Bengaluru weather now: ಬೆಂಗಳೂರು, ಚಾಮರಾಜನಗರ ಮತ್ತು ದಾವಣಗೆರೆ ಸೇರಿದಂತೆ ರಾಜ್ಯದ ಹಲವೆಡೆ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹನೂರಿನಲ್ಲಿ ಡ್ಯಾಂಗಳು ಭರ್ತಿಯಾಗಿ ಕೋಡಿ ಬಿದ್ದಿದ್ದು, ಪ್ರಾಣಿಗಳು ಕೊಚ್ಚಿಹೋಗಿವೆ ಹಾಗೂ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಬೆಂಗಳೂರು, ಚಾ.ನಗರ, ದಾವಣಗೆರೆ, ಮಂಡ್ಯದಲ್ಲಿ ಮಳೆ । ಹನೂರಲ್ಲಿ ಮಳೆ ರಭಸಕ್ಕೆ ಕೊಚ್ಚಿಹೋದ 2 ಕುರಿ, 20 ಕೋಳಿ
ಬೆಂಗಳೂರು ಸೆ.30): ಬೆಂಗಳೂರು ಹವಾಮಾನ ತೀವ್ರ ಬದಲಾವಣೆಯಿಂದ ಕಳೆದೆರಡು ದಿನಗಳಿಂದ ನಸುಕಿನ ಜಾವ ಭಾರೀ ಮಳೆಯಾಗುತ್ತಿದೆ. ನಿನ್ನೆಯೂ ಬೆಳ್ಳಂಬೆಳಗ್ಗೆ ಮಳೆ ಸುರಿದು ಅವಾಂತರ ಸೃಷ್ಟಿಸಿತ್ತು. ಇಂದು ಕೂಡ ಬೆಳಗ್ಗೆ ಐದು ಗಂಟೆಯಿಂದ ಶುರುವಾಗಿರುವ ಮಳೆ ಅರ್ಭಟಿಸುತ್ತಿದೆ.
ಹಗಲಿನಲ್ಲಿ ಹೊರಪು, ಉಷ್ಣವಾಗಿದ್ದ ವಾತಾವರಣ ಸಂಜೆಯವರೆಗೆ ಮಳೆಯ ಲಕ್ಷಣ ಕಾಣಿಸಿರಲಿಲ್ಲ. ಆದರೆ ಬೆಳಗ್ಗೆ 5 ಗಂಟೆಗೆ ದಟ್ಟ ಮೋಡಗಳು ಆವರಿಸಿ ಮಲ್ಲೆಶ್ವರಂ, ಶೇಷಾದ್ರಿಪುರಂ ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗುತ್ತಿದೆ.
ಮುಂದಿನ 3 ಗಂಟೆ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ!
ಮುಂದಿನ 3 ಗಂಟೆಯಲ್ಲಿ ದಾವಣಗೆರೆ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗಂಟೆಗೆ 30–40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮೈಸೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ಬಳ್ಳಾರಿ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಮಳೆಯ ಮುನ್ಸೂಚನೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಾಮರಾಜನಗರದಲ್ಲಿ ಭರ್ಜರಿ ಮಳೆ
ಮಳೆಗಾಲದಲ್ಲಿ ಬಿರುಬಿಸಿಲಿನಿಂದಾಗಿ ಕಂಗೆಟ್ಟಿದ್ದ ಜನತೆಗೆ ಸೋಮವಾರ ರಾತ್ರಿಯ ಮಳೆಯು ತಂಪೆರೆದಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಭೀಕರ ಬರ ಎದುರಿಸುತ್ತಿದ್ದ ಹನೂರು ತಾಲೂಕಿನಲ್ಲಿ ಒಂದೇ ರಾತ್ರಿ ಸುರಿದ ಮಳೆಯು ಕೆರೆ-ಕಟ್ಟೆಗಳು ತುಂಬಿ ಭರ್ತಿಯಾಗುವಂತೆ ಮಾಡಿದೆ. ಪರಿಣಾಮ ರೈತರ ಮುಖದಲ್ಲಿ ಸಂತಸ ರಾರಾಜಿಸಿತು. ಮತ್ತೊಂದೆಡೆ ದಾವಣಗೆರೆ ಜಿಲ್ಲೆಯ ನಗರ ಮತ್ತು ಚನ್ನಗಿರಿ ತಾಲೂಕಿನಲ್ಲಿಯೂ ಸುರಿದ ಮಳೆಯು ಕೆಲ ಫಜೀತಿಯನ್ನು ಸೃಷ್ಟಿಸಿತು.
ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹನೂರು ತಾಲೂಕಿನ ಹುಬ್ಬೆಹುಣಸೆ ಜಲಾಶಯ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ. ಜೊತೆಗೆ ಉಡುತೊರೆ ಜಲಾಶಯ, ತಟ್ಟೆಹಳ್ಳ, ಸ್ವಾಮಿಹಳ್ಳ ಕೆರೆಗಳು ತುಂಬಿ ಸೇತುವೆ ಮೇಲೆ ನೀರು ಹರಿದ ಪರಿಣಾಮ ಹನೂರು ಪಟ್ಟಣದ ಬಡಾವಣೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದ್ದಾರೆ.
ಹುಬ್ಬೆಹುಣಸೆ ಡ್ಯಾಂ ಭರ್ತಿಯಾಗಿ ಕೋಡಿ ಬಿದ್ದು ಹರಿದಿದೆ.
ಹುಬ್ಬೆಹುಣಸೆ ಡ್ಯಾಂ ಭರ್ತಿಯಾಗಿ ಕೋಡಿ ಬಿದ್ದು, ತಟ್ಟೆಹಳ್ಳದಲ್ಲಿ ನೀರು ಹರಿದ ಪರಿಣಾಮ ಸುತ್ತಲಿನ ವಸತಿ ಪ್ರದೇಶಗಳು ಹಾಗೂ ರಸ್ತೆಗಳು ಸಂಪೂರ್ಣ ಜಲಾವೃತಗೊಂಡವು. ತಟ್ಟೆ ಹಳ್ಳದ ಮೂಲಕ ಅಪಾರ ಪ್ರಮಾಣವಾದ ನೀರು ಅಪಾಯದ ಮಟ್ಟ ಮೀರಿ ಅರಿದ ಪರಿಣಾಮ ಹಲವಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಭಾರಿ ಮಳೆಗೆ ತುಂಬಿ ಹರಿದ ಸ್ವಾಮಿ ಹಳ್ಳ
ಭಾರಿ ಮಳೆಗೆ ತುಂಬಿ ಹರಿದ ಸ್ವಾಮಿ ಹಳ್ಳ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿ ರೈತರು ಜಮೀನುಗಳಿಗೆ ಹೋಗಿ ಬರಲು ಪ್ರಯಾಸ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನೂತನವಾಗಿ ನಿರ್ಮಾಣ ಮಾಡಲಾಗಿರುವ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿತ್ತು. ಮಳೆಯ ನೀರಿನಿಂದ ಅದು ಕೊಚ್ಚಿ ಹೋಗಿ ರೈತರು ಪರದಾಡುವಂಥ ಸ್ಥಿತಿ ಉಂಟಾಗಿದೆ. ಮತ್ತೊಂದೆಡೆ ಮಾರ್ಟಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮನೆ, ಅಂಗಡಿಗಳಿಗೆ ನೀರು ನುಗ್ಗಿತು. ಮಳೆಯಿಂದಾಗಿ 2 ಕುರಿ, 20 ಕೋಳಿಗಳು ಕೊಚ್ಚಿ ಹೋಯಿತು ಎಂದು ನಿವಾಸಿಯೊಬ್ಬರು ಅಳಲು ತೋಡಿಕೊಂಡರು. ತಡರಾತ್ರಿಯ ಮಳೆಯ ರಭಸಕ್ಕೆ ಮಲೆ ಮಹದೇಶ್ವರ ಬೆಟ್ಟದ ಹಾದಿಯಲ್ಲಿ ಕಲ್ಲುಬಂಡೆ ಉರುಳಿ ಸಂಚಾರ ಅಸ್ತವ್ಯಸ್ತವಾಯಿತು.
ದಾವಣಗೆರೆಯಲ್ಲೂ ಭರ್ಜರಿ ಮಳೆ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಬ್ಬಳ-ಕೆಂಗಾಪುರ ರಸ್ತೆಯು ಮಳೆಯಿಂದಾಗಿ ಹಳ್ಳ ತುಂಬಿ ರಸ್ತೆಯ ಮೇಲೆಲ್ಲಾ ಹರಿಯುತ್ತಿದ್ದುದರಿಂದ ಸಂಪರ್ಕ ಕಡಿದುಕೊಂಡಿತ್ತು. ಹರನಹಳ್ಳಿ, ಕೆಂಗಾಪುರ ಮೂಲಕ ಕಬ್ಬಳವನ್ನು ಸಂಪರ್ಕಿಸುವ ಹಲವಾರು ಹಳ್ಳಿಗಳ ರಸ್ತೆ ಸಂಪರ್ಕ ಬಂದ್ ಆಗಿತ್ತು.
ಜೋರು ಮಳೆಯಿಂದಾಗಿ ಹರಿದ್ರಾವತಿ ಹಳ್ಳ ತುಂಬಿ ಹರಿದಿದ್ದಲ್ಲದೇ, ಸೇತುವೆ ಇಲ್ಲದ ರಸ್ತೆಯ ಮೇಲೂ ಹರಿಯುತ್ತಿದ್ದುದರಿಂದ ವಾಹನ ಸಂಚಾರ ಸ್ತಬ್ಧವಾಗಿತ್ತು. ಸುರಿಯುತ್ತಿದ್ದ ಮಳೆ, ಹರಿಯುತ್ತಿದ್ದ ನೀರಿನಲ್ಲೇ ಗ್ರಾಮಸ್ಥರು, ವಿದ್ಯಾರ್ಥಿಗಳು ಸಂಚಾರ ನಡೆಸಿದ್ದರು. ಅನೇಕ ವರ್ಷಗಳಿಂದ ಗ್ರಾಮಸ್ಥರು ಸೇತುವೆ ಇಲ್ಲದೇ ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ.


