ವಾರಾಂತ್ಯದ ದಟ್ಟಣೆ ನಿರ್ವಹಿಸಲು ನೈಋತ್ಯ ರೈಲ್ವೆ ಬೆಂಗಳೂರು ಕಂಟೋನ್ಮೆಂಟ್ ಮತ್ತು ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸುತ್ತಿದೆ. ಆದರೆ, ಈ ರೈಲು ಮಂಗಳೂರು ಜಂಕ್ಷನ್ ಸೆಂಟ್ರಲ್ ನಿಲ್ದಾಣಗಳಿಗೆ ಬಾರದೆ ಪಡೀಲ್ ಮೂಲಕ ಹಾದುಹೋಗುತ್ತೆ. ಇದರಿಂದ ಮಂಗಳೂರು ಪ್ರಯಾಣಿಕರಿಗೆ ಯಾವುದೇ ಪ್ರಯೋಜನವಿಲ್ಲ.
ಮಂಗಳೂರು (ಸೆ.30): ವಾರಾಂತ್ಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿರ್ವಹಿಸಲು, ನೈಋತ್ಯ ರೈಲ್ವೆ ಬೆಂಗಳೂರು ಕಂಟೋನ್ಮೆಂಟ್ ಮತ್ತು ಮಡಗಾಂವ್ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲಿದೆ. ರೈಲು ಸಂಖ್ಯೆ 06597 ಬೆಂಗಳೂರು ಕಂಟೋನ್ಮೆಂಟ್ - ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅ.1ರಂದು ರಾತ್ರಿ 11.50ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಟು, ಮರುದಿನ ಅ.2ರಂದು ಸಂಜೆ 6.10ಕ್ಕೆ ಮಡಗಾಂವ್ ತಲುಪಲಿದೆ.
ಬೆಂಗಳೂರು-ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು ಎಲ್ಲೆಲ್ಲಿ ನಿಲುಗಡೆ?
ಮರುಪ್ರಯಾಣದಲ್ಲಿ, ರೈಲು ಸಂಖ್ಯೆ 06598 ಮಡಗಾಂವ್ - ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅ.4ರಂದು ಬೆಳಗ್ಗೆ 8.40ಕ್ಕೆ ಮಡಗಾಂವ್‌ನಿಂದ ಹೊರಟು, ಅದೇ ದಿನ ರಾತ್ರಿ 11.55ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಎರಡೂ ಮಾರ್ಗಗಳಲ್ಲಿ ಎಸ್ಎಮ್ವಿಟಿ ಬೆಂಗಳೂರು, ಚಿಕ್ಕಬಾಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ, ಕಾರವಾರ ಮತ್ತು ಕನಕೋನ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಮಂಗಳೂರು ಪ್ರಯಾಣಿಕರಿಗಿಲ್ಲ ಪ್ರಯೋಜನ:
ಈ ರೈಲು ಬೆಂಗಳೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಪಡೆದು ಉಡುಪಿಗೆ ಪಡೀಲ್ ಮೂಲಕ ಸಂಚರಿಸುತ್ತದೆ. ಈ ರೈಲು ಮಂಗಳೂರು ಸನಿಹದಲ್ಲಿ ಸಂಚರಿಸಿದರೂ, ಮಂಗಳೂರು ಜಂಕ್ಷನ್ ಅಥವಾ ಮಂಗಳೂರು ಸೆಂಟ್ರಲ್ ವರೆಗೆ ಸಂಚರಿಸದೇ ಇರುವುದರಿಂದ ಇದರ ಪ್ರಯೋಜನ ಮಂಗಳೂರಿಗರಿಗೆ ಇಲ್ಲದಂತಾಗಿದೆ ಎಂದು ರೈಲ್ವೇ ಬಳಕೆದಾರರು ಆರೋಪಿಸಿದ್ದಾರೆ. ಮಂಗಳೂರನ್ನು ಮೈಸೂರು ವಿಭಾಗಕ್ಕೆ ಸೇರಿಸಿದ ಬಳಿಕವೂ ಇಂತಹ ಅನ್ಯಾಯ ಮುಂದುವರಿದ ಬಗ್ಗೆ ಮಂಗಳೂರು ರೈಲ್ವೇ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


