ಭಟ್ಕಳ ದುರಂತದಲ್ಲಿ ಮಡಿದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ದುರಂತಕ್ಕೆ ಕಾರಣವೇನು? ಈ ಕುರಿತು ರಕ್ಷಣಾ ತಂಡ ಮಾಹಿತಿ ಬಹಿರಂಗಪಡಿಸಿದೆ. ಒಬ್ಬರಿಗೆ ಈಜು ಬಂದರೂ ಎಲ್ಲರ ರಕ್ಷಣೆ ಮಾಡಬಹುದಿತ್ತು ಎಂದಿದ್ದಾರೆ.
ಭಟ್ಕಳ (ಮೇ.24) ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ಹೋಗಿ ಮುಳುಗಿ ಮೃತಪಟ್ಟ ಘಟನೆ ರಾಜ್ಯದ ಜನತೆಗೆ ಶಾಕ್ ನೀಡಿದೆ. ಒಂದೇ ಕುಟುಂಬದ 10 ಜನರು ಸಾವು ಕಂಡಿದ್ದಾರೆ. ಆರಂಭದಲ್ಲಿ 8 ಮಂದಿ ಮೃತಪಟ್ಟಿದ್ದರು. ಇನ್ನುಳಿದವರು ನಾಪತ್ತೆಯಾಗಿದ್ದರು. ತೀವ್ರ ಶೋಧಕಾರ್ಯದ ಬಳಿಕ ಇತರರ ಮೃತದೇಹ ಪತ್ತೆಯಾಗಿದೆ. ತಟ್ಟೆಹಕ್ಕಲು ನದಿ ದುರಂತ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಗಂಗೊಳ್ಳಿ ರಕ್ಷಣಾ ತಂಡ ಘಟನೆಗೆ ಕಾರಣ ಬಿಚ್ಚಿಟ್ಟಿದ್ದಾರೆ.

ಏರಿಳಿತ ಅನುಭವ ಕೊರತೆಯಿಂದ ದುರಂತ
ಕಪ್ಪೆ ಚಿಪ್ಪು ಹೆಕ್ಕಲು ಒಂದೇ ಕುಟುಂಬದ ಸದಸ್ಯರೆಲ್ಲರು ನದಿಗೆ ಇಳಿದಿದ್ದಾರೆ. ಸಮುದ್ರಕ್ಕೆ ಸೇರುವ ನೀರಿನ ಏರಿಳಿತದ ಅನುಭವ ಯಾರೊಬ್ಬರಿಗೂ ಇರಲಿಲ್ಲ.ದುರಂತಕ್ಕೆ ಮುಖ್ಯ ಎರಡು ಕಾರಣಗಳಲ್ಲಿ ಪ್ರಮುಖ ಕಾರಣ ನದಿಯ ಏರಿಳಿತದ ಅನುಭವ ಇರಲಿಲ್ಲ ಎಂದು ಕುಂದಾಪುರದ ಗಂಗೊಳ್ಳಿಯ ದಿನೇಶ್ ಖಾರ್ವಿ ನೇತೃತ್ವದ ರಕ್ಷಣಾ ತಂಡ ಹೇಳಿದೆ. ನದಿಯ ಇಳಿತದ ಸಂದರ್ಭದಲ್ಲಿ ಕಪ್ಪೆ ಚಿಪ್ಪು ಹೆಕ್ಕಲು ನದಿಗೆ ಇಳಿದಿದ್ದಾರೆ. ಆದರೆ ಕೆಲ ಹೊತ್ತಲ್ಲೇ ನದಿ ಉಬ್ಬರಗೊಂಡಿದೆ. ನೀರಿನ ಪ್ರಮಾಣ ಏಕಾಏಕಿ ಏರಿಕೆಯಾಗಿದೆ. ಹಿಂದಿರುಗುವ ದಾರಿ ತಪ್ಪಿ ಆಳಕ್ಕೆ ತೆರಳಿದ್ದಾರೆ. ಇದು ದುರಂತದ ಮೊದಲ ಕಾರಣ ಎಂದಿದ್ದಾರೆ.
ಒಬ್ಬರಿಗೆ ಈಜು ಬಂದರೆ ಪರಿಸ್ಥಿತಿ ಬೇರೆ ಇರುತ್ತಿತ್ತು
ದಿನೇಶ್ ಖಾರ್ವಿ ತಂಡದ ಪ್ರಕಾರ ಒಬ್ಬರಿಗೆ ಈಜು ಬಂದರೆ ಸಾಕಿತ್ತು. ಎಲ್ಲರನ್ನು ರಕ್ಷಣೆ ಮಾಡಬಹುದಿತ್ತು. ಆದರೆ ಈ ಕುಟುಂಬ ಸದಸ್ಯರು ನೀರು ತಗ್ಗಿದ್ದಾಗ ತೆರಳಿದ್ದಾರೆ. ಉಬ್ಬರ ಹೆಚ್ಚಾದಾಗ ಮರಳುವ ದಾರಿ ತಪ್ಪಿದೆ. ಇತ್ತ ಈಜಲು ಬಂದಿಲ್ಲ. ಹೀಗಾಗಿ ದುರಂತಕ್ಕೆ ಸುಲಿಕಿದ್ದಾರೆ ಎಂದು ದಿನೇಶ್ ಖಾರ್ವಿ ಹೇಳಿದ್ದಾರೆ.
ಸ್ವಯಂಸೇವಕರಾಗಿ ರಕ್ಷಣಾ ಕಾರ್ಯ ಮಾಡಿದ ದಿನೇಶ ಖಾರ್ವಿ ತಂಡ
ಮಾಹಿತಿ ತಿಳಿಯುತ್ತಿದ್ದಂತೆ ಗಂಗೊಳ್ಳಿಯ ದಿನೇಶ್ ಖಾರ್ವಿ ರಕ್ಷಣಾ ತಂಡ ಸ್ವಯಂ ಸೇವಕರಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಸ್ಥಳೀಯ ರಕ್ಷಣಾ ತಂಡದ ಜೊತೆ ಸೇರಿ ಶೋಧ ಕಾರ್ಯ ನಡೆಸಿತ್ತು.
ನಾಪತ್ತೆಯಾಗಿದ್ದ ಇಬ್ಬರ ಪೈಕಿ ಒಬ್ಬರ ಮೃತದೇಹ ಪತ್ತೆ
ಭಟ್ಕಳ ದುರಂತದಲ್ಲಿ ನಾಪತ್ತೆಯಾಗಿದ್ದವರ ಇಬ್ಬರ ಪೈಕಿ ನಾಗರತ್ನಾ ನಾಯ್ಕ ಮೃತದೇಹ ಪತ್ತೆಯಾಗಿದೆ. ತಟ್ಟೆಹಕ್ಕಲು ನದಿಯಲ್ಲೆ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ಇದರೊಂದಿಗೆ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಮತ್ತೊರ್ವರಿಗಾಗಿ ಶೋಧಕಾರ್ಯ ಮುಂದುವರಿದಿದೆ.


