ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಮೊಬೈಲ್ ಕ್ಯೂಆರ್ ಆಧಾರಿತ ಅನಿಯಮಿತ ಪ್ರಯಾಣದ ಪಾಸ್‌ಗಳನ್ನು ಪರಿಚಯಿಸಿದೆ. ಮೆಟ್ರೋದಲ್ಲಿ ಜನವರಿ 15 ರಿಂದ 1, 3 ಮತ್ತು 5 ದಿನಗಳ ಮೊಬೈಲ್ ಕ್ಯೂಆರ್ ಅನಿಯಮಿತ ಪ್ರಯಾಣ ಪಾಸ್ ಲಭ್ಯ. ದರ ಮತ್ತು ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ.
ಬೆಂಗಳೂರು (ಜ.13): ಸಿಲಿಕಾನ್ ಸಿಟಿಯ ಸಂಚಾರ ವ್ಯವಸ್ಥೆಯ ಬೆನ್ನೆಲುಬಾಗಿರುವ 'ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆಯಾಗಿ ಮತ್ತೊಂದು ಡಿಜಿಟಲ್ ಸೌಲಭ್ಯವನ್ನು ಪರಿಚಯಿಸಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ದಿನಾಂಕ 15ನೇ ಜನವರಿ 2026 ರಿಂದ ಮೊಬೈಲ್ ಕ್ಯೂಆರ್ (QR) ಆಧಾರಿತ ಅನಿಯಮಿತ ಪ್ರಯಾಣದ ಪಾಸ್‌ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.ಡಿಜಿಟಲ್ ಕ್ರಾಂತಿಯತ್ತ ಮೆಟ್ರೋ ಹೆಜ್ಜೆ:ಇದುವರೆಗೆ ಅನಿಯಮಿತ ಪ್ರಯಾಣದ ಸೌಲಭ್ಯ ಪಡೆಯಲು ಪ್ರಯಾಣಿಕರು ಕಾಂಟ್ಯಾಕ್ಟ್‌ಲೆಸ್ ಸ್ಮಾರ್ಟ್ ಕಾರ್ಡ್‌ಗಳನ್ನೇ (CSC) ಅವಲಂಬಿಸಬೇಕಿತ್ತು. ಅಲ್ಲದೆ, ಪ್ರತಿ ಕಾರ್ಡ್‌ಗೆ ₹50 ರಷ್ಟು ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯವಾಗಿತ್ತು. ಕಾರ್ಡ್ ಕಳೆದುಕೊಂಡರೆ ಅಥವಾ ಕಾರ್ಡ್ ಹಾನಿಯಾದರೆ ಈ ಹಣ ಮತ್ತು ಪಾಸ್ ಎರಡೂ ವ್ಯರ್ಥವಾಗುತ್ತಿತ್ತು.
ಆದರೆ ಈಗ ಪರಿಚಯಿಸಲಾಗಿರುವ ಮೊಬೈಲ್ QR ಪಾಸ್‌ಗಳಿಂದಾಗಿ ಪ್ರಯಾಣಿಕರು ಯಾವುದೇ ಭದ್ರತಾ ಠೇವಣಿ ಪಾವತಿಸುವ ಅಗತ್ಯವಿಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೇ ಪಾಸ್ ಇರುವುದರಿಂದ ಪ್ರಯಾಣ ಅತ್ಯಂತ ಸುಗಮವಾಗಲಿದೆ.
ಪ್ರಮುಖ ವೈಶಿಷ್ಟ್ಯಗಳು ಮತ್ತು ಸೌಲಭ್ಯಗಳು:
ಹೊಸ QR ಪಾಸ್‌ಗಳು 1 ದಿನ, 3 ದಿನ ಮತ್ತು 5 ದಿನಗಳ ಮಾನ್ಯತೆಯಲ್ಲಿ ಲಭ್ಯವಿವೆ. ಪ್ರಯಾಣಿಕರು 'ನಮ್ಮ ಮೆಟ್ರೋ' ಅಧಿಕೃತ ಮೊಬೈಲ್ ಆಪ್ ಮೂಲಕ ಈ ಪಾಸ್‌ಗಳನ್ನು ಖರೀದಿಸಬಹುದಾಗಿದೆ.
- ಠೇವಣಿ ಮುಕ್ತ: ಸ್ಮಾರ್ಟ್ ಕಾರ್ಡ್‌ಗಳಿಗೆ ಬೇಕಿದ್ದ ₹50 ಠೇವಣಿ ಮೊಬೈಲ್ ಪಾಸ್‌ಗಳಿಗೆ ಇರುವುದಿಲ್ಲ.
- ಸಮಯದ ಉಳಿತಾಯ: ಕಾರ್ಡ್ ಖರೀದಿಸಲು ಅಥವಾ ರಿಚಾರ್ಜ್ ಮಾಡಲು ಟಿಕೆಟ್ ಕೌಂಟರ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆಯಿಲ್ಲ.
- ತಂತ್ರಜ್ಞಾನದ ಬಳಕೆ: ಮೊಬೈಲ್‌ನಲ್ಲಿರುವ QR ಕೋಡ್ ಅನ್ನು ಮೆಟ್ರೋ ನಿಲ್ದಾಣದ ಸ್ವಯಂಚಾಲಿತ ಸಂಗ್ರಹ (AFC) ಗೇಟ್‌ಗಳಲ್ಲಿ ಸ್ಕ್ಯಾನ್ ಮಾಡುವ ಮೂಲಕ ತಡೆರಹಿತವಾಗಿ ಪ್ರವೇಶ ಮತ್ತು ನಿರ್ಗಮನ ಪಡೆಯಬಹುದು.
ದರ ಪಟ್ಟಿ ವಿವರ:
| ಪಾಸ್ ಪ್ರಕಾರ | ಸ್ಮಾರ್ಟ್ ಕಾರ್ಡ್ ದರ (₹50 ಠೇವಣಿ ಸೇರಿ) | ಮೊಬೈಲ್ QR ಪಾಸ್ ದರ (ಠೇವಣಿ ಇಲ್ಲ) | ಮಾನ್ಯತೆ |
| 1 ದಿನದ ಪಾಸ್ | ₹300 | ₹250 | 1 ದಿನ ಅನಿಯಮಿತ ಪ್ರಯಾಣ |
| 3 ದಿನಗಳ ಪಾಸ್ | ₹600 | ₹550 | 3 ದಿನಗಳ ಅನಿಯಮಿತ ಪ್ರಯಾಣ |
| 5 ದಿನಗಳ ಪಾಸ್ | ₹900 | ₹850 | 5 ದಿನಗಳ ಅನಿಯಮಿತ |
ಪ್ರಯಾಣಪೂರ್ಣ ಡಿಜಿಟಲೀಕರಣದ ಗುರಿ
ಮೆಟ್ರೋ ನಿಲ್ದಾಣಗಳಲ್ಲಿ ಕಾರ್ಡ್ ವಿತರಣೆ ಮತ್ತು ಮರುಪಾವತಿ ಪ್ರಕ್ರಿಯೆಯಿಂದಾಗಿ ಉಂಟಾಗುವ ಜನದಟ್ಟಣೆಯನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಉಪಕ್ರಮವು ಪೂರ್ಣ ಡಿಜಿಟಲ್ ಮತ್ತು ಪ್ರಯಾಣಿಕ ಸ್ನೇಹಿ ಮೆಟ್ರೋ ವ್ಯವಸ್ಥೆ ರೂಪಿಸುವ ಬಿಎಂಆರ್‌ಸಿಎಲ್‌ನ ಮಹತ್ವದ ಹೆಜ್ಜೆಯಾಗಿದೆ. ಪ್ರವಾಸಿಗರಿಗೆ ಮತ್ತು ಪ್ರತಿನಿತ್ಯ ಮೆಟ್ರೋ ಬಳಸುವವರಿಗೆ ಈ ಸೌಲಭ್ಯ ವರದಾನವಾಗಲಿದೆ.


