ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆಯಿಂದ (ಎಸ್‌ಐಆರ್‌) ಲಕ್ಷಾಂತರ ಮತಗಳು ತೆಗೆದುಹಾಕಲ್ಪಡುವ ಅಪಾಯವಿದ್ದು, ಈ ಬಗ್ಗೆ ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. 

ಬೆಂಗಳೂರು: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಯಿಂದ ದೇಶದಲ್ಲಿ ಸಾಕಷ್ಟು ಅನಾಹುತಗಳು ನಡೆಯುತ್ತಿವೆ. ಜವಾಬ್ದಾರಿಯುತ ಸರ್ಕಾರವಾಗಿ ಆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

Add Asianetnews Kannada as a Preferred SourcegooglePreferred

ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಎಸ್‌ಐಆರ್‌ನಿಂದ ದೇಶದಲ್ಲಿ ಸಾಕಷ್ಟು ಅನಾಹುತಗಳಾಗುತ್ತಿವೆ. ಅದಕ್ಕಾಗಿ ನಾವು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಬಡ ಮತ್ತು ಸಾಮಾನ್ಯ ಜನರಿಗೆ ಎಸ್‌ಐಆರ್‌ ಬಗ್ಗೆ ಪರಿಚಯ ಮಾಡಿಕೊಡಬೇಕಿದೆ. ಕೆಲ ರಾಜ್ಯಗಳಲ್ಲಿ 50ರಿಂದ 90 ಲಕ್ಷದವರೆಗೆ ಮತಗಳನ್ನು ತೆಗೆದುಹಾಕಲಾಗಿದೆ. ನಮ್ಮಲ್ಲೂ ಎಸ್‌ಐಆರ್‌ ಆರಂಭವಾಗುತ್ತಿದ್ದು, ಅದಕ್ಕಾಗಿ ಎಚ್ಚರಿಕೆ ವಹಿಸಬೇಕಿದೆ ಎಂದರು.

ಇದು ಜವಾಬ್ದಾರಿಯುತ ಸರ್ಕಾರದ ಕೆಲಸ

ಜನರು ಚುನಾವಣಾ ಆಯೋಗ ನೀಡುವ ಅರ್ಜಿ ತುಂಬಿಸಿ ದಾಖಲೆ ಸಹಿತ ವಾಪಾಸ್‌ ನೀಡಿದವರ ಮತ ಮಾತ್ರ ಉಳಿಯುತ್ತದೆ. ಅರ್ಜಿ ವಾಪಸ್‌ ನೀಡದವರ ಮತ ಹಕ್ಕು ನಷ್ಟವಾಗಲಿದೆ. ಮತದಾನದ ಹಕ್ಕು ಕಳೆದುಕೊಂಡರೆ ಸರ್ಕಾರದಿಂದ ದೊರೆಯುವ ಹಲವು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆ ದೃಷ್ಟಿಯಿಂದ ಮತ ಹಕ್ಕು ಕಳೆದುಕೊಳ್ಳದಂತೆ ಮಾಡಲು ಸರ್ಕಾರ ಜನರಿಗೆ ಬೇಕಾಗುವ ದಾಖಲೆ ಒದಗಿಸಲಿದೆ. ಇದು ಜವಾಬ್ದಾರಿಯುತ ಸರ್ಕಾರದ ಕೆಲಸವಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸೇರಿ ಎಲ್ಲ ಪಕ್ಷಗಳ ಬಿಎಲ್‌ಎಗಳಿಗೆ ತರಬೇತಿ ನೀಡುತ್ತಿವೆ. ನಮ್ಮಿಂದ ಹಾಗೂ ಸರ್ಕಾರದಿಂದ ಏನೂ ತೊಂದರೆಯಾಗಬಾರದು ಎಲ್ಲರಿಗೂ ನ್ಯಾಯ ಒದಗಿಸಬೇಕು ಎನ್ನುವುದು ನನ್ನ ಆಶಯ. ಚುನಾವಣೆ ಗೆಲ್ಲುವುದು, ಬಿಡುವುದು ಬೇರೆ ವಿಚಾರ. ಮತ ಹಕ್ಕು ಕಳೆದು ಯೋಜನೆ ಸೌಲಭ್ಯ ಸಿಗದಿದ್ದರೆ ಆಗ ಚುನಾವಣಾ ಆಯೋಗ ಮಾಡಿದೆ ಎಂದು ಹೇಳುವುದಿಲ್ಲ. ನಮ್ಮನ್ನೇ ಜನರು ಪ್ರಶ್ನಿಸುತ್ತಾರೆ ಎಂದರು.

ಪಕ್ಷದೊಳಗೆ ಯಾವ ಗೊಂದಲವೂ ಇಲ್ಲ. ಪಕ್ಷವಿದ್ದರೆ ನೀನು. ನಂತರ ಸ್ಥಾನಮಾನ. ಮೊದಲು ಪಕ್ಷ ಇರಬೇಕು ನಂತರ ಮಿಕ್ಕಿದ್ದೆಲ್ಲ ಸ್ಥಾನಮಾನ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿಎಂಗೆ ದಿಲ್ಲಿಗೆ ಬುಲಾವ್‌ ಬಗ್ಗೆ ನನಗೆ ಗೊತ್ತಿಲ್ಲ: ಡಿಕೆಶಿ

ಬೆಂಗಳೂರು: ‘ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆದಿರುವ ಬಗ್ಗೆ ನನಗೆ ಗೊತ್ತಿಲ್ಲ’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ತಮ್ಮ ನಿವಾಸದ ಬಳಿ ಮಾಧ್ಯಮದವರು ಬಳಿ ಮಾತನಾಡಿ ಈ ರೀತಿ ಪ್ರತಿಕ್ರಿಯೆ ನೀಡಿದರು. ‘ನಾನು ಈಗಷ್ಟೇ ಸಭೆ ಮುಗಿಸಿಕೊಂಡು ಬಂದಿದ್ದೇನೆ. ಈ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ’ ಎಂದರು. ಸಿಎಂರನ್ನು ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರೆದಿದ್ದಾರಾ ಅಥವಾ ನಾಯಕತ್ವ ಬದಲಾವಣೆ ಹಿನ್ನೆಲೆಯಲ್ಲಿ ಕರೆದಿದ್ದಾರಾ ಎಂದು ಕೇಳಿದಾಗ, ‘ನನಗೆ ಗೊತ್ತಿಲ್ಲ’ ಎಂದಷ್ಟೇ ಹೇಳಿದರು.