ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು, 'ಕಾಕ್ರೋಚ್ ಜನತಾ ಪಾರ್ಟಿ'ಯಿಂದ ಕಾಂಗ್ರೆಸ್‌ಗೆ ಭಯವಾಗಿದೆ, ಬಿಜೆಪಿಗಲ್ಲ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ, ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸುವ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿ (ಮೇ.24): ಕಾಕ್ರೋಚ್ ಜನತಾ ಪಾರ್ಟಿ(Cockroach Janata Party) ದಿಢೀರ್ ಸೃಷ್ಟಿಯಿಂದ ವಿಚಲಿತ ಆಗಿರುವುದು ಕಾಂಗ್ರೆಸ್(Congress) ಪಕ್ಷವೇ ಹೊರತು ಬಿಜೆಪಿ(BJP ) ಅಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು.

ಮಾದ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಅದಾಗಲೇ ಸಂಪೂರ್ಣ ಕಳೆದು ಹೋಗಿದೆ. ಇನ್ನು ಕಾಕ್ರೋಚ್ ತನ್ನನ್ನೆಲ್ಲಿ ಹುದುಗಿಸುತ್ತದೋ? ಎಂಬ ಭಯ ಅವರದು ಎಂದು ಚಾಟಿ ಬೀಸಿದರು.
ಯಾವುದೇ ಮೂಲಗಳಿಂದ ದೇಶದ ಭದ್ರತೆಗೆ ಮತ್ತು ಕಾನೂನು ಸುವ್ಯವಸ್ಥೆಗೆ, ನಾಗರಿಕರಿಗೆ ಧಕ್ಕೆಯಾದರೆ ಗಮನಿಸಬೇಕಾದದ್ದು ಸರ್ಕಾರದ ಕರ್ತವ್ಯ. ಅದರಂತೆ ಸರ್ಕಾರದ ಸಂಬಂಧಿತ ಇಲಾಖೆ ಕ್ರಮ ಕೈಗೊಂಡಿದೆ. ಇದರಲ್ಲಿ ಬಿಜೆಪಿ ವಿಚಲಿತ ಆಗುವ ಪ್ರಶ್ನೆಯೇ ಇಲ್ಲ ಎಂದರು
ಪ್ರತ್ಯೇಕ ಪಾಲಿಕೆಗೆ ಬೆಂಬಲ: ಜೋಶಿ
16ನೇ ಹಣಕಾಸು ಆಯೋಗದಂತೆ ದೊಡ್ಡ ಮಹಾನಗರ ಹೆಚ್ಚು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ಬಿಜೆಪಿಯದ್ದಾಗಿತ್ತು. ಆದರೆ ಧಾರವಾಡಿಗರು ಪ್ರತ್ಯೇಕ ಪಾಲಿಕೆ ಬಗ್ಗೆ ಭಾವನಾತ್ಮಕವಾಗಿ ಬೇಕು ಎನ್ನುತ್ತಿದ್ದಾರೆ. ಹೀಗಾಗಿ, ಅವರ ಹೋರಾಟಕ್ಕೆ ತಮ್ಮದು ಬೆಂಬಲ ಇದೆ. ಪ್ರತ್ಯೇಕ ಪಾಲಿಕೆ ಆಗಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು,.
ಈ ಸಂಬಂಧ ರಾಜ್ಯಪಾಲರನ್ನು ಕಂಡು ಪ್ರತ್ಯೇಕ ಪಾಲಿಕೆಯಾಗಲಿ ಎಂದು ಮನವಿ ಸಲ್ಲಿಸಿದ್ದೇವೆ. ಭಾವನಾತ್ಮಕ ವಿಷಯವಾಗಿರುವುದರಿಂದ ಆದಷ್ಟು ಬೇಗ ಪೆಂಡಿಂಗ್ ಇರುವ ಪ್ರಸ್ತಾವನೆ ಕ್ಲಿಯರ್ ಮಾಡಲು ಮನವಿ ಮಾಡಿದ್ದೇವೆ. ಆದರೆ, ಕಾಂಗ್ರೆಸ್ ನಾಯಕರು ಈ ವಿಚಾರವಾಗಿ ರಾಜ್ಯಪಾಲರ ಬಳಿ ಹೋಗಲಿಲ್ಲ. ಇದೀಗ ಕಾಂಗ್ರೆಸ್ ಇಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು.


