ಕರ್ನಾಟಕ ರಾಜ್ಯ ಕಿಸಾನ್ ಸೇವಾ ಸಂಸ್ಥೆ ವತಿಯಿಂದ ಅಕ್ಟೋಬರ್ 2ರಿಂದ 4ರವರೆಗೆ ಮಂಗಳೂರಿನ ಕುಲಶೇಖರದಲ್ಲಿ 'ಮಂಗಳೂರು ಕೃಷಿ ಹಬ್ಬ-2026' ಆಯೋಜಿಸಲಾಗಿದೆ. ಈ ಬೃಹತ್ ಮೇಳದಲ್ಲಿ ಆಧುನಿಕ ಕೃಷಿ ತಂತ್ರಜ್ಞಾನ, ಸಾವಯವ ಕೃಷಿ, ಸಿರಿಧಾನ್ಯ, ಮತ್ತು ಮೀನುಗಾರಿಕೆ ಕುರಿತು ಸಮಗ್ರ ಮಾಹಿತಿ ಹಾಗೂ ಪ್ರದರ್ಶನ ಇರಲಿದೆ.

ಮಂಗಳೂರು: ಕರ್ನಾಟಕ ರಾಜ್ಯ ಕಿಸಾನ್ ಸೇವಾ ಸಂಸ್ಥೆಯ ವತಿಯಿಂದ ರಾಜ್ಯಮಟ್ಟದ ‘ಮಂಗಳೂರು ಕೃಷಿ ಹಬ್ಬ-2026’ ಅನ್ನು ಅಕ್ಟೋಬರ್ 2ರಿಂದ 4ರವರೆಗೆ ಮಂಗಳೂರಿನ ಕುಲಶೇಖರದ ಕಾರ್ಡೆಲ್ ಮೈದಾನ ಹಾಗೂ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕ ಅಶ್ವಿನ್ ಸಿಕ್ವೇರಾ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್, ರೋಟರಿ ಇಂಟರ್‌ನ್ಯಾಷನಲ್, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ (KAPPEC), ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯ ಹಾಗೂ ಸಾವಯವ ಕೃಷಿಕ ಗ್ರಾಹಕ ಬಳಗ ಸೇರಿದಂತೆ ವಿವಿಧ ಪ್ರಮುಖ ಸಂಸ್ಥೆಗಳ ಸಹಯೋಗದೊಂದಿಗೆ ಈ ಬೃಹತ್ ಕೃಷಿ ಮೇಳ ನಡೆಯಲಿದೆ ಎಂದರು.

ಕೃಷಿ ಹಬ್ಬದ ಪ್ರಮುಖ ವಿವರಗಳು ಹಾಗೂ ಉದ್ದೇಶ:

ರಾಜ್ಯದ ವಿವಿಧ ಜಿಲ್ಲೆಗಳ ರೈತರು, ಕೃಷಿ ಉದ್ಯಮಿಗಳು, ವಿಷಯ ತಜ್ಞರು, ಯುವಕರು, ಸ್ವಸಹಾಯ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು (FPOs) ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಬೆಳಿಗ್ಗೆ 9:30ರಿಂದ ರಾತ್ರಿ 8:30ರವರೆಗೆ ಸಾರ್ವಜನಿಕ ಪ್ರವೇಶವಿರಲಿದೆ. ಆಧುನಿಕ ಕೃಷಿ ತಂತ್ರಜ್ಞಾನ, ಸುಧಾರಿತ ಯಂತ್ರೋಪಕರಣಗಳು, ಸಾವಯವ ಕೃಷಿ ಪದ್ಧತಿ, ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು ಹಾಗೂ ಕೃಷಿ ಆಧಾರಿತ ಉದ್ಯಮಾವಕಾಶಗಳ ಕುರಿತು ರೈತರಿಗೆ ನೇರ ಹಾಗೂ ಉಪಯುಕ್ತ ಮಾಹಿತಿ ನೀಡುವುದು.

ಮೇಳದ ಪ್ರಮುಖ ಆಕರ್ಷಣೆಗಳು:

ಕೃಷಿ ಯಂತ್ರ ಮೇಳ, ಸಿರಿಧಾನ್ಯ (Millet) ಮೇಳ, ಸಸ್ಯ ಸಂತೆ ಹಾಗೂ ನರ್ಸರಿ ಉತ್ಪನ್ನಗಳ ಪ್ರದರ್ಶನ, ಜೇನು ಕೃಷಿ ಮೇಳ ಮತ್ತು ನಾಲಿಗೆಗೆ ರುಚಿ ನೀಡುವ ಆಹಾರ ಮೇಳ ಹೀಗೆ ವಿವಿಧ ಮೇಳಗಳಿರಲಿದೆ

ತೆಂಗು, ಅಡಿಕೆ, ಕಾಳುಮೆಣಸು ಸೇರಿದಂತೆ ಕರಾವಳಿಯ ಪ್ರಮುಖ ಬೆಳೆಗಳ ಪ್ರದರ್ಶನ ಹಾಗೂ ಮೀನುಗಾರಿಕೆ ಮತ್ತು ಮೀನು ಆಧಾರಿತ ಉದ್ಯಮಗಳ ಕುರಿತು ಸಮಗ್ರ ಮಾರ್ಗದರ್ಶನ, ತೋಟಗಾರಿಕೆ ಹಾಗೂ ಮೀನುಗಾರಿಕೆ ಮಾಹಿತಿ ಇರಲಿದೆ.

ಸಾವಯವ ಕೃಷಿ ಮಾಹಿತಿ, ರೈತರ ನೇರ ಮಾರುಕಟ್ಟೆ, ಕೃಷಿ ಉದ್ಯಮ ಮೇಳ ಹಾಗೂ ಸಣ್ಣ ಪ್ರಮಾಣದ ಉದ್ಯಮಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಸೂಕ್ತ ವೇದಿಕೆ ಇರಲಿದೆ.

ಪ್ರಾಯೋಜಕರು ಹಾಗೂ ಸಹಯೋಗಿ ಸಂಸ್ಥೆಗಳು:

ಈ ಕಾರ್ಯಕ್ರಮಕ್ಕೆ KAPPEC, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP), ಐವರಿ ಗ್ರಾಂಡ್, ONGC-MRPL, ಹ್ಯಾಂಗ್ಯೋ ಐಸ್‌ಕ್ರೀಂ, ಜೈನ್ ಇರಿಗೇಷನ್, ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ (KMF ನಂದಿನಿ), ಫಾದರ್ ಮುಲ್ಲರ್ ಸಂಸ್ಥೆ ಹಾಗೂ ಕ್ಯಾಂಪ್ಕೋ (CAMPCO) ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ನೆರವು ನೀಡುತ್ತಿವೆ.

ಪತ್ರಿಕಾಗೋಷ್ಠಿಯಲ್ಲಿ ರೋಟೇರಿಯನ್ ರಾಜೇಶ್ ಶೆಟ್ಟಿ, ರೋಟೇರಿಯನ್ ಜಾಕ್ಸನ್ ಸಲ್ಡಾನ್ಹಾ, ರಿಯಾನ್ ಮೋರಿಸ್, ರೋಟೇರಿಯನ್ ಭಾಸ್ಕರ ರೈ ಕಟ್ಟ ಮತ್ತು ರೋಟೇರಿಯನ್ ಶೆಲ್ಡನ್ ಕ್ರಾಸ್ಟಾ ಉಪಸ್ಥಿತರಿದ್ದರು.