ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಘೋಷಿಸಿದ್ದ ಪರಿಹಾರ ಮೊತ್ತವನ್ನು 10 ಲಕ್ಷದಿಂದ 25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹೆಚ್ಚಳಕ್ಕೆ ಆದೇಶ ನೀಡಿದ್ದಾರೆ.

ಬೆಂಗಳೂರು (ಜೂ.8) : ಆರ್‌ಸಿಬಿ ವಿಜಯೋತ್ಸವ ಸಮಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತರಾದ ಎಲ್ಲಾ 11 ಮಂದಿ ಕುಟುಂಬದವರಿಗೆ ಘೋಷಿಸಿದ್ದ ಪರಿಹಾರ ಮೊತ್ತವನ್ನು ತಲಾ 25 ಲಕ್ಷ ರು.ಗಳಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಕಾರ್ಯದರ್ಶಿ ಅವರಿಗೆ ಸೂಚಿಸಿದ್ದಾರೆ.

ಕಾಲ್ತುಳಿತ ದುರ್ಘಟನೆ ನಡೆದ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತರ ಕುಟುಂಬದವರಿಗೆ ತಲಾ 10 ಲಕ್ಷ ರು. ಪರಿಹಾರ ಘೋಷಿಸಿದ್ದರು. ಇದೀಗ ಈ ಪರಿಹಾರ ಮೊತ್ತವನ್ನು ತಲಾ 25 ಲಕ್ಷ ರು.ಗಳಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಅವರು ಶನಿವಾರ ಆದೇಶಿಸಿದ್ದಾರೆ.

ಸರ್ಕಾರದ ಜೊತೆಗೆ ಮೃತರ ಕುಟುಂಬಗಳಿಗೆ ಈಗಾಗಲೇ ಆರ್‌ಸಿಬಿ ಪ್ರಾಂಚೈಸಿ ತಲಾ 10 ಲಕ್ಷ ರು. ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ನವರು ತಲಾ 5 ಲಕ್ಷ ರು. ಪರಿಹಾರ ಘೋಷಿಸಿದೆ.

ಘಟನೆ ಬಗ್ಗೆ ತೀವ್ರವಾಗಿ ಮನನೊಂದಿರುವ ಮುಖ್ಯಮಂತ್ರಿ ಅವರು, ಮೃತರ ಕುಟುಂಬಗಳಿಗೆ ಸರ್ಕಾರ ಎಷ್ಟೇ ಸಾಂತ್ವನ ಹೇಳಬಹುದು. ಸರ್ಕಾರ ನಿಮ್ಮೊಂದಿಗೆ ಇರುತ್ತದೆ ಎಂದು ಹೇಳಬಹುದು. ಇದರಿಂದ ಮಾನಸಿಕವಾಗಿ ಕೊಂಚ ಸಮಾಧಾನ ಆಗಬಹುದಾದರೂ ಭವಿಷ್ಯದ ಜೀವನಕ್ಕೆ ಆರ್ಥಿಕವಾಗಿ ನೆರವಾಗಲು ಹೆಚ್ಚಿನ ಪರಿಹಾರ ನೀಡುವುದು ಸರಿಯಾದ ಮಾರ್ಗ ಎಂದು ಪರಿಹಾರ ಹೆಚ್ಚಿಸಲಾಗಿದೆ.