ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸೈಬರ್ ಕ್ರೈಂ ಹೆಚ್ಚಳ, ಜನವರಿಯಿಂದ ಇಲ್ಲಿತನಕ 29 ಪ್ರಕರಣ ದಾಖಲು. OTP ಇಲ್ಲ, APK ಲಿಂಕ್ ಇಲ್ಲ… ಖಾತೆಯಿಂದ 18.24 ಲಕ್ಷ ರೂ. ಮಾಯ ಆಗಿದ್ದು ಹೇಗೆ? ಇಲ್ಲಿದೆ ನೋಡಿ ವಿಶೇಷ ವರದಿ.
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಮೇ 08) : ಸೈಬರ್ ಕ್ರಿಮಿಗಳ ಅಟ್ಟಹಾಸಕ್ಕೆ ಕಾಫಿನಾಡ ಜನತೆ ಬೆಚ್ಚಿಬಿದ್ದಿದ್ದು, ಇದೀಗ ಚಿಕ್ಕಮಗಳೂರು ನಗರದ ಮಹಿಳೆಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ಮಹಿಳೆಗೆ ಯಾವುದೇ ಆಪ್‌ನ ಲಿಂಕ್ ಬಂದಿಲ್ಲ, ಒಟಿಪಿಯೂ ಬಂದಿಲ್ಲ. ಆದರೂ ಹಂತ ಹಂತವಾಗಿ 18 ಲಕ್ಷ ರೂ. ಬ್ಯಾಂಕ್ ಖ್ಯಾತೆಯಿಂದ ಮಂಗಮಾಯಾಗಿದೆ. ಇಲ್ಲಿದೆ ನೋಡಿ ಸೈಬರ್ ವಂಚಕರ ಹೊಸ ವರಸೆ.
ರಾಷ್ಟ್ರದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಐ.ಡಿ.ಎಫ್.ಸಿ. ಫಸ್ಟ್ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 18.24 ಲಕ್ಷ ರೂಪಾಯಿ ಹಣ ವಂಚಕರು ವರ್ಗಾವಣೆ ಮಾಡಿಕೊಂಡಿರುವುದು ಬ್ಯಾಂಕ್ ಪರಿಶೀಲನೆ ವೇಳೆ ಪತ್ತೆಯಾಗಿದೆ. ಮಹಿಳೆಯ ಖಾತೆಯಿಂದ ಮಾರ್ಚ್ 4ರಿಂದ ಏಪ್ರಿಲ್ 21ರವರೆಗೆ ವಿವಿಧ ದಿನಾಂಕಗಳಲ್ಲಿ ಹಣ ಕಡಿತವಾಗಿದೆ. ಈ ಮಹಿಳೆಯ ಖಾತೆಯಿಂದ ಹಲವು ಅಪರಿಚಿತ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ ಎಂದು ಶಂಕಿಸಲಾಗಿದೆ. ವಿಶೇಷವೆಂದರೆ, ಹಣ ವರ್ಗಾವಣೆ ನಡೆದಿದ್ದರೂ ಮೊಬೈಲ್‌ಗೆ ಯಾವುದೇ OTP, ಅಲರ್ಟ್ ಸಂದೇಶ ಅಥವಾ ಅನುಮಾನಾಸ್ಪದ APK ಲಿಂಕ್ ಬಂದಿಲ್ಲ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
ಖಾತೆಯಿಂದ ಹಣ ಕಣ್ಮರೆ ಆತಂಕ :
ಸಾಮಾನ್ಯವಾಗಿ ಸೈಬರ್ ವಂಚಕರು OTP ಪಡೆದು ಅಥವಾ ನಕಲಿ ಲಿಂಕ್‌ಗಳನ್ನು ಕಳುಹಿಸಿ ಮೊಬೈಲ್ ಹ್ಯಾಕ್ ಮಾಡುವ ಪ್ರಕರಣಗಳು ಹೆಚ್ಚಾಗಿರುವ ಸಂದರ್ಭದಲ್ಲಿ, ಯಾವುದೇ ರೀತಿಯ ಎಚ್ಚರಿಕೆ ಇಲ್ಲದೆ ಬ್ಯಾಂಕ್ ಖಾತೆಯಿಂದ ಹಣ ಕಣ್ಮರೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದಾಗಲೇ ವಂಚನೆ ನಡೆದಿರುವುದು ಮಹಿಳೆಗೆ ತಿಳಿದಿದೆ. ಈ ಸಂಬಂಧ ಮಹಿಳೆ ಚಿಕ್ಕಮಗಳೂರು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಳೆದುಕೊಂಡ ಹಣವನ್ನು ವಾಪಸ್ ಕೊಡಿಸುವಂತೆ ಹಾಗೂ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಣ ವರ್ಗಾವಣೆಯಾದ ಖಾತೆಗಳ ಮಾಹಿತಿ ಸಂಗ್ರಹಿಸುತ್ತಿದ್ದು, ತಾಂತ್ರಿಕ ಪರಿಶೀಲನೆ ನಡೆಸುತ್ತಿದ್ದಾರೆ. ವಿವಿಧ ಬ್ಯಾಂಕ್ ಖಾತೆಗಳು ಮತ್ತು ಡಿಜಿಟಲ್ ವಾಲೆಟ್‌ಗಳ ಮೂಲಕ ಹಣ ವರ್ಗಾವಣೆ ಆಗಿರುವ ಶಂಕೆ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಸೈಬರ್ ವಂಚನೆ ಹೆಚ್ಚಳ
ಜಿಲ್ಲೆಯಲ್ಲಿ ಸೈಬರ್ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 29 ವಿವಿಧ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಸುಮಾರು 4 ರಿಂದ 5 ಕೋಟಿ ರೂಪಾಯಿವರೆಗೆ ಹಣ ಕಳೆದುಕೊಂಡಿರುವುದಾಗಿ ತಿಳಿದುಬಂದಿದೆ. ಈವರೆಗೆ ದಾಖಲಾಗಿರುವ ಪ್ರಕರಣಗಳಲ್ಲಿ ಹಣ ದ್ವಿಗುಣಗೊಳಿಸುವ ಆಮಿಷ, ಆನ್‌ಲೈನ್ ಹೂಡಿಕೆ ವಂಚನೆ, ನಕಲಿ ಲಿಂಕ್‌ಗಳು, ಬ್ಯಾಂಕ್ KYC ಅಪ್ಡೇಟ್ ಹೆಸರಿನಲ್ಲಿ ಮೋಸ ಮಾಡುವ ಪ್ರಕರಣಗಳೇ ಹೆಚ್ಚಾಗಿವೆ. ಈವರೆಗೆ ದಾಖಲಾಗಿರುವ 29 ಪ್ರಕರಣಗಳಲ್ಲಿ 6 ಪ್ರಕರಣಗಳನ್ನು ಮಾತ್ರ ಪೊಲೀಸರು ಭೇದಿಸಿದ್ದು, ಉಳಿದ ಪ್ರಕರಣಗಳ ತನಿಖೆ ಮುಂದುವರೆದಿದೆ.
ಸಾರ್ವಜನಿಕರಿಗೆ ಪೊಲೀಸರ ಎಚ್ಚರಿಕೆ
ಸೈಬರ್ ಠಾಣೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಅಪರಿಚಿತ ಕರೆಗಳು, ಹೂಡಿಕೆ ಆಮಿಷಗಳು, ಬ್ಯಾಂಕ್ ಮಾಹಿತಿ ಕೇಳುವ ಸಂದೇಶಗಳು ಹಾಗೂ ಅನುಮಾನಾಸ್ಪದ ಲಿಂಕ್‌ಗಳ ಬಗ್ಗೆ ಜಾಗರೂಕರಾಗಿರಲು ಸೂಚಿಸಿದ್ದಾರೆ. ಬ್ಯಾಂಕ್ ಖಾತೆಯಲ್ಲಿ ಯಾವುದೇ ಅನುಮಾನಾಸ್ಪದ ವ್ಯವಹಾರ ಕಂಡುಬಂದರೆ ತಕ್ಷಣ ಬ್ಯಾಂಕ್ ಮತ್ತು ಸೈಬರ್ ಸಹಾಯವಾಣಿ 1930ಕ್ಕೆ ಸಂಪರ್ಕಿಸಲು ಮನವಿ ಮಾಡಿದ್ದಾರೆ.


