೆ ಪ್ರತಿಭಟನೆ ಮಾಡುವಂತಿಲ್ಲ ಎಂದು ತಿಳಿವಳಿಕೆ ನೊಟೀಸ್ ನೀಡಿದ್ದಾರೆ.