ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮಾತು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ. ಅವರು ಬೆಳಗ್ಗೆ ಒಂದು, ರಾತ್ರಿ ಇನ್ನೊಂದು ಮಾತನಾಡುತ್ತಾರೆ. ಅವರು ಮೊದಲು ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಲಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.
ಬೆಂಗಳೂರು (ಜೂ.08): ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮಾತು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ. ಅವರು ಬೆಳಗ್ಗೆ ಒಂದು, ರಾತ್ರಿ ಇನ್ನೊಂದು ಮಾತನಾಡುತ್ತಾರೆ. ಅವರು ಮೊದಲು ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಲಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಶನಿವಾರ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ, ಮಾತುಗಳನ್ನು ತಿರುಗಿಸುವುದರಲ್ಲಿ ನಿಸ್ಸೀಮರು. ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಕುಮಾರಸ್ವಾಮಿ ಅವರ ಹೇಳಿಕೆಗಳನ್ನು ಗಮನಿಸಿದ್ದೇನೆ. ಅವರ ಮಾತು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ.
ಬೆಳಗ್ಗೆಯೊಂದು, ರಾತ್ರಿಯೊಂದು ಮಾತನಾಡುತ್ತಾರೆ. ಅವರು ಒತ್ತಡದಲ್ಲಿದ್ದಾರೆ. ಆರೋಗ್ಯ ಸರಿಯಿಲ್ಲ. ಮೊದಲು ಆರೋಗ್ಯದ ಕಡೆ ಗಮನಹರಿಸಿ, ರಾಷ್ಟ್ರ ಸೇವೆ ಮಾಡಲಿ ಎಂದರು. ಕಾಲ್ತುಳಿತ ದುರಂತದಲ್ಲಿ ರಾಜ್ಯ ಸರ್ಕಾರ ಪಲಾಯನ ಮಾಡುತ್ತಿಲ್ಲ. ಇತ್ತೀಚೆಗೆ ಮಹಾ ಕುಂಭಮೇಳದಲ್ಲಿ ಕಾಲ್ತುಳಿತದಿಂದ 3 ಸಾವಿರ ಜನ ಸತ್ತು ಹೋದರು. ಅದನ್ನು ಅಲ್ಲಿನ ಸರ್ಕಾರ ಮುಚ್ಚಿ ಹಾಕಲು ಪ್ರಯತ್ನಿಸಿತು. ಆ ದುರಂತ ಯಾರ ಪ್ರಾಯೋಜಿತ ಕಾರ್ಯಕ್ರಮವಾಗಿತ್ತು? ಬಿಜೆಪಿ ಪಕ್ಷ, ಪ್ರಧಾನಿ ಅಥವಾ ಉತ್ತರ ಪ್ರದೇಶ ಮುಖ್ಯಮಂತ್ರಿಗಳದ್ದೇ ಎಂದು ಪ್ರಶ್ನಿಸಿದರು. ಕಾಲ್ತುಳಿತ ದುರಂತದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಾ ರಾಜಕೀಯ ಮಾಡಬಾರದು.
ಅದರ ಚರ್ಚೆ ನಿಲ್ಲಿಸಿ, ರಾಜ್ಯದ ಪ್ರಗತಿ ಕುರಿತು ಚಿಂತಿಸಬೇಕು. ವಿರೋಧ ಪಕ್ಷಗಳು ಸರ್ಕಾರದ ಲೋಪದೋಷಗಳಿದ್ದರೆ ಸಲಹೆ ನೀಡಲಿ. ಅದನ್ನು ಬಿಟ್ಟು ಅವರು ರಾಜೀನಾಮೆ ನೀಡಲಿ, ಇವರು ನೀಡಲಿ ಎಂದು ಹೇಳುತ್ತಿದ್ದರೆ ಆಗುವುದಿಲ್ಲ ಎಂದು ಹೇಳಿದರು. ಬಿಜೆಪಿ ನಾಯಕರ ಮಂಗಳೂರು ಚಲೋ ಕುರಿತು ಪ್ರತಿಕ್ರಿಯಿಸಿ, ಮಂಗಳೂರಿಗೆ ತನ್ನದೇ ಆದ ಇತಿಹಾಸವಿದೆ. ಜನನಾಯಕರು ಸಮಾಜದಲ್ಲಿ ಉತ್ತಮ ವಾತಾವರಣ ಸೃಷ್ಟಿಸಬೇಕು. ಜತೆಗೆ ಅಲ್ಲಿನ ಜನರ ಆಶೋತ್ತರಗಳನ್ನು ಈಡೇರಿಸುವ ಕೆಲಸ ಮಾಡಬೇಕು. ರಾಜಕೀಯಕ್ಕಾಗಿ ಭಾವನಾತ್ಮಕವಾಗಿ ಜನರನ್ನು ಎತ್ತಿಕಟ್ಟುವುದು ಸರಿಯಲ್ಲ. ಬಿಜೆಪಿಯ ನಿಲುವುಗಳು ಸಾಮಾಜದ ಆರೋಗ್ಯಕ್ಕೆ ಮಾರಕವಾಗಿವೆ ಎಂದು ಅಭಿಪ್ರಾಯಪಟ್ಟರು.
ಕುಮಾರಸ್ವಾಮಿರವರು ಯಾವತ್ತೂ ಸತ್ತವರ ಮೇಲೆ ರಾಜಕಾರಣ ಮಾಡಿಕೊಂಡು ಬೆಳೆದು ಬಂದವರು. ಅವರಿಗೆ ಯಾವತ್ತೂ ಸಾರ್ವಜನಿಕ ಹಿತಾಸಕ್ತಿ ಬಗ್ಗೆ ಗೌರವ ಇಲ್ಲ. ಇವತ್ತೂ ರಾಜಕೀಯಕ್ಕಾಗಿ ಆರೋಪ ಮಾಡುತ್ತಿದ್ದಾರೆ. ಸರ್ಕಾರದ ಕಾರ್ಯಕ್ರಮ ಇದ್ದಿದ್ದರಿಂದ ಡಿ.ಕೆ.ಶಿವಕುಮಾರ್ ಅಲ್ಲಿ ಹೋಗಿದ್ದರು ಎಂದು ತಿಳಿಸಿದರು. ವಿಧಾನಸೌಧದಲ್ಲಿ ಕಾರ್ಯಕ್ರಮ ಮುಗಿದ ಬಳಿಕ ಕಾಲ್ತುಳಿತ ಆಗಿದೆ ಅಂತ ಗೊತ್ತಾಯಿತು. ಹಾಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಕಾರ್ಯಕ್ರಮ ವೈಂಡಪ್ ಮಾಡಿಸಲು ಡಿ.ಕೆ.ಶಿವಕುಮಾರ್ ಹೋಗಿದ್ದರು. ಬಳಿಕ 10 ನಿಮಿಷದಲ್ಲಿ ಕಾರ್ಯಕ್ರಮ ಮುಗಿಸಲಾಗಿದೆ. ರಾಜಕೀಯವಾಗಿ ಏನೋ ಹೇಳಬೇಕು ಕುಮಾರಸ್ವಾಮಿ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
