2008ರ ಬೆಂಗಳೂರು ಸರಣಿ ಬಾಂಬ್‌ ಸ್ಫೋಟದ ರೂವಾರಿ ಟಿ.ನಾಸೀರ್ ಸೇರಿ 7 ಮಂದಿಗೆ ಎನ್‌ಐಎ ವಿಶೇಷ ನ್ಯಾಯಾಲಯವು 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಜೈಲಿನಲ್ಲೇ ಕುಳಿತು ದೇಶದ ವಿವಿಧೆಡೆ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸಿದ್ದರು.

ಬೆಂಗಳೂರು: ಆರ್‌.ಟಿ. ನಗರದ ಮನೆಯೊಂದರಲ್ಲಿ ಜೀವಂತ ಗ್ರೆನೇಡ್‌ ಪತ್ತೆ ಹಾಗೂ ಜೈಲಿನಿಂದಲೂ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣದಲ್ಲಿ ಲಷ್ಕರ್‌ ಎ ತೋಯ್ಬಾ ಉಗ್ರ ಸಂಘಟನೆ ಸದಸ್ಯನಾಗಿರುವ 2008ರ ಬೆಂಗಳೂರು ಸರಣಿ ಬಾಂಬ್‌ ಸ್ಫೋಟದ ಮಾಸ್ಟರ್‌ ಮೈಂಡ್‌ ಟಿ.ನಾಸೀರ್‌ ಸೇರಿ 7 ಮಂದಿ ಅಪರಾಧಿಗಳಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ(ಎನ್‌ಐಎ) ವಿಶೇಷ ನ್ಯಾಯಾಲಯ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 48 ಸಾವಿರ ರು. ದಂಡ ವಿಧಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರು ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಉಗ್ರ ಟಿ.ನಾಸೀರ್‌, ಆತನ ಸಹಚರರಾದ ಸಯೈದ್‌ ಸುಹೇಲ್‌, ಮೊಹಮ್ಮದ್‌ ಉಮರ್‌, ಜಾಹೀದ್‌ ತಬ್ರೇಜ್‌, ಸೈಯದ್‌ ಮುದಾಸೀರ್‌ ಪಾಷಾ, ಮೊಹಮ್ಮದ್‌ ಫೈಜಲ್‌ ರಬಾನಿ, ಸನ್ಮಾನ್‌ ಖಾನ್‌ಗೆ ಶಿಕ್ಷೆ ವಿಧಿಸಲಾಗಿದೆ. ಅಪರಾಧಿಗಳು ಜೈಲಿನಲ್ಲೇ ಕುಳಿತು ಕರ್ನಾಟಕ ಸೇರಿ ದೇಶದ ವಿವಿಧೆಡೆ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸಿದ್ದರು.

ವಿವಿಧ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರುವ ನಿರ್ದಿಷ್ಟ ಸಮುದಾಯದ ಯುವಕರನ್ನು ಉಗ್ರ ಸಂಘಟನೆ ಸೇರುವಂತೆ ಪ್ರಚೋದನೆ ನೀಡುತ್ತಿದ್ದರು. ಇಸ್ಲಾಂ ಮೂಲಭೂತವಾದ ಬೋಧಿಸುತ್ತಿದ್ದರು. ಬಳಿಕ ಉಗ್ರ ಸಂಘಟನೆಗೆ ಸೇರಿಸಿಕೊಂಡು ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಗಳನ್ನು ಯೋಜನೆ ಸಿದ್ಧಪಡಿಸಿದ್ದರು.

ಸಿಸಿಬಿ ದಾಳಿ ವೇಲ್‌ ಗ್ರೆನೇಡ್‌ ಪತ್ತೆ

ಈ ನಡುವೆ 2023ರಲ್ಲಿ ಸಿಸಿಬಿ ಪೊಲೀಸರು ಆರ್‌.ಟಿ.ನಗರದ ಜುನೈದ್‌ ಅಹಮ್ಮದ್‌ ಮನೆ ಮೇಲೆ ದಾಳಿ ಮಾಡಿ ಶೋಧಿಸಿದಾಗ ಜೀವಂತ ಗ್ರೆನೇಡ್‌ಗಳು, ಪಿಸ್ತೂಲ್‌, ಜೀವಂತ ಗುಂಡುಗಳು ಪತ್ತೆಯಾಗಿದ್ದವು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಬಳಿಕ ಆರೋಪಿಗಳ ವಾಸವಿದ್ದ ಮನೆಗಳಲ್ಲಿ ವಾಕಿಟಾಕಿ, ಮದ್ದುಗುಂಡುಗಳು, ಡಿಜಿಟೆಲ್ ಸಾಧನಗಳನ್ನು ಜಪ್ತಿ ಮಾಡಿದ್ದರು. ಆರೋಪಿಗಳು ಉಗ್ರ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿರುವ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಎನ್‌ಐಎ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಈ ಭಯೋತ್ಪಾದನಾ ಪಿತೂರಿಯಲ್ಲಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಎಲ್‌ಇಟಿ ಉಗ್ರ ಟಿ.ನಾಸೀರ್‌ ಪ್ರಮುಖ ಮಾಸ್ಟರ್‌ ಮೈಂಡ್‌ ಎಂಬುದು ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: Bengaluru: ಬಿಡಿಎ ಮಹಾ ಕಾರ್ಯಾಚರಣೆ: 43 ಕೋಟಿ ರೂ. ಬೆಲೆಯ ಒತ್ತುವರಿ ಆಸ್ತಿ ವಶಕ್ಕೆ

ಉಗ್ರ ಟಿ.ನಾಸೀರ್ ಎಸ್ಕೇಪ್‌ಗೆ ಸಂಚು

ಜೀವವಾಧಿ ಶಿಕ್ಷೆಗೆ ಗುರಿಯಾಗಿ ಕೆಲ ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಟಿ.ನಾಸೀರ್‌ನನ್ನು ಜೈಲಿನಿಂದ ನ್ಯಾಯಾಲಯಕ್ಕೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ತಪ್ಪಿಸಿಕೊಳ್ಳಲು ದೊಡ್ಡ ಸಂಚು ರೂಪಿಸಿದ್ದು ಎನ್‌ಐಎ ತನಿಖೆಯಲ್ಲಿ ಬಯಲಾಗಿತ್ತು. ಈ ಸಂಚಿನ ಮಾಸ್ಟರ್‌ ಮೈಂಡ್‌ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್‌ ಅಹ್ಮದ್‌ ಮತ್ತು ಬಂಧಿತ 11 ಆರೋಪಿಗಳ ವಿರುದ್ಧ ಎನ್‌ಐಎ ಆರೋಪಪಟ್ಟಿ ಸಲ್ಲಿಸಿತ್ತು. ಇಂದಿಗೂ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಜುನೈದ್‌ ಅಹಮ್ಮದ್‌ ಪತ್ತೆ ಮತ್ತು ಬಂಧನಕ್ಕೆ ಪ್ರಯತ್ನಗಳು ಮುಂದುವರಿದಿವೆ ಎಂದು ಎನ್‌ಐಎ ತಿಳಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿ ವರುಣನ ಅಬ್ಬರ: ಬಾಳೆ ಬೆಳೆ ನಾಶ, ಸಿಡಿಲು, ಬಿರುಗಾಳಿಯಿಂದ ಜನಜೀವನ ಅಸ್ತವ್ಯಸ್ತ