ಬೆಂಗಳೂರಿನ ಪ್ರತಿಷ್ಠಿತ DRDO ಕಚೇರಿಗಳಿಗೆ ಸರಣಿ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಭದ್ರತಾ ವಲಯದಲ್ಲಿ ಆತಂಕ ಸೃಷ್ಟಿಸಿದೆ. ಈ ಇಮೇಲ್‌ನಲ್ಲಿ ಸ್ಫೋಟಕಗಳನ್ನು ಇಟ್ಟಿರುವುದಾಗಿ ಹೇಳಿರುವುದಲ್ಲದೆ, ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಪುತ್ರನ ಅಪಹರಣದ ಎಚ್ಚರಿಕೆಯನ್ನೂ ನೀಡಲಾಗಿದೆ.

ಬೆಂಗಳೂರು (ಏ.6): ಸಿಲಿಕಾನ್ ಸಿಟಿಯ ಪ್ರತಿಷ್ಠಿತ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (DRDO) ವ್ಯಾಪ್ತಿಯ ಕಚೇರಿಗಳಿಗೆ ಸರಣಿ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಭದ್ರತಾ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಬೆದರಿಕೆ ಇಮೇಲ್ ಕೇವಲ ಬಾಂಬ್ ಸ್ಫೋಟಕ್ಕೆ ಸೀಮಿತವಾಗದೆ, ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಪುತ್ರ ಇನ್ಬನಿಧಿ ಸ್ಟಾಲಿನ್ ಅವರ ಇಡ್ನ್ಯಾಪ್‌ ಎಚ್ಚರಿಕೆಯನ್ನೂ ಒಳಗೊಂಡಿರುವುದು ತನಿಖೆಯನ್ನು ರಾಜಕೀಯ ತಿರುವಿನತ್ತ ಕೊಂಡೊಯ್ದಿದೆ.

ಡಿಆರ್‌ಡಿಒ ಅಡಿಯಲ್ಲಿ ಬರುವ ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಷ್‌ಮೆಂಟ್ (GTRE) ಕಚೇರಿಯನ್ನು ಮುಖ್ಯವಾಗಿ ಗುರಿಯಾಗಿಸಿಕೊಂಡು ಈ ಬೆದರಿಕೆ ಹಾಕಲಾಗಿದೆ. ಕಚೇರಿ ಆವರಣದಲ್ಲಿ 13 ಸೈನೈಡ್ ಗ್ಯಾಸ್ ಒಳಗೊಂಡ ಐಇಡಿ (IED) ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ತಮಿಳು ಭಾಷೆಯಲ್ಲಿ ಬರೆಯಲಾದ ಈ ಸಂದೇಶವು, ಮಧ್ಯಾಹ್ನ 1:10ಕ್ಕೆ ಸಂಘಟಿತ ಸ್ಫೋಟ ಸಂಭವಿಸಲಿದೆ ಎಂದು ಎಚ್ಚರಿಸಿತ್ತು. ಇದರಿಂದಾಗಿ ತಕ್ಷಣವೇ ತುರ್ತು ತೆರವು ಕಾರ್ಯಾಚರಣೆ (Evacuation) ಮತ್ತು ತಪಾಸಣೆ ನಡೆಸಲಾಯಿತು.

ಕಿರುತಿಗಾ ಉದಯನಿಧಿ ಹೆಸರಿನಲ್ಲಿರುವ Kiruthiha.udhayanidhi@hotmail ಐಡಿಯಿಂದ ಈ ಸಂದೇಶ ರವಾನೆಯಾಗಿದೆ. ಈ ಸಂದೇಶದ ಕೊನೆಯಲ್ಲಿ “ಆರ್ಡರ್ ಆಫ್ ಏಂಜೆಲ್ಸ್ (09A)” ಎಂಬ ಗುಂಪಿನ ಹೆಸರನ್ನು ಹಾಕಲಾಗಿದ್ದು, ಇದರಲ್ಲಿ ರಾಜಕೀಯ ಮತ್ತು ಧಾರ್ಮಿಕ ಪ್ರೇರಿತ ಅಂಶಗಳನ್ನು ಉಲ್ಲೇಖಿಸಲಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಮೊಮ್ಮಗ ಇನ್ಬನಿಧಿಯನ್ನು ಅಪಹರಿಸುವುದಾಗಿ ಬೆದರಿಕೆ ಹಾಕಲಾಗಿದೆ.

ಇಮೇಲ್‌ ಪರಿಶೀಲನೆ ವೇಳೆ ಬೆಳಕಿಗೆ ಬಂದ ಬೆದರಿಕೆ

ವಾಸ್ತವವಾಗಿ ಇಮೇಲ್ ಪರಿಶೀಲನೆ ನಡೆಸುವಾಗ ಈ ಬೆದರಿಕೆ ಬೆಳಕಿಗೆ ಬಂದಿದೆ. ತಕ್ಷಣವೇ ಸ್ಥಳೀಯ ಪೊಲೀಸರು ಮತ್ತು ಬಾಂಬ್ ವಿಲೇವಾರಿ ದಳ (Bomb Disposal Squad) ಗುರಿಯಾಗಿಸಿದ ಕಚೇರಿಗಳಲ್ಲಿ ತೀವ್ರ ಶೋಧ ಕಾರ್ಯ ನಡೆಸಿವೆ. ಇಲ್ಲಿಯವರೆಗೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರಿನ ಎಲ್ಲಾ ರಕ್ಷಣಾ ಸಂಸ್ಥೆಗಳಲ್ಲಿ ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲಾಗಿದೆ. ಒಂದೇ ಇಮೇಲ್ ಐಡಿಯಿಂದ ಬೇರೆ ಬೇರೆ ದಿನಾಂಕಗಳಲ್ಲಿ ಕನಿಷ್ಠ ಎಂಟು ಬಾರಿ ಇದೇ ರೀತಿಯ 'ಕಾಪಿ-ಪೇಸ್ಟ್' ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

ಸೈಬರ್ ಕ್ರೈಮ್ ವಿಭಾಗ ಮತ್ತು ಕಾನೂನು ಜಾರಿ ಸಂಸ್ಥೆಗಳು ಇಮೇಲ್ ಕಳುಹಿಸಿದವರ ಮೂಲ ಮತ್ತು ಅದರ ವಿಶ್ವಾಸಾರ್ಹತೆಯನ್ನು ಪತ್ತೆಹಚ್ಚಲು ತನಿಖೆಯನ್ನು ಚುರುಕುಗೊಳಿಸಿವೆ. ರಕ್ಷಣಾ ಸಂಸ್ಥೆಗಳನ್ನು ಗುರಿಯಾಗಿಸಿರುವುದು ದೇಶದ ಭದ್ರತೆಯ ದೃಷ್ಟಿಯಿಂದ ಗಂಭೀರ ವಿಷಯವಾಗಿ ಪರಿಣಮಿಸಿದೆ.